ಬಸವಕಲ್ಯಾಣ: ಬೆಳಗಾದರೆ ಸಾಕು ಬಿಂದಿಗೆ ನೀರಿಗಾಗಿ ಮಹಿಳೆಯರು, ಮಕ್ಕಳು ಒಂದು ಕಿ.ಮೀ. ದೂರ ನಡಿಯಬೇಕು. ಬಾವಿ ಕಟ್ಟೆ ಮೇಲೆ ನಿಂತು ಜೀವದ ಹಂಗು ತೊರೆದು ನೀರು ಮೇಲೆತ್ತಬೇಕು. ಇಲ್ಲಿ ಸ್ವಲ್ಪ ಆಯ ತಪ್ಪಿದರೂ ಸಾವು ನೋವು ಖಚಿತ…
ಇದು ಬಸವಕಲ್ಯಾಣ ತಾಲೂಕಿನ ಖೇಡಾ (ಬಿ) ಗ್ರಾ.ಪಂ. ವ್ಯಾಪ್ತಿಯ ಹಿರನಾಗಾಂವ್ ಗ್ರಾಮದಲ್ಲಿನ ನೀರಿನ ಸಮಸ್ಯೆಯ ವಾಸ್ತವ ಚಿತ್ರಣ. ಗ್ರಾಮದಲ್ಲಿ ಎರಡು ಕೊಳವೆಬಾವಿ ಹಾಗೂ ಎರಡು ಬಾವಿಗಳು ಇವೆ. ಆದರೂ ಜನಪ್ರತಿನಿಧಿಗಳ ಮತ್ತು ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸಿಗೆ ಮುನ್ನವೇ ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ.
ಕೊಳವೆ ಬಾವಿಗಳಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತದೆ. ನೀರು ಬಂದರೂ ಪ್ರತಿಯೊಬ್ಬರಿಗೆ ಒಂದು ಅಥವಾ ಎರಡು ಬಿಂದಿಗೆ ಮಾತ್ರ ಸಿಗುತ್ತದೆ. ಹಾಗಾಗಿ ನಿತ್ಯ ಒಂದು ಕಿ.ಮೀ.ದೂರದ ಹೊರ ವಲಯದ ಬಾವಿಯ ಕಟ್ಟೆಗೆ ತೆರಳಿ, ಜೀವದ ಹಂಗು ತೊರೆದು ನೀರು ಮೇಲೆತ್ತಿಕೊಂಡು ಎರಡೂ ಭುಜದ ಮೇಲೆ, ಬೈ ಅಥವಾ ಸೈಕಲ್ ಮೇಲೆ ಕೊಡ ಹೊತ್ತುಕೊಂಡು ಬರಬೇಕಾಗಿದೆ.
ಬೇಸಿಗೆ ಕಾಲದಲ್ಲಿ ಬಾವಿಯಲ್ಲಿ ನೀರು ಕಡಿಮೆ ಆಗುತ್ತವೆ. ಅಂತಹ ಸಂದರ್ಭದಲ್ಲಿ ಹಗ್ಗದಿಂದ ಬಾವಿಯಲ್ಲಿ ಇಳಿದು ನೀರು ತುಂಬಿಕೊಳ್ಳಬೇಕು. ಬಿಸಿಲು ಹೆಚ್ಚಾದಾಗ ಬಾವಿಯಲ್ಲಿ ನೀರು ಸಂಪೂರ್ಣ ಬತ್ತುತ್ತವೆ. ಆ ಸಮಯದಲ್ಲಿ ಬಿಂದಿಗೆ ಹಿಡಿದುಕೊಂಡು ನೀರಿಗಾಗಿ ಗದ್ದೆಗಳಿಗೆ ತಿರುಗಾಡಬೇಕಾಗುತ್ತದೆ ಎಂದು ಗ್ರಾಮಸ್ಥ ಗಣೇಶ ಅಳಲು ತೋಡಿಕೊಂಡರು.
ಸರ್ಕಾರದಿಂದ ಮಂಜೂರಾದ ಕೊಳವೆ ಬಾವಿಗಳನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ಹಲವು ವರ್ಷಗಳಿಂದ ಬೇಸಿಗೆ ಕಾಲದಲ್ಲಿ ಭೀಕರ ಸಮಸ್ಯೆ ಉದ್ಭವಿಸುತ್ತದೆ. ಆದರೆ ಜನಪ್ರತಿನಿಧಿಗಳು ಮಾತ್ರ ನಮ್ಮ ಕಡೆ ತಿರುಗಿ ನೋಡುತ್ತಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಬೇಸಿಗೆ ಮುನ್ನವೇ ನೀರಿನ ಸಮಸ್ಯೆ ಎದುರಿಸುವಂತಾಗಿದ್ದು, ಗ್ರಾಮದಲ್ಲಿನ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.