Advertisement

ಪೂರ್ತಿ ಪಂದ್ಯದ ನಿರೀಕ್ಷೆಯಲ್ಲಿ ಅಭಿಮಾನಿಗಳು

08:20 AM Aug 12, 2019 | Team Udayavani |

ಪೋರ್ಟ್‌ ಆಫ್ ಸ್ಪೇನ್‌ (ಟ್ರಿನಿಡಾಡ್‌ ಆ್ಯಂಡ್‌ ಟೊಬಾಗೊ): ಭಾರತ-ವೆಸ್ಟ್‌ ಇಂಡೀಸ್‌ ನಡುವಿನ ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದುಗೊಂಡ ನಿರಾಸೆಯಲ್ಲಿರುವ ಅಭಿಮಾನಿಗಳಿಗೆ ಪೋರ್ಟ್‌ ಆಫ್ ಸ್ಪೇನ್‌ನಿಂದ ಸಿಹಿ ಸುದ್ದಿ ಬಂದಿದೆ. ರವಿವಾರ ಇಲ್ಲಿ ದ್ವಿತೀಯ ಮುಖಾಮುಖೀ ಸಾಗಲಿದ್ದು, ಪ್ರತಿಕೂಲ ಹವಾಮಾನದ ಭೀತಿ ಎಲ್ಲ ಎನ್ನಲಾಗಿದೆ.

Advertisement

ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಂಡ ಹುರುಪಿನಲ್ಲಿದ್ದ ಟೀಮ್‌ ಇಂಡಿಯಾ, ಏಕದಿನದಲ್ಲೂ ಗೆಲುವಿನ ಆರಂಭದ ಕನಸು ಕಾಣುತ್ತಿತ್ತು. ಇನ್ನೊಂದೆಡೆ ವೆಸ್ಟ್‌ ಇಂಡೀಸ್‌ ಸೇಡಿನ ಯೋಜನೆಯಲ್ಲಿತ್ತು. ಆದರೆ ಪ್ರೊವಿಡೆನ್ಸ್‌ನಲ್ಲಿ ಕಾಡಿದ ಮಳೆ ಯಾವುದಕ್ಕೂ ಅವಕಾಶ ಕೊಡಲಿಲ್ಲ. ಹೀಗಾಗಿ ಭಾರತೀಯ ಮೂಲದವರೇ ಅಧಿಕವಾಗಿರುವ ಪೋರ್ಟ್‌ ಆಫ್ ಸ್ಪೇನ್‌ನಲ್ಲಿ ಸರಣಿ ಫ‌ಲಿತಾಂಶವನ್ನು ನಿರ್ಧರಿಸಬೇಕಿದೆ. ಅಂತಿಮ ಪಂದ್ಯ ಕೂಡ ಇಲ್ಲೇ ನಡೆಯಲಿದೆ. ಸರಣಿ ವಶಪಡಿಸಿಕೊಳ್ಳಲು ಉಳಿದೆರಡೂ ಪಂದ್ಯಗಳನ್ನು ಗೆಲ್ಲಬೇಕಾದುದು ಅನಿವಾರ್ಯ.

ರಾಹುಲ್‌ ಬದಲು ಅಯ್ಯರ್‌
ಕೇವಲ 13 ಓವರ್‌ಗಳಿಗೆ ಸೀಮಿತಗೊಂಡ ಮೊದಲ ಪಂದ್ಯದಲ್ಲಿ ಭಾರತದ ಆಡುವ ಬಳಗದಲ್ಲಿ ಕೆ.ಎಲ್‌. ರಾಹುಲ್‌ಗೆ ಜಾಗ ಇರಲಿಲ್ಲ. 4ನೇ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಇಲ್ಲಿ ಯಾರಿಗೂ ಸಾಮರ್ಥ್ಯ ಸಾಬೀತುಪಡಿಸುವ ಅವಕಾಶ ಲಭಿಸದೇ ಇದ್ದುದರಿಂದ ಹನ್ನೊಂ ದರ ತಂಡದಲ್ಲಿ ಬದಲಾವಣೆ ಸಂಭವಿಸುವುದು ಅನುಮಾನ. ವಿಂಡೀಸ್‌ ಕೂಡ ಅದೇ ತಂಡವನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

