ಮಂಡ್ಯ: ಮಹಿಳೆಯರ ಸಮಸ್ಯೆಗಳು, ಸವಾಲುಗಳ ಕುರಿತು ಬೆಳಕು ಚೆಲ್ಲಬೇಕಾದ ಸ್ತ್ರೀಶಕ್ತಿ ಸಂಘಗಳಲ್ಲಿ ಪ್ರಸ್ತುತ ಲೇವಾದೇವಿ ವ್ಯವಹಾರ ಬಿರುಸಿನಿಂದ ನಡೆಯುತ್ತಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ದೇವಿ ಅಸಮಾಧಾನ ವ್ಯಕ್ತಪಡಿಸಿದರು.
ಸಮಸ್ಯೆಗಳ ಬಗ್ಗೆ ಪ್ರಶ್ನಿಸುತ್ತಿಲ್ಲ: ಸಾಲ ಪಡೆದ ಮಹಿಳೆಯರು ನಿಗದಿತ ದಿನಕ್ಕೆ ಸರಿಯಾಗಿ ಹಣ ಕಟ್ಟದಿದ್ದರೆ, ಸಂಘದ ಇತರೆ ಮಹಿಳೆಯರು ಪ್ರಶ್ನಿಸುತ್ತಾರೆ. ಆದರೆ, ಬೀದಿದೀಪ, ಚರಂಡಿ ವ್ಯವಸ್ಥೆ, ಬಸ್ ಸೌಲಭ್ಯ, ಕೂಲಿ, ಸಮಾನ ವೇತನ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳನ್ನು ಮಹಿಳೆಯರು ಪ್ರಶ್ನಿಸುವುದೇ ಇಲ್ಲ. ಇದರಿಂದಾಗಿ ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಗಳಲ್ಲಿ ಮಹಿಳೆಯರ ಕಣ್ಣೊರೆಸಿ ಮತ ಕೇಳುವ ಕಾರ್ಯ ನಡೆಯುತ್ತಿದೆ. ಚುನಾವಣೆ ನಂತರ ನಾವು ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಧಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನೂ ತಿಳಿಯದ ಮಹಿಳೆಯರು ಧಾರಾವಾಹಿ, ಮದುವೆ, ತಿಥಿ ಕಾರ್ಯಗಳಲ್ಲಿ ನಿರತರಾಗಿ ಪ್ರಸ್ತುತ ವಿದ್ಯಮಾನಗಳನ್ನು ತಿಳಿಯದೆ ದೂರ ಉಳಿಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸೌಲಭ್ಯ ವಂಚನೆ: ಹೆಣ್ಣು ಭ್ರೂಣಾವಸ್ಥೆಯಿಂದ ಹಿಡಿದು ವೃದ್ಧಾಪ್ಯದವರೆಗೂ ನಿರಂತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ದುಡಿಯುವ ಮಹಿಳೆಗೆ ಬೆಲೆ ಇಲ್ಲದಂತಾಗಿದೆ. ಮನೆಯಲ್ಲಿ ದಿನನಿತ್ಯ ಬೆವರು ಹರಿಸುವ ಮಹಿಳೆಗೆ ಸಂಬಳ ಇಲ್ಲ. ಮಹಿಳೆಯರು ತಮ್ಮ ಹಕ್ಕು ಪಡೆದುಕೊಳ್ಳಲಾಗದೆ, ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸ್ತ್ರೀ ಸಮಾಜ ತನ್ನ ಜೀವಿತಾವಧಿಯಲ್ಲಿ ತಂದೆ-ಗಂಡ-ಮಗನ ಅಧೀನದಲ್ಲಿ ಬದುಕಬೇಕು ಎಂಬ ಮನುಸ್ಮೃತಿಯ ನಿಬಂಧನೆಗಳಿಗನುಗುಣವಾಗಿ ಪ್ರಸ್ತುತ ದೇಶದ ಆಡಳಿತ ವ್ಯವಸ್ಥೆ ಸಾಗುತ್ತಿದೆ ಎಂದು ಹೇಳಿದರು.
ಹಕ್ಕುಗಳಿಗಾಗಿ ಸಂಘಟಿತರಾಗಿ: ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳೆಯರಿಗೆ ಕೆಲಸ ದೊರೆಯುತ್ತಿಲ್ಲ. ಕೆಲವು ಪಿಡಿಒಗಳಿಗೆ ಉದ್ಯೋಗ ಖಾತ್ರಿ ಯೋಜನೆ ಕುರಿತು ಮಾಹಿತಿಯೇ ಇರುವುದಿಲ್ಲ. ಮಾಹಿತಿ ಇದ್ದರೂ ಕೂಡ ಗುತ್ತಿಗೆದಾರರ ಪರ ಕೆಲಸ ಮಾಡುತ್ತಾರೆ. ಬೇಸಿಗೆ ಅವಧಿಯಲ್ಲಿ ಗ್ರಾಮಗಳಲ್ಲಿ ಕೂಲಿ ಕೆಲಸ ಸಿಗುತ್ತಿಲ್ಲ. ಜೀವನೋಪಾಯಕ್ಕಾಗಿ ಗ್ರಾಮೀಣ ಭಾಗದ ಮಹಿಳೆಯರು ಮನೆಗೆಲಸಕ್ಕೆ ಹೋಗುವಂತಾಗಿದೆ. ಮಹಿಳೆಯರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಬೇರೆಯವರನ್ನು ಆಶ್ರಯಿಸಬಾರದು ಎಂದು ತಿಳಿಸಿದರು.
