Advertisement

ಭಾರತವನ್ನು ಮಗುಚಿದ ಹೆಟ್ ಮೈರ್ – ಹೋಪ್ ಶತಕದಾಟ ; 8 ವಿಕೆಟ್ ಗಳಿಂದ ಗೆದ್ದ ವೆಸ್ಟ್ ಇಂಡೀಸ್

09:29 PM Dec 16, 2019 | Hari Prasad |

ಚೆನ್ನೈ: ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದು ಬೀಗಿದ್ದ ಟೀಂ ಇಂಡಿಯಾಗೆ ಪ್ರಥಮ ಏಕದಿನ ಪಂದ್ಯದಲ್ಲಿ ಸೋಲಿನ ಬಿಸಿ ಮುಟ್ಟಿದೆ. ಭಾರತ ನೀಡಿದ 288 ರನ್ ಸವಾಲನ್ನು ಆತ್ಮವಿಶ್ವಾಸದಿಂದಲೇ ಬೆನ್ನಟ್ಟಿದ ಪೊಲಾರ್ಡ್ ಪಡೆ 08 ವಿಕೆಟ್ ಗಳ ಅಧಿಕಾರಯುತ ಜಯವನ್ನು ತನ್ನದಾಗಿಸಿಕೊಂಡಿತು.

Advertisement

ಆರಂಭಿಕ ಆಟಗಾರ ಶೈ ಹೋಪ್ ಅವರ ತಾಳ್ಮೆಯ ಶತಕ ಮತ್ತು ಒನ್ ಡೌನ್ ಬ್ಯಾಟ್ಸ್ ಮನ್ ಶಿಮ್ರನ್ ಹೈಟ್ ಮೇರ್ ಅವರ ಭರ್ಜರಿ ಶತಕ ಮತ್ತು ಎರಡನೇ ವಿಕೆಟಿಗೆ ಈ ಜೋಡಿ ನೀಡಿದ 218 ರನ್ ಗಳ ಭರ್ಜರಿ ಜೊತೆಯಾಟ ಪ್ರವಾಸಿಗರಿಗೆ ಚಿಪಾಕ್ ಅಂಗಳದಲ್ಲಿ ಭರ್ಜರಿ ಗೆಲುವನ್ನು ತಂದುಕೊಡುವಲ್ಲಿ ನೆರವಾಯಿತು.

ಅಂತಿಮವಾಗಿ ವೆಸ್ಟ್ ಇಂಡೀಸ್ 47.5 ಓವರ್ ಗಳಲ್ಲಿ 2 ವಿಕೆಟ್ ಗಳನ್ನು ಕಳೆದುಕೊಂಡು 291 ರನ್ ಗಳಿಸುವ ಮೂಲಕ ಗೆಲುವಿನ ಗುರಿಯನ್ನು ತಲುಪಿತು. ಭರ್ಜರಿ ಶತಕ ಬಾರಿಸಿದ ಶಿಮ್ರನ್ ಹೆಟ್ ಮೆರ್ (139) ಪಂದ್ಯಶ್ರೇಷ್ಠ ಪುರಸ್ಕಾರಕ್ಕೆ ಪಾತ್ರರಾದರು.

ಭಾರತ-ವೆಸ್ಟ್ ಇಂಡೀಸ್ ಏಕದಿನ: ಅಯ್ಯರ್, ಪಂತ್ ಹೋರಾಟ ; ವೆಸ್ಟ್ ಇಂಡೀಸ್ ಗೆಲುವಿಗೆ 288 ಗುರಿ


ವೆಸ್ಟ್ ಇಂಡೀಸ್ ಗೆ ಆರಂಭಿಕ ಹೊಡೆತ ನೀಡುವಲ್ಲಿ ಭಾರತೀಯ ಬೌಲರ್ ಗಳು ಯಶಕಂಡರು. ಓಪನರ್ ಸುನೀಲ್ ಆ್ಯಂಬ್ರಿಸ್ (09) ಅವರನ್ನು ಚಾಹರ್ ಎಲ್.ಬಿ. ಬಲೆಗೆ ಕೆಡವಿದರು. ಆದರೆ ಆ ಬಳಿಕ ಜೊತೆಯಾದ ಹೋಪ್ (ಅಜೇಯ 102) ಮತ್ತು ಹೆಟ್ ಮೈರ್ (139) ಜೋಡಿ ಭಾರತೀಯ ಬೌಲರ್ ಗಳಿಗೆ ಮತ್ಯಾವುದೇ ಮೇಲುಗೈ ದೊರೆಯದಂತೆ ನೋಡಿಕೊಂಡರು.


