ಕೋಟೇಶ್ವರ: ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ಹೊರಟ ದೋಣಿಯೊಂದು (ಸ್ಪೀಡ್ ಬೋಟ್) ಮೀನುಗಾರರ ವಿಪರೀತ ನಿದ್ದೆಯ ಮಂಪರಿಗೆ ದಾರಿ ತಪ್ಪಿ ಬೀಜಾಡಿಯಲ್ಲಿ ಕಡಲ ತೀರಕ್ಕೆ ಬಂದು ಮರಳಿನಲ್ಲಿ ಸಿಲುಕಿಕೊಂಡ ಘಟನೆ ಬುಧವಾರ ಸಂಭವಿಸಿದೆ.ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.
ಮಲ್ಪೆಯ ಬಂದರಿನಿಂದ ಎ. 30ರ ರಾತ್ರಿ 12 ಗಂಟೆಗೆ ಮೀನುಗಾರಿಕೆಗೆ ಈ ಬೋಟು ಹೊರಟಿದ್ದು, 7 ಮಂದಿ ಮೀನುಗಾರರಿದ್ದರು. ಎಲ್ಲರೂ ನಿದ್ದೆಗೆ ಜಾರಿದ ಪರಿಣಾಮ ಮೇ 1ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೀಜಾಡಿಯ ಗುÉ ಕ್ಲಿಚ್ ಬೀಚ್ ಕಾಟೇಜ್ ಬಳಿಯ ಕಡಲ ತೀರಕ್ಕೆ ಬಂದು ನಿಂತಿದೆ. ಗಾಳಿಯ ಪರಿಣಾಮದಿಂದಲೂ ಚಲಿಸುವ ಹಾದಿ ತಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
ಬೆಳಕು ಹರಿಯುತ್ತಿದ್ದಂತೆ ಸಮುದ್ರ ತಟದಲ್ಲಿ ದೊಡ್ಡ ದೋಣಿಯನ್ನು ಕಂಡು ಕುತೂಹಲದಿಂದ ಜನರು ಸೇರತೊಡಗಿದರು. ಬಂದರಿನಿಂದ ಅಳಿವೆ ಬಾಗಿಲಿನ ಮೂಲಕ ನೇರವಾಗಿ ಸಮುದ್ರ ಸೇರುವ ಆಳಸಮುದ್ರ ಬೋಟ್ ದಡಕ್ಕೆ ಬಂದು ನಿಂತಿರುವುದು ಕುತೂಹಲಕ್ಕೆ ಕಾರಣ. ಮೀನುಗಾರರೆಲ್ಲ ಬೋಟನ್ನು ತೊರೆದು ಹೋಗಿದ್ದರಿಂದ ಈ ಬೋಟ್ ಇಲ್ಲಿಗೇಕೆ ಬಂತು? ಹೇಗೆ ಬಂತು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸುವವರು ಯಾರೂ ಇರಲಿಲ್ಲ. ಬಳಿಕ ಅದು ಕೋಡಿ ಬೆಂಗ್ರೆಯ ವ್ಯಕ್ತಿಯೊಬ್ಬರ ಹೆಸರಲ್ಲಿ ನೋಂದಣಿಯಾಗಿರುವ ಬೋಟ್ ಆರೇಳು ಮಂದಿ ಪಾಲು ದಾರರಿದ್ದಾರೆ ಎಂಬಿತ್ಯಾದಿ ಮಾಹಿತಿ ಲಭ್ಯವಾಯಿತು.
ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ ರೆಸಾರ್ಟ್‌ಗಳಿಗೆ ಆಗಮಿಸುತ್ತಿರುವ ಪ್ರವಾಸಿಗರು ಹಾಗೂ ಪುಟ್ಟ ಮಕ್ಕಳಿಗೆ ದಡ ಸೇರಿದ ಬೋಟನ್ನು ಸನಿಹದಿಂದ ವೀಕ್ಷಿಸಲು ಅವಕಾಶ ಲಭಿಸಿತು.
ಸ್ಥಳಾಂತರ ಕಾರ್ಯ
ದಡಕ್ಕೆ ಬಂದಿದ್ದರಿಂದ ಬೋಟ್ ಎಂಜಿನ್‌ನ ಫ್ಯಾನಿನ ರೆಕ್ಕೆಗೆ ಸ್ವಲ್ಪ ಹಾನಿಯಾಗಿದೆ. ಅದನ್ನು ಸರಿಪಡಿಸಲಾಗಿದ್ದು, ಬುಧವಾರ ಅಪರಾಹ್ನದ ಬಳಿಕ ಜೆಸಿಬಿ, ಎರಡು ದೋಣಿಗಳ ಮೂಲಕ ಆಳಸಮುದ್ರಕ್ಕೆ ಎಳೆದು ತಂದು ಮಲ್ಪೆಯತ್ತ ಕೊಂಡೊಯ್ಯಲಾಯಿತು.