Advertisement
ನಗರದ ಗಾಂಧಿ ಭವನದಲ್ಲಿ ಜನವಾದಿ ಮಹಿಳಾ ಸಂಘಟನೆ ತಾಲೂಕು ಘಟಕ ‘ಹಿಂಸೆ ಇಲ್ಲದ ನಾಳೆ-ದೌರ್ಜನ್ಯ ಮುಕ್ತ ಬದುಕಿಗಾಗಿ’ ಘೋಷಣೆಯೊಂದಿಗೆ ಆಯೋಜಿಸಿದ್ದ ಮಂಡ್ಯ ತಾಲೂಕಿನ ಮಹಿಳೆಯರ ಐದನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ತ್ರೀಶಕ್ತಿ ಗುಂಪುಗಳ ಮೂಲಕ ಸಂಘಟಿತರಾಗಿರುವ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತದೆ ಕೇವಲ ಹಣ ವಸೂಲಿಗೆ ಸಭೆಗಳು ಸೀಮಿತಗೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
Related Articles
Advertisement
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನವಾದಿ ಮಹಿಳಾ ಸಂಘಟನೆಯ ತಾಲೂಕು ಅಧ್ಯಕ್ಷೆ ಕೆ.ಎಸ್.ಸುನೀತಾ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾಧ್ಯಕ್ಷ ಜಿ.ರಾಮಕೃಷ್ಣಘಿ, ಎಐಡಿಡಬ್ಲ್ಯೂಎ ಜಿಲ್ಲಾ ಕಾರ್ಯದರ್ಶಿ ಸುನೀತಾ, ಜಿಲ್ಲಾ ಖಜಾಂಚಿ ಶೋಭಾ, ಜಿಲ್ಲಾ ಸಹ ಕಾರ್ಯದರ್ಶಿ ಮಂಜುಳ, ಮದ್ದೂರು ತಾಲೂಕು ಅಧ್ಯಕ್ಷೆ ಡಿ.ಕೆ.ಲತಾ, ಮಳವಳ್ಳಿ ತಾಲೂಕು ಅಧ್ಯಕ್ಷೆ ಸುಶೀಲ, ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಪುಷ್ಪಾ, ಅಕ್ಷರ ದಾಸೋಹ ಸಂಘಟನೆ ಜಿಲ್ಲಾ ಮುಖಂಡರಾದ ಪುಟ್ಟಮ್ಮ, ರಾಣಿ ಮತ್ತಿತರರು ಹಾಜರಿದ್ದರು.
ದೌರ್ಜನ್ಯಕ್ಕೆ ಕೊನೆ ಎಂದು?
ಪ್ರಧಾನಿ ನರೇಂದ್ರ ಮೋದಿ ಅಧಿಕಾರಾವಧಿಯಲ್ಲಿ ಮಹಿಳೆಯರ ಕೊಲೆ, ಅತ್ಯಾಚಾರ ಸೇರಿದಂತೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಇವುಗಳಿಗೆ ಅಂತ್ಯವಿಲ್ಲವೇ ಎಂದು ಪ್ರಶ್ನಿಸಿದ ಅವರು, ರಾಯಚೂರಿನ ಮಧು, ಬಿಜಾಪುರದ ದಾನಮ್ಮ ಇತರೆ ಪ್ರಕರಣಗಳು ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿವೆ. ಒಂದು ವರ್ಷದಿಂದ ವೃದ್ಧ ಮಹಿಳೆಯರ ಮೇಲೂ ಅತ್ಯಾಚಾರ ನಡೆಯುತ್ತಿದೆ. ಇವುಗಳಿಗೆ ಕೊನೆ ಎಂದು ದೇವಿ ಪ್ರಶ್ನಿಸಿದರು. ದೇಶದ ಕಾನೂನು ವ್ಯವಸ್ಥೆ ತ್ವರಿತ ಗತಿಯಲ್ಲಿ ಸಾಗುತ್ತಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ 100 ಆರೋಪಿಗಳಲ್ಲಿ 10 ಜನರಿಗೆ ಮಾತ್ರ ಶಿಕ್ಷೆಯಾಗುತ್ತಿದೆ. ಕೆಲವು ಪ್ರಕರಣಗಳು ಆರೇಳು ವರ್ಷದ ನಂತರ ತೀರ್ಪು ಪ್ರಕಟಗೊಳ್ಳುವುದರಿಂದ ಸಾಕ್ಷಿ ನಾಶ ಮಾಡುವ ಕಾರ್ಯ ಹೆಚ್ಚಾಗಿ ನಡೆಯುತ್ತಿದೆ. ಹಣ, ಜನ, ಅಧಿಕಾರ ಬಲದಿಂದ ದೌರ್ಜನ್ಯ ನಡೆಸಿದರಿಗೆ ಅನುಕೂಲವಾಗುವಂತೆ ಸಾಕ್ಷಿಗಳು ಕೆಲಸ ಮಾಡುತ್ತಿವೆ. ಹೀಗಾಗಿ ಅತ್ಯಾಚಾರ, ವರದಕ್ಷಿಣೆ ಸೇರಿದಂತೆ ಮಹಿಳೆಯರ ಮೇಲೆ ನಡೆಯುವ ಇತರೆ ಕಿರುಕುಳವನ್ನು ತ್ವರಿತ ಗತಿಯಲ್ಲಿ ನಿವಾರಿಸಲು ಪ್ರತಿ ಜಿಲ್ಲೆಗಳಲ್ಲೂ ಮಹಿಳಾ ನ್ಯಾಯಾಲಯ ಸ್ಥಾಪನೆ ಮಾಡಬೇಕು. ಮಹಿಳಾ ಪ್ರಕರಣಗಳು 6 ತಿಂಗಳೊಳಗೆ ಇತ್ಯರ್ಥಗೊಳ್ಳಬೇಕು ಎಂದು ಆಗ್ರಹಿಸಿದರು.