ಕೋಲ್ಕತಾ: ಪಶ್ಚಿಮ ಬಂಗಾಲದ ಪಡಿತರ ಅಕ್ರಮ ಆರೋಪ ಎದುರಿಸುತ್ತಿರುವ ಟಿಎಂಸಿ ನಾಯಕ ಶಹಜಹಾನ್ ಶೇಖ್ ಎಂಬಾತನನ್ನು ಬಂಧಿಸಲು ಹೋದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ (ಇ.ಡಿ.) ವಿರುದ್ಧವೇ ಪಶ್ಚಿಮ ಬಂಗಾಲ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ಶಹಜಹಾನ್ ಶೇಖ್ ಎಂಬಾತನ ಮನೆಗೆ ಇ.ಡಿ. ಅಧಿಕಾರಿಗಳು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಇದರ ಜತೆಗೆ ಆತನ ಮನೆಯಲ್ಲಿ ಇದ್ದ ಮಹಿಳೆಯರ ಘನತೆಗೆ ಕುಂದು ಬರುವಂತೆ ಅವರು ವರ್ತಿಸಿದ್ದಾರೆ ಎಂದು ಪೊಲೀಸರು ಎಫ್ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಸರ್ಚ್ ವಾರಂಟ್ ತೋರಿಸದೆ ಇ.ಡಿ. ಅಧಿಕಾರಿಗಳು ಒಳ ಪ್ರವೇಶಿಸಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಬಂಧನಕ್ಕೆ ಸೂಚನೆ
ಮತ್ತೂಂದು ಬೆಳವಣಿಗೆಯಲ್ಲಿ ಕೇಂದ್ರ ತನಿಖಾ ಸಂಸ್ಥೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದವರನ್ನು ಬಂಧಿಸುವಂತೆ ಪಶ್ಚಿಮ ಬಂಗಾಲ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಆದೇಶಿಸಿದ್ದಾರೆ. ಆತನಿಗೆ ಉಗ್ರರ ಜತೆಗೆ ಸಂಪರ್ಕ ಇರುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ. ಈ ನಡುವೆ ಬರ್ಹಾಂಪುರದಲ್ಲಿ ಸತ್ಯನ್ ಚೌಧರಿ ಎಂಬ ಟಿಎಂಸಿಯ ಸ್ಥಳೀಯ ಮುಖಂಡನನ್ನು ಅಪರಿಚಿತರು ಗುಂಡು ಹಾರಿಸಿ ಕೊಂದಿದ್ದಾರೆ. ಸ್ಥಳೀಯ ಪೊಲೀಸರು ಈ ಬಗ್ಗೆ ಕೇಸು ದಾಖಲಿಸಿದ್ದಾರೆ.