ಕೋಲ್ಕತ : ಪಶ್ಚಿಮ ಬಂಗಾಲದ ಬರಾಕ್‌ಪೋರ್ ನ ಭಾಟ್‌ಪಾರಾ ಪ್ರದೇಶದಲ್ಲಿ ಅಪರಿಚಿತ ದುಷ್ಕರ್ಮಿಗಳು ಎರಡು ಕಚ್ಚಾ ಬಾಂಬ್ ಗಳನ್ನು ಎಸೆದ ಘಟನೆಯಲ್ಲಿ ಇಬ್ಬರು ಮೃತಪಟ್ಟು ಇತರ ನಾಲ್ವರು ಗಾಯಗೊಂಡಿದ್ದಾರೆ.
ಬೆಳಗ್ಗೆ 10.30ರ ಸುಮಾರಿಗೆ ನಡೆದಿರುವ ಈ ಘಟನೆಯಲ್ಲಿ ದುಷ್ಕರ್ಮಿಗಳು ಮನೆಯೊಂದರ ಮೇಲೆ ಎರಡು ಕಚ್ಚಾ ಬಾಂಬ್ ಗಳನ್ನು ಎಸೆದರು. ಆಗ ಮೊಹಮ್ಮದ್ ಹಲೀಮ್ (57) ಮತ್ತು ಮೊಹಮ್ಮದ್ ಮುಷ್ತಾಕ್ (60) ಮನೆಯ ಹೊರಗೆ ಕುಳಿತಿದ್ದರು.
ಬಾಂಬ್ ಸ್ಫೋಟದಿಂದ ಹಲೀಮ್ ಸ್ಥಳದಲ್ಲೇ ಮೃತಪಟ್ಟರು. ಮುಷ್ತಾಕ್ ಅವರನ್ನು ಕಲ್ಯಾಣಿಯ ಜೆಎನ್‌ಎಂ ಆಸ್ಪತ್ರೆಗೆ ತರುತ್ತಲೇ ಆತ ಮೃತಪಟ್ಟಿರುವುದಾಗಿ ತಿಳಿಸಲಾಯಿತು.
ಬಾಂಬ್ ದಾಳಿ ನಡೆದಾಗ ಮನೆಯಲ್ಲಿ ಹಲವು ಮಂದಿ ಇದ್ದರು. ಅವರ ಪೈಕಿ ರೂಬಿ ಪರ್ವೀನ್, ಪರ್ವೇಜ್ ಆಲಂ, ತಾವರೆಜ್ ಆಲಂ ಮತ್ತು ಪ್ರಿನ್ಸ್ ಪರ್ವೇಜ್ ಗಾಯಗೊಂಡರು.
ಬಾಂಬ್ ದಾಳಿಯನ್ನು ಅನುಸರಿಸಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಂಬ್ ದಾಳಿಯ ಹಿಂದಿನ ಉದ್ದೇಶ ಏನೆಂದು ಗೊತ್ತಾಗಿಲ್ಲ. ಭಾಟ್‌ಪಾರಾ ವಿಧಾನಸಭೆಗೆ ಉಪಚುನಾವಣೆ ನಡೆದ ಸಂದರ್ಭದಲ್ಲಿ ಇಲ್ಲಿ ಹಿಂಸಾತ್ಮಕ ಪ್ರಕರಣಗಳು ನಡೆದಿದ್ದವು. ಈಗ ಸೆ.144 ಹೇರಲಾಗಿದೆ.
ಈ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಿಡಲು ಕ್ಷಿಪ್ರ ಕಾರ್ಯ ಪಡೆಯನ್ನು ನಿಯೋಜಿಸಲಾಗಿದೆ.