ಧವನ್‌ ಪುನರಾಗಮನದಿಂದಾಗಿ ವಿಶ್ವಕಪ್‌ನಲ್ಲಿ ಇನ್ನಿಂಗ್ಸ್‌ ಆರಂಭಿಸಿದ್ದ ರಾಹುಲ್‌ ಅವರನ್ನು ಮತ್ತೆ 4ನೇ ಕ್ರಮಾಂಕದಲ್ಲಿ ಆಡಿಸಲಾ ಗುತ್ತದೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಅಚ್ಚರಿಯ ಬೆಳವಣಿಗೆ ಯೊಂದರಲ್ಲಿ ಈ ಜಾಗಕ್ಕೆ ಮುಂಬಯಿಯ ಶ್ರೇಯಸ್‌ ಅಯ್ಯರ್‌ ಆಯ್ಕೆಯಾದರು. ಇದರಿಂದ ರಾಹುಲ್‌ ಹೊರಗುಳಿಯಬೇಕಾಯಿತು.

ಶ್ರೇಯಸ್‌ ಅಯ್ಯರ್‌ ಭಾರತ “ಎ’ ತಂಡದ ಪರ ಅಮೋಘ ಬ್ಯಾಟಿಂಗ್‌ ದಾಖಲೆ ಹೊಂದಿದ್ದಾರೆ. ವೆಸ್ಟ್‌ ಇಂಡೀಸ್‌ “ಎ’ ವಿರುದ್ಧ 2 ಅರ್ಧ ಶತಕ ಬಾರಿಸಿ ಗಮನ ಸೆಳೆದಿದ್ದಾರೆ. ಹೀಗಾಗಿ ಮೂಲತಃ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿರುವ ಅಯ್ಯರ್‌ ಅವರನ್ನು 4ನೇ ಸ್ಥಾನಕ್ಕೆ ಗಟ್ಟಿಗೊಳಿಸುವುದು ತಂಡದ ಯೋಜನೆ ಆಗಿರಬಹುದು. ಅವರಿಲ್ಲಿ ವಿಫ‌ಲರಾದರೆ ಮುಂದೆ ಗಿಲ್‌ ಈ ಸ್ಥಾನಕ್ಕೆ ಲಗ್ಗೆ ಹಾಕುವುದು ಖಚಿತ. ವಿಂಡೀಸ್‌ನಲ್ಲೇ “ಎ’ ತಂಡದ ಪರ ಪ್ರಚಂಡ ಪ್ರದರ್ಶನ ನೀಡುತ್ತಿರುವ ಗಿಲ್‌ ಸೀನಿಯರ್‌ ತಂಡಕ್ಕೆ ಆಯ್ಕೆ ಯಾಗದಿದ್ದುದೇ ಒಂದು ಅಚ್ಚರಿ.

Advertisement

ವಿಶ್ವಕಪ್‌ನಲ್ಲಿ ಘೋರ ವೈಫ‌ಲ್ಯ ಅನುಭವಿಸಿದ ಕೇದಾರ್‌ ಗೆ ಅವಕಾಶ ನೀಡಿದ್ದು ಕೂಡ ಚರ್ಚಾ ಸ್ಪದ ಸಂಗತಿಯಾಗಿದೆ. ಟಿ20 ಸರಣಿಯಲ್ಲಿ ಮಿಂಚಿದ ನವದೀಪ್‌ ಸೈನಿ ಕೂಡ ಅವಕಾಶ ವಂಚಿತರಾಗಿದ್ದರು. ಇವರ ಸ್ಥಾನಕ್ಕೆ ಬಂದ ಖಲೀಲ್‌ ಅಹ್ಮದ್‌ 3 ಓವರ್‌ಗಳಲ್ಲಿ 27 ರನ್‌ ನೀಡಿ ಬಹಳ ದುಬಾರಿಯಾಗಿ ಗೋಚರಿಸಿದ್ದರು.

ಸಿಡಿಯುವರೇ ಕ್ರಿಸ್‌ ಗೇಲ್‌?
ವಿದಾಯ ಸರಣಿ ಆಡುತ್ತಿರುವ ಕ್ರಿಸ್‌ ಗೇಲ್‌ ಮೊದಲ ಪಂದ್ಯದಲ್ಲಿ ಆಮೆಗತಿಯ ಆಟವಾಡಿದ್ದು ಎಲ್ಲರಿಗೂ ಅಚ್ಚರಿಯಾಗಿ ಕಂಡಿತ್ತು. 4 ರನ್ನಿಗೆ 31 ಎಸೆತ ನುಂಗಿದ್ದರು! ಇವರ ಮೇಲೆ ತಂಡ ಬಹಳ ನಿರೀಕ್ಷೆ ಇರಿಸಿದ್ದು, ಗೇಲ್‌ ಸ್ಫೋಟಕ ಲಯಕ್ಕೆ ಮರಳುವ ವಿಶ್ವಾಸ ಹೊಂದಿದೆ. ಗೇಲ್‌ ಸಿಡಿದರೆ ಭಾರತಕ್ಕೆ ಅಪಾಯ ಖಾತ್ರಿ.

