Advertisement

ಲಾಟರಿ ಅದೃಷ್ಟ-ರಾತ್ರೋ ರಾತ್ರಿ ಕೋಟ್ಯಧಿಪತಿಯಾದ ಅಜ್ಜ, ರಕ್ಷಣೆ ಕೋರಿ ಪೊಲೀಸರ ಮೊರೆ!

09:53 AM Jan 04, 2020 | Nagendra Trasi |

ಕಾಲ್ನಾ(ಪಶ್ಚಿಮಬಂಗಾಳ):ತಮ್ಮ ಪಾಡಿಗೆ ಇದ್ದ 70ವರ್ಷದ ಇಂದ್ರ ನಾರಾಯಣ್ ಸೇನ್ ದಿಢೀರ್ ಆಗಿ ಎಲ್ಲರ ಗಮನ ಸೆಳೆದುಬಿಟ್ಟಿದ್ದರು. ಅದಕ್ಕೆ ಕಾರಣವಾಗಿದ್ದು ಅವರ ಅದೃಷ್ಟ! ಆದರೆ ಇದೀಗ ಸೇನ್ ಅವರು ರಕ್ಷಣೆ ಕೊಡಿ ಎಂದು ಪೊಲೀಸರ ಮೊರೆ ಹೋಗಿರುವ ಘಟನೆ ಪಶ್ಚಿಮಬಂಗಾಳದ ಕಾಲ್ನಾದಲ್ಲಿ ನಡೆದಿದೆ.

Advertisement

ಭಾನುವಾರ ಇಂದ್ರ ನಾರಾಯಣ್ ಸೇನ್ ಅವರಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಬಂಪರ್ ಲಾಟರಿ ಬಹುಮಾನ ಬಂದಿತ್ತು. ಮೂರು ದಿನಗಳ ಬಳಿಕ ಸೇನ್ ಅವರು ಕಾಲ್ನಾ ಪೊಲೀಸ್ ಠಾಣೆಗೆ ಆಗಮಿಸಿ ಠಾಣಾಧಿಕಾರಿ ರಾಕೇಶ್ ಸಿಂಗ್ ಅವರ ಬಳಿ ಭದ್ರತೆ ನೀಡುವಂತೆ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.

ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧಿಪತಿಯಾದ ತನಗೀಗ ಮನೆಯಿಂದ ಹೊರ ಹೋಗಲು ಭಯವಾಗುತ್ತಿದೆ. ಹೀಗಾಗಿ ತನಗೆ ರಕ್ಷಣೆ ನೀಡಬೇಕೆಂದು ಕೋರಿ ಸೇನ್ ಮನವಿ ಮಾಡಿಕೊಂಡಿದ್ದಾರೆಂದು ವರದಿ ವಿವರಿಸಿದೆ.

ಕೊಳವೆ ಬಾವಿ ಮಾಜಿ ಆಪರೇಟರ್ ಆಗಿರುವ ಸೇನ್ ಸುಮಾರು ಹತ್ತು ವರ್ಷಗಳ ಹಿಂದೆಯೇ ನಿವೃತ್ತಿಯಾಗಿದ್ದರು. ಪಶ್ಚಿಮ ಬರ್ದ್ವಾನ್ ದ ಕಾಲ್ನಾದ ಸಾಹಾಪಾರಾ ಗ್ರಾಮದಲ್ಲಿರುವ ಹಳೇ ಮನೆಯಲ್ಲಿ ಸೇನ್ ವಾಸವಾಗಿದ್ದು, ತಿಂಗಳಿಗೆ ಹತ್ತು ಸಾವಿರ ರೂಪಾಯಿ ಪಿಂಚಣಿ ಪಡೆಯುತ್ತಿದ್ದಾರೆ. ಭಾನುವಾರ ನಾಗಲ್ಯಾಂಡ್ ರಾಜ್ಯದ ಲಾಟರಿ ಟಿಕೆಟ್ ವೊಂದನ್ನು ಖರೀದಿಸಿದ್ದರು. ತಾನು ಅದರ ಫಲಿತಾಂಶವನ್ನೂ ನೋಡಲು ಹೋಗಿರಲಿಲ್ಲವಾಗಿತ್ತು ಎಂದು ಸೇನ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.