ವಿಕೆಟ್ ಕೀಪರ್ ಶೈ ಹೋಪ್ ನಿಧಾನಗತಿಯ ಆಟಕ್ಕೆ ತೊಡಗಿದರೆ ಹೇಟ್ ಮೇರ್ ಭಾರತೀಯ ಬೌಲರ್ ಗಳನ್ನು ಮುಲಾಜಿಲ್ಲದೇ ದಂಡಿಸುತ್ತಾ ಹೋದರು. ಈ ಪರ್ಫೆಕ್ಟ್ ಕಾಂಬಿನೇಷನ್ ಮುರಿಯುವ ಕ್ಯಾಪ್ಟನ್ ಕೊಹ್ಲಿಯ ಯಾವ ತಂತ್ರವೂ ಫಲನೀಡಲಿಲ್ಲ. ಹೆಟ್ ಮೈರ್ ಕೇವಲ 106 ಎಸೆತಗಳಲ್ಲಿ 139 ರನ್ ಬಾರಿಸಿದರು. ಇದರಲ್ಲಿ 11 ಬೌಂಡರಿ ಹಾಗೂ 07 ಭರ್ಜರಿ ಸಿಕ್ಸರ್ ಗಳು ಒಳಗೊಂಡಿತ್ತು.


39ನೇ ಓವರಿನಲ್ಲಿ ಹೆಟ್ ಮೈರ್ ಔಟಾದರು, ಅಂದರೆ ಈ ಜೋಡಿ ಸುಮಾರು 28 ಓವರುಗಳವರೆಗೆ ಕ್ರೀಸ್ ಆಕ್ರಮಿಸಿಕೊಂಡು ಭಾರತೀಯ ಬೌಲರ್ ಗಳನ್ನು ಕಾಡಿದರು. ಹೋಪ್ ಅವರು 151 ಎಸೆತಗಳಲ್ಲಿ 102 ರನ್ ಬಾರಿಸಿ ಅಜೇಯರಾಗಿ ಉಳಿದರು. ಹೆಟ್ ಮೇರ್ ಔಟಾದ ಬಳಿಕ ಹೋಪ್ ಜೊತೆಗೂಡಿದ ನಿಕೋಲಸ್ ಪೂರಣ್ ಅವರು (29) ಬಿರುಸಿನ ಆಟವಾಡಿ ತಂಡದ ಜಯವನ್ನು ಸರಾಗಗೊಳಿಸಿದರು. ಪೂರಣ್ 23 ಎಸೆತಗಳಲ್ಲಿ 29 ರನ್ ಬಾರಿಸಿದರು.

Advertisement

ವೆಸ್ಟ್ ಇಂಡೀಸ್ ಬೌಲಿಂಗ್ ಗೆ ಹೋಲಿಸಿದರೆ ಭಾರತದ ಬೌಲಿಂಗ್ ಇಂದು ಮೊನಚು ಕಳೆದುಕೊಂಡಿತ್ತು. ದೀಪಕ್ ಚಹರ್ ಮತ್ತ ಕುಲದೀಪ್ ಯಾದವ್ ಅವರ ಬೌಲಿಂಗ್ ಮಾತ್ರ ಇದ್ದುದರಲ್ಲೇ ಸ್ವಲ್ಪ ಪರಿಣಾಮಕಾರಿಯಾಗಿತ್ತು. ಎರಡು ವಿಕೆಟ್ ಗಳನ್ನು ಚಹರ್ ಮತ್ತು ಮಹಮ್ಮದ್ ಶಮಿ ಹಂಚಿಕೊಂಡರು.


Advertisement

Udayavani is now on Telegram. Click here to join our channel and stay updated with the latest news.

Next