ವಿಂಡೀಸ್‌ ತಂಡದಲ್ಲಿ ಇನ್ನೂ ಸಾಕಷ್ಟು ಮಂದಿ ಬಿಗ್‌ ಹಿಟ್ಟರ್ ಇದ್ದಾರೆ. ಲೆವಿಸ್‌, ಹೆಟ್‌ಮೈರ್‌, ಪೂರನ್‌ ಸಾಮರ್ಥ್ಯಕ್ಕೆ ತಕ್ಕ ಬ್ಯಾಟಿಂಗ್‌ ಪ್ರದರ್ಶಿಸಿದರೆ ಸ್ಪರ್ಧೆ ರೋಚಕವಾಗಲಿದೆ.

ಕೊಹ್ಲಿ ದಾಖಲೆಗೆ 19 ರನ್‌
ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಏಕದಿನದಲ್ಲಿ ಅತ್ಯಧಿಕ ರನ್‌ ದಾಖಲಿಸುವ ಹಾದಿಯಲ್ಲಿದ್ದಾರೆ. ಇದಕ್ಕೆ ಬೇಕಿರುವುದು 19 ರನ್‌ ಮಾತ್ರ. ಸದ್ಯ ಪಾಕಿಸ್ಥಾನದ ಜಾವೇದ್‌ ಮಿಯಾಂದಾದ್‌ 64 ಇನ್ನಿಂಗ್ಸ್‌ಗಳಿಂದ 1,930 ರನ್‌ ಪೇರಿಸಿ ಅಗ್ರಸ್ಥಾನದಲ್ಲಿದ್ದಾರೆ. ಕಳೆದ 26 ವರ್ಷಗಳಿಂದಲೂ ಈ ದಾಖಲೆ ಅಜೇಯವಾಗಿ ಉಳಿದಿದೆ. ಕೊಹ್ಲಿ ಕೇವಲ 33 ಇನ್ನಿಂಗ್ಸ್‌ ಗಳಿಂದ 1,912 ರನ್‌ ಬಾರಿಸಿದ್ದಾರೆ.3ನೇ ಸ್ಥಾನದಲ್ಲಿರುವವರು ಸ್ಟೀವ್‌ ವೋ. ಅವರ ಸಾಧನೆ 15 ಇನ್ನಿಂಗ್ಸ್‌ಗಳಿಂದ 1,708 ರನ್‌.

ಸಂಭಾವ್ಯ ತಂಡಗಳು
ಭಾರತ
ರೋಹಿತ್‌ ಶರ್ಮ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಕೇದಾರ್‌ ಜಾಧವ್‌, ರವೀಂದ್ರ ಜಡೇಜ, ಭುವನೇಶ್ವರ್‌ ಕುಮಾರ್‌, ಕುಲದೀಪ್‌ ಯಾದವ್‌, ಮೊಹಮ್ಮದ್‌ ಶಮಿ, ಖಲೀಲ್‌ ಅಹ್ಮದ್‌.

ವೆಸ್ಟ್‌ ಇಂಡೀಸ್‌
ಕ್ರಿಸ್‌ ಗೇಲ್‌, ಎವಿನ್‌ ಲೆವಿಸ್‌, ಶೈ ಹೋಪ್‌, ನಿಕೋಲಸ್‌ ಪೂರನ್‌, ಶಿಮ್ರನ್‌ ಹೆಟ್‌ಮೈರ್‌, ರೋಸ್ಟನ್‌ ಚೇಸ್‌, ಜಾಸನ್‌ ಹೋಲ್ಡರ್‌ (ನಾಯಕ), ಕಾರ್ಲೋಸ್‌ ಬ್ರಾತ್‌ವೇಟ್‌, ಫ್ಯಾಬಿಯನ್‌ ಅಲೆನ್‌, ಶೆಲ್ಡನ್‌ ಕಾಟ್ರೆಲ್‌, ಕೆಮರ್‌ ರೋಚ್‌.


Advertisement

Udayavani is now on Telegram. Click here to join our channel and stay updated with the latest news.

Next