ಕೋಲ್ಕತಾ: ಮಹತ್ವದ ಬೆಳವಣಿಗೆಯೊಂದರಲ್ಲಿ ಆರ್ ಜಿ ಕರ್(RG Kar Medical collage) ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರನ್ನು ಪಶ್ಚಿಮಬಂಗಾಳದ ಆರೋಗ್ಯ ಇಲಾಖೆ ಅಮಾನತುಗೊಳಿಸಿದೆ.
ಹಣಕಾಸು ಅವ್ಯವಹಾರ ಆರೋಪದಲ್ಲಿ ಸಿಬಿಐ(CBI) ಡಾ.ಸಂದೀಪ್ ಘೋಷ್ ಅನ್ನು ಬಂಧಿಸಿತ್ತು. ಈ ಘಟನೆ ನಂತರ ಪಶ್ಚಿಮಬಂಗಾಳ ಸರ್ಕಾರ ಅಮಾನತುಗೊಳಿಸುವ ನಿರ್ಧಾರ ಕೈಗೊಂಡಿದೆ.
ಆಸ್ಪತ್ರೆಯೊಳಗೆ ಟ್ರೈನಿ ವೈದ್ಯೆಯ ಶವ ಪತ್ತೆಯಾದ 26 ದಿನಗಳ ನಂತರ ಈ ನಿರ್ಧಾರ ಹೊರಬಿದ್ದಿದೆ. ಇದು ಅತ್ಯಾ*ಚಾರ ಮತ್ತು ಕೊಲೆ ಎಂಬ ಆರೋಪದೊಂದಿಗೆ ಆಕ್ರೋಶ, ಪ್ರತಿಭಟನೆಗೆ ಎಡೆಮಾಡಿಕೊಟ್ಟಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಈಗಾಗಲೇ ಸೆಕ್ಯುರಿಟಿ ಗಾರ್ಡ್ ಮತ್ತು ಆಸ್ಪತ್ರೆಯ ಇಬ್ಬರು ಸಿಬಂದಿಗಳನ್ನು ಬಂಧಿಸಲಾಗಿದೆ. ಆರ್ ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ವಿರುದ್ಧ ಕ್ರಿಮಿನಲ್ ವಿಚಾರಣೆ ನಡೆಯುತ್ತಿರುವುದರಿಂದ ತಕ್ಷಣಕ್ಕೆ ಅನ್ವಯವಾಗುವಂತೆ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.