ನವದೆಹಲಿ: 2018ರಲ್ಲಿ ದೇಶದಲ್ಲಿ ಒಟ್ಟಾರೆಯಾಗಿ 228 ಆ್ಯಸಿಡ್ ದಾಳಿ ಪ್ರಕರಣಗಳು ದಾಖಲಾಗಿದ್ದು ಇದರಿಂದಾಗಿ 240 ಮಂದಿ ಆ್ಯಸಿಡ್ ದಾಳಿ ಸಂತ್ರಸ್ತರು ತೊಂದರೆಗೆ ಒಳಗಾಗಿದ್ದಾರೆ. ಇವರಲ್ಲಿ 131 ಮಹಿಳೆಯರೇ ಎಂಬುದು ಕಳವಳಕಾರಿ ಅಂಶವಾಗಿದೆ. ಈ ಮಾಹಿತಿಯನ್ನು ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೊ (ಎನ್.ಸಿ.ಆರ್.ಬಿ.) ತನ್ನ ವರದಿಯಲ್ಲಿ ಹೇಳಿದೆ.
2017ಕ್ಕೆ ಹೋಲಿಸಿದರೆ 2018ರಲ್ಲಿ ಆ್ಯಸಿಡ್ ದಾಳಿ ಪ್ರಕರಣಗಳಲ್ಲಿ ಮತ್ತು ಸಂತ್ರಸ್ತರ ಸಂಖ್ಯೆ ಕಡಿಮೆಯಾಗಿರುವುದು ಸಮಾಧಾನಕರ ವಿಷಯವಾಗಿದೆ. 2017ರಲ್ಲಿ 244 ಆ್ಯಸಿಡ್ ದಾಳಿ ಪ್ರಕರಣಗಳು ದೇಶದ ವಿವಿಧ ಕಡೆಗಳಲ್ಲಿ ದಾಖಲಾಗಿದ್ದವು.
ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿರುವ ಪಶ್ಚಿಮ ಬಂಗಾಳದಲ್ಲಿ ಆ್ಯಸಿಡ್ ದಾಳಿಯ ಒಟ್ಟು 50 ಪ್ರಕರಣಗಳು ದಾಖಲಾಗಿದೆ ಮತ್ತು ಇದರಲ್ಲಿ 53 ಜನರು ಸಂತ್ರಸ್ತರಾಗಿದ್ದಾರೆ. ಈ ಮೂಲಕ ಆ್ಯಸಿಡ್ ದಾಳಿ ಪ್ರಕರಣಗಳಲ್ಲಿ ಪಶ್ಚಿಮ ಬಂಗಾಲ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ಕುಖ್ಯಾತಿಗೆ ಒಳಗಾಗಿದೆ.
ದೇಶದಲ್ಲೆಡೆ ನಡೆದಿರುವ ಒಟ್ಟು ಆ್ಯಸಿಡ್ ದಾಳಿ ಪ್ರಕರಣಗಳ ಪೈಕಿ ಸುಮಾರು ಅರ್ಧದಷ್ಟು ಪ್ರಕರಣಗಳು ಪಶ್ಚಿಮ ಬಂಗಾಲ, ಉತ್ತರ ಪ್ರದೇಶ ಮತ್ತು ರಾಷ್ಟ್ರ ರಾಜಧಾನಿ ದೆಹಲಿಗಳಲ್ಲೇ ದಾಖಲಾಗಿರುವುದು ಇನ್ನೊಂದು ವಿಶೇಷ.
2018ರಲ್ಲಿ ಪಶ್ಚಿಮ ಬಂಗಾಲದಲ್ಲಿ 50, ಉತ್ತರ ಪ್ರದೇಶದಲ್ಲಿ 40 ಮತ್ತು ದೆಹಲಿಯಲ್ಲಿ 11 ಆ್ಯಸಿಡ್ ದಾಳಿ ಪ್ರಕರಣಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ. ಈ ಮೂಲಕ ದಾಖಲಾಗಿರುವ ಒಟ್ಟು 228 ದಾಳಿ ಪ್ರಕರಣಗಳಲ್ಲಿ 101 ಈ ಮೂರು ರಾಜ್ಯಗಳಲ್ಲೇ ನಡೆದಿರುವುದು ಕಳವಳಕಾರಿ ಅಂಶವೇ ಸರಿ.
2017ರಲ್ಲಿ ಪ.ಬಂಗಾಲ (54), ಉ.ಪ್ರದೇಶ (56) ಮತ್ತು ದೆಹಲಿ (14) ರಾಜ್ಯಗಳಲ್ಲಿ 124 ಆ್ಯಸಿಡ್ ದಾಳಿ ಪ್ರಕರಣಗಳು ದಾಖಲಾಗಿದ್ದವು ಮತ್ತು ಇದು ಆ ವರ್ಷ ದೇಶದೆಲ್ಲೆಡೆ ದಾಖಲುಗೊಂಡಿದ್ದ ಒಟ್ಟು 244 ಪ್ರಕರಣಗಳ ಅರ್ಧಕ್ಕಿಂತಲೂ ಸ್ವಲ್ಪ ಹೆಚ್ಚು.
ಆ್ಯಸಿಡ್ ದಾಳಿ ಪ್ರಕರಣಗಳನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 326 ಎ ಅಡಿಯಲ್ಲಿ ದಾಖಲಿಸಿಕೊಳ್ಳಲಾಗುತ್ತದೆ ಮತ್ತು ಈ ಪ್ರಕರಣದಲ್ಲಿ ಆರೋಪ ಸಾಬೀತುಗೊಂಡರೆ ಅಪರಾಧಿಗೆ 10 ವರ್ಷಗಳ ಜೈಲು ಶಿಕ್ಷೆಯಷ್ಟೇ ಆಗುತ್ತದೆ.