Advertisement
ಆಸ್ಪತ್ರೆಯ ಒಪಿಡಿ ವಿಭಾಗದ ಶೌಚಾಲಯದಲ್ಲಿ ಸಮಸ್ಯೆ ಇರುವ ಬಗ್ಗೆ ಓದುಗರೊಬ್ಬರು ನೀಡಿದ ದೂರನ್ನಾಧರಿಸಿ ಆಸ್ಪತ್ರೆಗೆ ತೆರಳಿದ ‘ಸುದಿನ’ ತಂಡವು ಸೌಲಭ್ಯಗಳನ್ನು ಪರಿಶೀಲಿಸಿತು. ಈ ವೇಳೆ ಮುರಿದ ಟ್ಯಾಪ್, ಫ್ಲಶ್ ಔಟ್ ಇಲ್ಲದ ಶೌಚಾಲಯ ಕಂಡು ಬಂತು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ತಲಾ ನಾಲ್ಕು ಶೌಚಾಲಯಗಳಿದ್ದು, ಈ ಪೈಕಿ ಎರಡೂ ಕಡೆಯೂ ತಲಾ ಒಂದು ಶೌಚಾಲಯಕ್ಕೆ ಬೀಗ ಹಾಕಿಡಲಾಗಿದೆ. ವೆನ್ಲಾಕ್ ಆಸ್ಪತ್ರೆಯು ರಾಜ್ಯದ ಅತ್ಯುತ್ತಮ ಸರಕಾರಿ ಆಸ್ಪತ್ರೆ ಎಂಬ ಖ್ಯಾತಿ ಗಳಿಸಿದೆ. ಆದರೆ ಸೇವೆಯ ಜತೆಗೆ ಮೂಲ ಸೌಕರ್ಯಗಳೂ ಸರಿಯಾಗಿರಬೇಕು.
ಇನ್ನು ಪುರುಷರ ಮತ್ತು ಮಹಿಳೆಯರ ಶೌಚಾಲಯದ ಹೊರಭಾಗದಲ್ಲಿ ರೋಗಿಗಳು ಅಥವಾ ಅವರ ಸಂಬಂಧಿಕರಿಗೆ ಮುಖ, ಕೈ ತೊಳೆಯುವುದಕ್ಕೆ ಬೇಸಿನ್ ಗಳನ್ನು ಹಾಕಲಾಗಿದೆ. ಆದರೆ ವಿಚಿತ್ರವೆಂದರೆ ಮಹಿಳೆಯರ ಹಾಗೂ ಪುರುಷರ ಶೌಚಾಲಯದಲ್ಲಿ ಅಳವಡಿಸಲಾದ ಎಲ್ಲ ಬೇಸಿನ್‌ಗಳ ಟ್ಯಾಪ್ ಮುರಿದಿದ್ದು, ತಿರುಗಿಸುವಾಗ ಅಲ್ಲಾಡುತ್ತಿದೆ. ಅಲ್ಲದೆ, ಈ ಮೂರೂ ಬೇಸಿನ್‌ಗಳಲ್ಲಿ ನೀರು ಬಾರದೇ, ರೋಗಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ರೋಗಿಗಳ ಸಂಬಂಧಿಕರು ಹೇಳುವ ಪ್ರಕಾರ, ಒಮ್ಮೊಮ್ಮೆ ಬೇಸಿನ್ ಟ್ಯಾಪ್‌ನಲ್ಲಿ ನೀರು ಬರುತ್ತದೆ. ಆದರೆ ನೀರು ಅಲಭ್ಯವಾದ ಸಂದರ್ಭದಲ್ಲಿ ಶೌಚಾಲಯದ ಟ್ಯಾಪ್ ನಿಂದ ನೀರು ತುಂಬಿಸಿ ತಂದು ಮುಖ, ಕೈಗಳನ್ನು ಶುಚಿಗೊಳಿಸಬೇಕಾಗುತ್ತದೆ ಎನ್ನುತ್ತಾರೆ.
Related Articles
ಹಲವಾರು ಸಮಯಗಳಿಂದ ಶೌಚಾಲಯದಲ್ಲಿ ಈ ರೀತಿಯ ಸಮಸ್ಯೆ ಇದೆ. ಈ ಬಗ್ಗೆ ವೆನ್ಲಾಕ್‌ನ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗೆ ಹಾಗೂ ಹಿಂದಿನ ಆರೋಗ್ಯ ಸಚಿವ ರಮೇಶ್‌ಕುಮಾರ್ ಅವರಿಗೆ ಪತ್ರ ಮುಖೇನ ತಿಳಿಸಲಾಗಿದೆ. ಆದಾಗ್ಯೂ ಅವ್ಯವಸ್ಥೆ ಮುಂದುವರಿದಿದೆ ಎಂದು ನಗರದ ನಿವಾಸಿ ಜಾಧವ್ ಮುಂಡೋಡು ತಿಳಿಸಿದ್ದಾರೆ.
Advertisement
ಶನಿವಾರವೇ ರಿಪೇರಿಆಸ್ಪತ್ರೆಯಲ್ಲಿ ನೀರಿನ ವ್ಯವಸ್ಥೆ ಸರಿಯಾಗಿದೆ. ಯಾವುದೇ ಸಮಸ್ಯೆ ಇಲ್ಲ. ಟ್ಯಾಪ್ ಮುರಿದು ಹೋಗಿರುವ ಹಿನ್ನೆಲೆಯಲ್ಲಿ ಒಂದು ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಫ್ಲಶ್ ಔಟ್ ಇಲ್ಲದ ಶೌಚಾಲಯಗಳಲ್ಲಿ ತತ್‌ಕ್ಷಣವೇ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ರಿಪೇರಿ ಮಾಡುವವರು ರಜೆಯಲ್ಲಿದ್ದು, ಶನಿವಾರ ಬೆಳಗ್ಗೆ ವೇಳೆಗೆ ಎಲ್ಲವನ್ನು ರಿಪೇರಿ ಮಾಡಿಸಲಾಗುವುದು.
– ಡಾ| ರಾಜೇಶ್ವರಿ ದೇವಿ,
ವೈದ್ಯಕೀಯ ಅಧೀಕ್ಷಕಿ, ವೆನ್ಲಾಕ್‌ಆಸ್ಪತ್ರೆ ಧನ್ಯಾ ಬಾಳೆಕಜೆ