ಖರಗ್ಪುರ: ಬಂಗಾಲದ ಅಂಗಳದಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ಶನಿವಾರ ಟಿಎಂಸಿ ಸೇರಿದಂತೆ ವಿಪಕ್ಷಗಳ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. “ಶುಕ್ರವಾರ ರಾತ್ರಿ 50-55 ನಿಮಿಷ ಕಾಲ ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ಗಳು ಬಂದ್ ಆಗಿದ್ದಾಗ ಎಲ್ಲರಿಗೂ ಚಿಂತೆಯಾಗಿತ್ತು. ಆದರೆ ಬಂಗಾಲದಲ್ಲಿ ಕಳೆದ 50-55 ವರ್ಷಗಳಿಂದ ಅಭಿವೃದ್ಧಿ ಮತ್ತು ಕನಸುಗಳೇ ಬಂದ್ ಆಗಿವೆ. ಮೊದಲಿಗೆ ಕಾಂಗ್ರೆಸ್, ಅನಂತರ ಎಡಪಕ್ಷಗಳು, ಈಗ ಟಿಎಂಸಿ ರಾಜ್ಯದ ಅಭಿವೃದ್ಧಿಗೇ ಅಡ್ಡಿ ಆಗಿದೆ’ ಎಂದು ವಾಗ್ಬಾಣ ಬಿಟ್ಟರು.
ಮೊದಲ ಹಂತಕ್ಕೆ ಸಜ್ಜಾದ ಖರಗ್ಪುರದಲ್ಲಿ ಬಿಜೆಪಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, “ಮಮತಾ ದೀದಿ ಬಂಗಾಲದಲ್ಲಿ ಕ್ರೌರ್ಯದ ಶಾಲೆ ನಡೆಸುತ್ತಿದ್ದಾರೆ. ಇಲ್ಲಿನ ಯುವಕರನ್ನು ನಿರುದ್ಯೋಗಕ್ಕೆ ತಳ್ಳಿ ಅವರನ್ನೇ ವಿದ್ಯಾರ್ಥಿಗಳನ್ನಾಗಿ ಮಾಡಿಕೊಂಡಿದ್ದಾರೆ. ಸುಲಿಗೆ, ಅನುದಾನ ಕಡಿತ, ಸ್ವಜನಪಕ್ಷಪಾತ, ಅರಾಜಕತೆ- ಇವು ದೀದಿ ಶಾಲೆಯ ಪಠ್ಯಗಳು. 2018ರಿಂದ ಟಿಎಂಸಿ ಗೂಂಡಾಗಳು ಬಿಜೆಪಿಯ 130 ಕಾರ್ಯಕರ್ತರನ್ನು ನಿರ್ದಯವಾಗಿ ಕಗ್ಗೊಲೆಗೈದಿದ್ದಾರೆ’ ಎಂದು ಆರೋಪಿಸಿದರು.
ದೀದಿ ತಡೆಗೋಡೆ: “ಕೇಂದ್ರದ ಎಲ್ಲ ಅಭಿವೃದ್ಧಿಗಳಿಗೂ ಮಮತಾ ದೀದಿ ತಡೆಗೋಡೆ ಯಂತೆ ನಿಂತಿದ್ದಾರೆ. ಆಯುಷ್ಮಾನ್, ಕಿಸಾನ್ ಸಮ್ಮಾನ್ ನಿಧಿಯನ್ನೂ ಅವರು ಬಂಗಾಲದ ಒಳಕ್ಕೆ ಪ್ರವೇಶಿಸಲು ಬಿಡಲಿಲ್ಲ. ಇಷ್ಟಿದ್ದರೂ ಖೇಲಾ ಹೋಬ್ (ಆಟ ಸಾಗಿದೆ) ಎಂಬ ಸ್ಲೋಗನ್‌ಗೆ ಜೋತು ಬಿದ್ದಿದ್ದಾರೆ. ದೀದಿ… ನೆನಪಿಟ್ಟುಕೊಳ್ಳಿ… ಆಟ ಶುರುವಲ್ಲ, ಈಗ ಮುಗಿದಿದೆ. ಇನ್ನು ಅಭಿವೃದ್ಧಿ ಇಲ್ಲಿ ಶುರುವಾಗಲಿದೆ’ ಎಂದು ಟಿಎಂಸಿ ನಾಯಕಿಗೆ ಸವಾಲೆಸೆದರು.