ಸಿದ್ದೇಶ್ವರಿ ಲಾಟರಿ ಸೆಂಟರ್ ಮಾಲೀಕ ಮಿಂಟು ಬಿಸ್ವಾಸ್ ಈ ಲಾಟರಿಯನ್ನು ಸೇನ್ ಗೆ ಮಾರಾಟ ಮಾಡಿದ್ದರು. ಎಲ್ಲರ ಚಿತ್ತ ಫಲಿತಾಂಶದ ಮೇಲೆ ನೆಟ್ಟಿದ್ದು, ಭಾನುವಾರ ರಾತ್ರಿ 8ಗಂಟೆಗೆ ಫಲಿತಾಂಶ ಘೋಷಣೆಯಾಗಿತ್ತು. ಕೊನೆಗೆ ಸೇನ್ ಜಾಕ್ ಪಾಟ್ ಹೊಡೆದಿರುವುದು ತಿಳಿದು, ತನ್ನ ಲಾಟರಿ ಮಾರಾಟದ ಸಣ್ಣ ಅಂಗಡಿಯನ್ನು ಹೂಗಳಿಂದ ಅಲಂಕರಿಸಿ ಬಿಸ್ವಾಸ್ ಎಲ್ಲರಿಗೂ ಸಿಹಿ ತಿಂಡಿ ಹಂಚಿದ್ದರು. ನಂತರ ಸೇನ್ ಅವರನ್ನು ಹುಡುಕಿ ಬಂಪರ್ ಬಹುಮಾನ ಪಡೆದಿರುವ ವಿಷಯ ತಿಳಿಸಿದ್ದರು.

Advertisement

ಬಿಸ್ವಾಸ್ ಮನೆಗೆ ಬಂದು ಬಂಪರ್ ಬಹುಮಾನ ಬಂದ ವಿಷಯ ತಿಳಿಸಿದಾಗ ನಂಬಲೂ ಸಾಧ್ಯವಾಗಲಿಲ್ಲ ಎಂದು ಸೇನ್ ತಿಳಿಸಿದ್ದಾರೆ. ಕೊನೆಗೆ ಸೇನ್ ಅವರನ್ನು ಜತೆಗೆ ಕರೆದುಕೊಂಡು ಬಂದ ಬಿಸ್ವಾಸ್ ಫಲಿತಾಂಶವನ್ನು ಪರಿಶೀಲಿಸಿದ ನಂತರವೇ ತನಗೆ ಜಾಕ್ ಪಾಟ್ ಹೊಡೆದಿರುವುದನ್ನು ನಂಬಿದ್ದೆ ಎಂದು ಸೇನ್ ತಿಳಿಸಿದ್ದಾರೆ.

ಈ ವಿಷಯ ಎಲ್ಲರ ಜತೆ ಹಂಚಿಕೊಳ್ಳಲು ಭಯವಾಗಿತ್ತು. ನಾನು ಯಾವತ್ತೂ ಇಷ್ಟೊಂದು ದೊಡ್ಡ ಮೊತ್ತ ಕಂಡವನಲ್ಲ. ಆದರೆ ಈ ವಿಷಯ ಅಷ್ಟರಲ್ಲಿಯೇ ಜಗಜ್ಜಾಹೀರಾಗಿತ್ತು. ಲಾಟರಿ ಅಂಗಡಿ ಮಾಲೀಕ ಬಿಸ್ವಾಸ್ ಕೂಡಾ ಸೇನ್ ಹೆಸರು ಹೇಳುವ ಮೂಲಕ ವಿಷಯ ಎಲ್ಲರಿಗೂ ತಿಳಿಯುವಂತಾಗಿತ್ತು. ಇದೀಗ ತನಗೆ ಮನೆಯಿಂದ ಹೊರಹೋಗಲು ಭಯವಾಗುತ್ತಿದ್ದು, ತನಗೆ ರಕ್ಷಣೆ ಕೊಡಬೇಕೆಂದು ಕೋರಿ ಪೊಲೀಸರಿಗೆ ಮನವಿ ಮಾಡಿದ್ದೇನೆ ಎಂದು ಸೇನ್ ತಿಳಿಸಿದ್ದಾರೆ.

ತನಗೆ ಲಾಟರಿಯಲ್ಲಿ ಬಂದ ಬಹುಮಾನದ ಹಣದಲ್ಲಿ ದುರ್ಗಾ ದೇವಸ್ಥಾನ ಕಟ್ಟಲು ಸ್ವಲ್ಪ ಹಣ ದಾನ ಮಾಡುತ್ತೇನೆ. ಇನ್ನುಳಿದ ಸ್ವಲ್ಪ ಹಣವನ್ನು ದಕ್ಷಿಣೆ ಮತ್ತು ಪೂಜೆ ನಡೆಸಲು ವಿನಿಯೋಗಿಸುತ್ತೇನೆ. ನಂತರ ನನ್ನ ಮೂರು ಗಂಡು ಮಕ್ಕಳಿಗೆ ಹಾಗೂ ಮೊಮ್ಮಕ್ಕಳಿಗೆ ಹಂಚುತ್ತೇನೆ. ನನಗೆ ನನ್ನ ಪಿಂಚಣಿ ಹಣವೇ ಜೀವನಕ್ಕೆ ಸಾಕು ಎಂದು ಸೇನ್ ತಿಳಿಸಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next