ಕೋಲ್ಕತಾ/ಹೊಸದಿಲ್ಲಿ: ಪಶ್ಚಿಮ ಬಂಗಾಲದಲ್ಲಿ ಫಲಿತಾಂಶದಂದು ಆರಂಭವಾದ ಹಿಂಸಾಚಾರ ಮಂಗಳವಾರವೂ ಮುಂದುವರಿದಿದ್ದು, ಮೃತರ ಸಂಖ್ಯೆ 12ಕ್ಕೇರಿಕೆಯಾಗಿದೆ. ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಮಂಗಳವಾರ ರಾಜ್ಯಪಾಲ ಜಗದೀಪ್ ಧನ್ಕರ್‌ರಿಗೆ ಕರೆ ಮಾಡಿ, ಹಿಂಸಾಚಾರ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಚರ್ಚಿಸಿದ್ದಾರೆ.
ಪೂರ್ವ ಬರ್ಧಮಾನ್ ಜಿಲ್ಲೆಯಲ್ಲಿ ಮಂಗಳವಾರ 54 ವರ್ಷದ ಟಿಎಂಸಿ ಕಾರ್ಯಕರ್ತರೊಬ್ಬರನ್ನು ಇರಿದು ಕೊಲ್ಲಲಾಗಿದೆ. ಕೂಛ್ ಬೆಹಾರ್‌ನಲ್ಲಿ ಬಿಜೆಪಿ ಕಾರ್ಯಕರ್ತನ ಮನೆಗೆ ಬೆಂಕಿ ಹಚ್ಚಲಾಗಿದೆ. ಹೌರಾದಲ್ಲಿ 15 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಂಗಾಲಕ್ಕೆ ಭೇಟಿ ನೀಡಿದ್ದು, ಇಲ್ಲಿ ನಡೆಯುತ್ತಿರುವ ಹಿಂಸೆಯು ದೇಶ ವಿಭಜನೆ ವೇಳೆ ಆದಂಥ ಹಿಂಸಾಚಾರವನ್ನು ನೆನಪಿಸುತ್ತಿದೆ ಎಂದಿದ್ದಾರೆ.
ಅಧಿಕಾರಿಗೆ ಭದ್ರತೆ: ನಂದಿಗ್ರಾಮ ಚುನಾವಣ ಅಧಿಕಾರಿಗೆ ಭದ್ರತೆ ಒದಗಿಸಿರುವುದಾಗಿ ಬಂಗಾಲ ಸರಕಾರವು ಚುನಾವಣ ಆಯೋಗಕ್ಕೆ ಮಾಹಿತಿ ನೀಡಿದೆ. ಫಲಿತಾಂಶದಂದು ಮರು ಮತ ಎಣಿಕೆಗೆ ದೀದಿ ಆಗ್ರಹಿಸಿದರೂ ಅಧಿಕಾರಿ ಒಪ್ಪಿರಲಿಲ್ಲ.
ಅಮ್ಮ ಕ್ಯಾಂಟೀನ್ ಧ್ವಂಸ: ಚೆನ್ನೈಯಲ್ಲಿ ಡಿಎಂಕೆಯ ಇಬ್ಬರು ಕಾರ್ಯಕರ್ತರು “ಅಮ್ಮ ಕ್ಯಾಂಟೀನ್’ನ ಫ್ಲೆಕ್ಸ್ ಹಾಗೂ ಬೋರ್ಡ್‌ಗಳನ್ನು ಕಿತ್ತುಹಾಕುತ್ತಿರುವ ವೀಡಿಯೋವೊಂದು ಮಂಗಳವಾರ ವೈರಲ್ ಆಗಿದೆ. ಘಟನೆ ಬಗ್ಗೆ ಡಿಎಂಕೆ ನಾಯಕರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಎಂಕೆ, ಕ್ಯಾಂಟೀನ್ ಧ್ವಂಸಗೊಳಿಸಿದ ಕಾರ್ಯಕರ್ತರನ್ನು ವಜಾ ಮಾಡಿ, ಪೊಲೀಸರಿಗೆ ದೂರನ್ನೂ ನೀಡಿದೆ. ಇದೇ ವೇಳೆ ಡಿಎಂಕೆ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಎಂ.ಕೆ.ಸ್ಟಾಲಿನ್ ಅವರು ಇದೇ 7ರಂದು ಸಿಎಂ ಆಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ಕೊರೊನಾ ಹಿನ್ನೆಲೆ ಸರಳವಾಗಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ.
ಪಿಣರಾಯಿ ಪ್ರಮಾಣ ವಿಳಂಬ?: ಕೇರಳದಲ್ಲಿ ಸತತ 2ನೇ ಬಾರಿಗೆ ಅಧಿಕಾರಕ್ಕೇರಲಿರುವ ಪಿಣರಾಯಿ ವಿಜಯನ್ ಅವರ ಪ್ರಮಾಣ ಸ್ವೀಕಾರ ಸಮಾರಂಭ ವಿಳಂಬವಾಗಲಿದೆ. ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮೇ ತಿಂಗಳ 3ನೇ ವಾರದಲ್ಲಿ ಸಮಾರಂಭ ನಡೆಯುವ ಸಾಧ್ಯತೆಯಿದೆ.