ಅಂಬೇಡ್ಕರ್ ಪ್ರಸ್ತಾವ: “ಬಾಬಾಸಾಹೇಬ್ ಅಂಬೇಡ್ಕರ್ ಅವರು ಎಲ್ಲ ನಾಗರಿಕರಿಗೆ ಮತದಾನದ ಹಕ್ಕು ನೀಡಿದರು. ಆದರೆ ಆ ಹಕ್ಕನ್ನೇ ಮಮತಾ ಕಸಿದುಕೊಂಡಿದ್ದಾರೆ. 2018ರ ಪಂಚಾಯತ್ ಚುನಾವಣೆಯಲ್ಲಿ ಇದನ್ನು ಕಂಡು ಬೇಸರವಾಗಿತ್ತು. ಆದರೆ ಈ ಚುನಾವಣೆಯಲ್ಲಿ ಅಂಥ ಸಂಘರ್ಷ ಆಗಲು ಬಂಗಾಲದ ಜನತೆ ದೀದಿಗೆ ಅವಕಾಶ ಮಾಡಿಕೊಡಬಾರದು. ಪೊಲೀಸರು ಮತ್ತು ಆಡಳಿತ, ಸಂವಿಧಾನ ನೆನಪಿಟ್ಟುಕೊಂಡು ಕ್ರಮ ಜರಗಿಸಬೇಕು’ ಎಂದು ಒತ್ತಾಯಿಸಿದರು.
ಆಡಳಿತ ವಿಶ್ವಾಸ: 70 ವರ್ಷಗಳಿಂದ ಈ ನೆಲವನ್ನು ಲೂಟಿ ಮಾಡುತ್ತಿರುವವನ್ನು ಕಿತ್ತೆಸೆದು, ಬಂಗಾಲದಲ್ಲಿ ಈ ಬಾರಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಬಂಗಾಲವನ್ನು ನೈಜ ಪರಿವರ್ತನೆಯ ದಿಕ್ಕಿಗೆ ನಾವು ಕೊಂಡೊಯ್ಯಲಿದ್ದೇವೆ. ನಮಗೆ 5 ವರ್ಷ ಅವಕಾಶ ಕೊಡಿ. ನಿಮಗಾಗಿ ನಾವು ಜೀವನ ಮುಡಿಪಾಗಿಡುತ್ತೇವೆ. ನಿಮ್ಮ ಸಂಕಷ್ಟಗಳನ್ನು ನಿವಾರಿಸಲು ಹಗಲಿರುಳು ಶ್ರಮಿಸುತ್ತೇವೆ’ ಎಂದು ವಾಗ್ಧಾನ ನೀಡಿದರು.
ಚಾಯ್‌ವಾಲಾ ಅಲ್ಲದೆ ನಿಮ್ಮ ಕಷ್ಟ ಬೇರ್ಯಾರು ಬಲ್ಲರು? :
“ಚಹಾದ ನಾಡು’ ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿ “ಟೀ’ಯನ್ನೇ ಟೀಕಾಸ್ತ್ರ ಮಾಡಿಕೊಂಡಿದ್ದರು. ಚಬುವಾ ಕ್ಷೇತ್ರದಲ್ಲಿ ಎನ್‌ಡಿಎ ಪರವಾಗಿ ರ್ಯಾಲಿಯಲ್ಲಿ ಮಾಡಿದ ಭಾಷಣದ ಹೈಲೈಟ್ಸ್ ಇಲ್ಲಿದೆ…
- ಜಾಗತಿಕವಾಗಿ ಚಹಾದ ವಿರುದ್ಧ ಅಪಪ್ರಚಾರ ಮಾಡಿದವರ ಬೆನ್ನಿಗೆ 50-55 ವರ್ಷಗಳಿಂದ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ನಿಂತಿರೋದು
ವಿಪರ್ಯಾಸ. ಇದರಿಂದ ನಿಮಗೆ ದುಃಖವಾಗಿದೆ ಎಂದು ನನಗೆ ಗೊತ್ತು. ಚಾಯ್‌ವಾಲಾನಿಗಲ್ಲದೆ, ನಿಮ್ಮ ಸಂಕಟ ಬೇರ್ಯಾರಿಗೆ ಗೊತ್ತಾಗುತ್ತೆ?
- ಸೋರಿಕೆಯಾದ ಟೂಲ್‌ಕಿಟ್‌ನಲ್ಲಿ ಅಸ್ಸಾಂನ ಚಹಾವನ್ನು ಅವಮಾನಿಸುವ ಪಿತೂರಿಗಳಿದ್ದವು. ದೇಶದ್ರೋಹದ ಟೂಲ್‌ಕಿಟ್ ತಯಾರಿಸಿದವರ ಬೆನ್ನಿಗೇ ಕಾಂಗ್ರೆಸ್ ನಿಂತಿದೆ. ಇಂಥ ಕಾಂಗ್ರೆಸ್ ಅನ್ನು ನಾವು ಕ್ಷಮಿಸಬೇಕೇ?
- ಶ್ರೀಲಂಕಾ, ಥೈವಾನ್‌ನ ಚಹಾದ ತೋಟಗಳಲ್ಲಿ ನಿಂತು ಕಾಂಗ್ರೆಸ್ ನಾಯಕ ಫೋಟೋಗಳನ್ನು ಟ್ವಿಟರಿನಲ್ಲಿ ಪೋಸ್ಟ್ ಮಾಡಿದ್ದಾರೆ. ಆಕಸ್ಮಿಕ ಯಾವತ್ತೂ ಒಂದೇ ಬಾರಿ ಆಗೋದು. ಅದೇ ತಪ್ಪು ಪುನರಾವರ್ತನೆಯಾದರೆ, ಅವರ ಮಾನಸಿಕತೆಯನ್ನು ಇಂಥ ಪೋಸ್ಟ್‌ಗಳು ಎತ್ತಿಹಿಡಿಯುತ್ತವೆ. ಅಸ್ಸಾಂನ ಟೀ ತೋಟದ ಸೌಂದರ್ಯಕ್ಕೆ ರಾಹುಲ್ ಮಾಡಿದ ಅವಮಾನ ಇದು.
