ಹೊಸದಿಲ್ಲಿ : ಪಶ್ಚಿಮ ಬಂಗಾಲದ ಪಂಚಾಯತ್ ಚುನಾವಣೆಯಲ್ಲಿ 17,000 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವ ಬಗ್ಗೆ ತೀವ್ರ ಶಂಕೆ, ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಈ ಅಭ್ಯರ್ಥಿಗಳ ಫಲಿತಾಂಶವನ್ನು ಪ್ರಕಟಿಸದಂತೆ ಪಶ್ಚಿಮ ಬಂಗಾಲದ ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ.
ಮೇ 14ರಂದು ಪಶ್ಚಿಮ ಬಂಗಾಲ ಪಂಚಾಯತ್ ಚುನಾವಣೆ ನಡೆಯುವುದನ್ನು ಸರ್ವೋಚ್ಚ ನ್ಯಾಯಾಲಯ ದೃಢೀಕರಿಸಿದ್ದು ಮುಕ್ತ ಮತ್ತು ನ್ಯಾಯೋಚಿತ ಚುನಾವಣೆಗಳು ನಡೆಯುವಂತೆ ನೋಡಿಕೊಳ್ಳತಕ್ಕದ್ದು ಎಂದು ಆಯೋಗಕ್ಕೆ ಹೇಳಿದೆ.
ಇ-ಮೇಲ್ ಮೂಲಕ ನಾಮಪತ್ರ ಸಲ್ಲಿಸಬಹುದೆಂಬ ಕಲ್ಕತ್ತಾ ಹೈಕೋರ್ಟಿನ ಆದೇಶಕ್ಕೆ ಕೂಡ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.ರಾಜ್ಯದಲ್ಲಿನ ಪಂಚಾಯತ್ ಚುನಾವಣೆಗೆ ಇ-ಮೇಲ್ ಮೂಲಕ ಸಲ್ಲಿಸಲ್ಪಟ್ಟಿರುವ ನಾಮಪತ್ರಗಳನ್ನು ಸ್ವೀಕರಿಸದಂತೆ ಸುಪ್ರೀಂ ಕೋರ್ಟ್, ಪಶ್ಚಿಮ ಬಂಗಾಲ ರಾಜ್ಯ ಚುನಾವಣಾ ಆಯೋಗಕ್ಕೆ ಸ್ಪಷ್ಟಪಡಿಸಿದೆ.
ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದ್ದ ಎ.23ರ ಮಧ್ಯಾಹ್ನ 3 ಗಂಟೆಗೆ ಮುನ್ನ ಇಮೇಲ್ ಮೂಲಕ ಸಲ್ಲಿಸಲ್ಪಟ್ಟಿದ್ದ ಸಿಪಿಎಂ ಸೂಚಿತ ಅಭ್ಯರ್ಥಿಗಳ ನಾಮಪತ್ರಗಳನ್ನು ಸ್ವೀಕರಿಸುವಂತೆ ಕಳೆದ ಮೇ 8ರಂದು ಕಲ್ಕತ್ತ ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.
ಪಶ್ಚಿಮ ಬಂಗಾಲ ಪಂಚಾಯತ್ ಚುನಾವಣೆಯನ್ನು ಅವಿರೋಧವಾಗಿ 17,000 ಅಭ್ಯರ್ಥಿಗಳು ಜಯಿಸಿದ್ದುದನ್ನು ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಗಂಭೀರವಾಗಿ ಪರಿಗಣಿಸಿತ್ತು. ಶೇ.34ರಷ್ಟು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದು ನಿಜಕ್ಕೂ ಹೆದರಿಕೆ ಹುಟ್ಟಿಸುವಂತಿದೆ ಎಂದು ಪೀಠದ ಇನ್ನಿಬ್ಬರು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ್ ಹೇಳಿದ್ದಾರೆ.