ಪಶ್ಚಿಮ ಬಂಗಾಲದಲ್ಲಿ ಹೋದಲ್ಲೆಲ್ಲ ಕಡೆಗಳಲ್ಲೂ ಬಿಜೆಪಿಯ ಅಲೆಯೇ ಎದ್ದು ಕಾಣಿಸುತ್ತಿದೆ. ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಇಲ್ಲಿ ಸರಕಾರ ರಚನೆ ಮಾಡಲಿದೆ.
-ಅರವಿಂದ ಲಿಂಬಾವಳಿ, ರಾಜ್ಯ ಉಸ್ತುವಾರಿ
ಬಿಜೆಪಿಗೆ ತಮಿಳುನಾಡಿನಲ್ಲಿ ಬೇರುಗಳೇ ಇಲ್ಲ. ಇಲ್ಲಿ ಎಐಎಡಿಎಂಕೆ ಗೆದ್ದರೆ ಬಿಜೆಪಿ ಗೆದ್ದಂತೆ. ಹೀಗಾಗಿ ಬಿಜೆಪಿಯ ಗೆಲುವು ತಮಿಳುನಾಡಿಗೆ ಮಾರಕ.
-ಎಂ.ಕೆ. ಸ್ಟಾಲಿನ್, ಡಿಎಂಕೆ ನಾಯಕ
ಪ್ರಧಾನಿ ಮೋದಿ ಸೋನಾರ್ ಬಾಂಗ್ಲಾ (ಬಂಗಾರದ ಬಂಗಾಲ) ಮಾಡ್ತೀನಿ ಅಂತಿದ್ದಾರೆ. ನೀವೇಕೆ “ಬಂಗಾರದ ಭಾರತ’ ಮಾಡ್ಲಿಲ್ಲ? “ಬಂಗಾರದ ತ್ರಿಪುರಾ’ ಮಾಡ್ಲಿಲ್ಲ?
– ಅಭಿಷೇಕ್ ಬ್ಯಾನರ್ಜಿ, ಟಿಎಂಸಿ ನಾಯಕ
ಕೇರಳದಲ್ಲಿ ಎಲ್‌ಡಿಎಫ್, ಯುಡಿಎಫ್ ಅಣಕು ಯುದ್ಧಗಳಲ್ಲಿ ತೊಡಗಿಸಿಕೊಂಡು, ಜನರ ಕಣ್ಣಿಗೆ ಮೋಸ ಮಾಡುತ್ತಿವೆ. ಇವರಿಬ್ಬರನ್ನೂ ಎಲ್‌ಯುಡಿಎಫ್ ಎಂದೇ ಭಾವಿಸಬೇಕು.
-ಮೀನಾಕ್ಷಿ ಲೇಖೀ, ಬಿಜೆಪಿ ಧುರೀಣೆ
ಚುನಾವಣೆ ಚುರುಮುರಿ :
ಟ್ವೆಂಟಿ-20 ತೆಕ್ಕೆಗೆ ಚಾಂಡಿ ಅಳಿಯ :
ಟ್ವಿಟಿ-ಟ್ವೆಂಟಿ ಕ್ರಿಕೆಟ್ ಮಾತ್ರ ಸೀಮಿತವಾಗಿಲ್ಲ. ಅದು ರಾಜಕೀಯಕ್ಕೆ ಈಗಾಗಲೇ ಕಾಲಿಟ್ಟಿದೆ. ಕೇರಳದ ಮಾಜಿ ಸಿಎಂ ಊಮ್ಮನ್ ಚಾಂಡಿಯವರ ಅಳಿಯ ವರ್ಗೀಸ್ ಜಾರ್ಜ್ ಟ್ವೆಂಟಿ-20 ಎಂಬ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಶನಿವಾರ ಕೊಚ್ಚಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಜಾರ್ಜ್ ಪಕ್ಷ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‌ನ ಹಿರಿಯ ಮುಖಂಡರೂ ಆಗಿರುವ ಊಮ್ಮನ್ ಚಾಂಡಿ ಅವರಿಗೆ ಅಳಿಯನ ನಿರ್ಧಾರ ಏನ್ನನಿಸಿದೆಯೋ ಎಂದು ಗೊತ್ತಾಗಿಲ್ಲ ಮತ್ತು ಅವರು ಅದಕ್ಕೆ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಅಂದ ಹಾಗೆ ವರ್ಗೀಸ್ ಜಾರ್ಜ್ ವಿದೇಶದಲ್ಲಿ ಕಂಪೆನಿಯೊಂದರ ಸಿಇಒ ಆಗಿದ್ದರು. ಎರ್ನಾಕುಳಂನಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಈ ಪಕ್ಷ ಕೆಲವು ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.