ಕಾರವಾರ: ನೀರಿನ ಮೂಲಗಳು ಒಣಗಲು ಆರಂಭ ಆಗಿರುವುದರಿಂದ, ತಾಲೂಕಿನ ವಿವಿಧೆಡೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ನಗರ ವ್ಯಾಪ್ತಿಯ ಬಿಣಗಾ, ಬೈತಖೋಲ್, ಸೀತಾನಗರ, ಜೈಲ್ವಾಡಾ, ನ್ಯೂ ಕೆಎಚ್ಬಿ ಕಾಲೊನಿ, ಗುನಗಿವಾಡಾ, ನಂದನಗದ್ದಾ, ಕೋಡಿಬಾಗ ಮುಂತಾದೆಡೆ ಬಾವಿ, ಬೋರ್‌ವೆಲ್ಗಳ ನೀರು ತಳಮಟ್ಟ ತಲುಪಿದ್ದು, ನೀರಿನ ಬವಣೆ ಏಪ್ರಿಲ್ ಅಂತ್ಯದಲ್ಲೇ ಶುರುವಾಗಿದೆ.
ನಗರಸಭೆ ಗಂಗಾವಳಿ ನದಿಯ ನೀರನ್ನು ಪೈಪ್‌ಲೈನ್ ಮೂಲಕ ನಗರದ ಸಾರ್ವಜನಿಕರಿಗೆ ದಿನ ಬಿಟ್ಟು ದಿನಕ್ಕೊಮ್ಮೆ ಪೂರೈಸುತ್ತಿತ್ತು. ಈಗ ಗಂಗಾವಳಿ ನದಿಯಲ್ಲಿ ನೀರಿನ ಸಂಗ್ರಹ 1 ಮೀಟರ್‌ಗೆ ಇಳಿದಿದೆ. ಕಾರವಾರ ನಗರವಲ್ಲದೇ, ಸೀಬರ್ಡ್ ಯೋಜನಾ ವಸತಿ ಪ್ರದೇಶ, ಬಿಣಗಾದ ಆದಿತ್ಯ ಬಿರ್ಲಾ ಕೆಮಿಕಲ್ಸ್ ಲಿಮಿಟೆಡ್ ಕಂಪನಿ ನೌಕರರ ವಸತಿ ಪ್ರದೇಶ, ಅಂಕೋಲಾ ಪಟ್ಟಣ ಗಂಗಾವಳಿ ನದಿ ನೀರು ಅವಲಂಬಿಸಿವೆ.
ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಬಾವಿ ಮತ್ತು ಬೋರ್‌ವೆಲ್ ನೀರು ಅವಲಂಬಿಸಿವೆ. ಅಲ್ಲಿನ ಕೆಲ ವಾಡಾಗಳಿಗೆ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಕಾರವಾರ-ಅಂಕೋಲಾ ನೀರು ಸರಬರಾಜು ಮಂಡಳಿ ಈಗಾಗಲೇ ಪ್ರಕಟಣೆ ಹೊರಡಿಸಿ, ಇನ್ನು ಮುಂದೆ ನಗರ, ಪಟ್ಟಣಗಳಲ್ಲಿ 2 ದಿನಗಳಿಗೊಮ್ಮೆ ಮಾತ್ರ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದೆ.
ಕಾಳಿನದಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಪೈಕಿ ಕೆರವಡಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬದಿಂದ ತಾಲೂಕಿನ ಕಾಳಿ ನದಿ ಎಡ-ಬಲ ದಂಡೆಯಲ್ಲಿ ವಾಸಿಸುವ ಜನರಂತೂ ನೀರಿನ ಹಾಹಾಕಾರದಿಂದ ಒದ್ದಾಡುತ್ತಿದ್ದಾರೆ. ಬಲ ದಂಡೆಯ ಸದಾಶಿವಗಡ, ಚಿತ್ತಾಕುಲ, ಅಸ್ನೋಟಿ, ಹಣಕೋಣ, ಗೋಪಶಿಟ್ಟಾ, ಬಾಳ್ನಿ ಮುಂತಾದ ಗ್ರಾಮಗಳ ಬಾವಿ, ಬೋರ್‌ವೆಲ್ಗಳಿಗೆ ಉಪ್ಪು ನೀರು ಸೇರಿಕೊಳ್ಳುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಂಡಿದೆ. ಅದೇ ರೀತಿ ನದಿಯ ಎಡ ದಂಡೆಯ ಮಖೇರಿ, ಕಡವಾಡ, ಕಿನ್ನರ್, ವೈಲ್ವಾಡಾ, ಖಾರ್ಗಾ, ಸಿದ್ಧರ್ ಮುಂತಾದ ಪ್ರದೇಶಗಳ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ಕಾಳಿ ನದಿಯ ಉಪ್ಪು ನೀರು ದಡದ ಮೇಲಿನ ಸಿಹಿ ನೀರಿನ ಬಾವಿ,ಬೋರ್‌ವೆಲ್ಗಳ ಜಲಮೂಲಗಳಿಗೆ ಸಂಗ್ರಹವಾಗಿ ಭಾರಿ ಸಮಸ್ಯೆ ತಂದೊಡ್ಡಿದೆ.
ಇದಲ್ಲದೇ ಪಶ್ಚಿಮ ಘಟ್ಟದ ಸೆರಗಿನಿಂದ ಪಶ್ಚಿಮಾಭಿಮುಖವಾಗಿ ಹರಿಯುವ ಕಾಳಿ ನದಿಯ ಎಡ, ಬಲ ದಂಡೆಯ ಜನರು ಹೆಚ್ಚಾಗಿ ಗುಡ್ಡಗಾಡಿನ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅವರ ಸಮಸ್ಯೆಯಂತೂ ಹೇಳತೀರದು. ಹೆಚ್ಚಿನ ಜನರು ಗ್ರಾಪಂ ನೀರನ್ನು ಅವಲಂಬಿಸಿದ್ದು, ನೀರಿನ ಪೂರೈಕೆ ಇಲ್ಲದೇ ಒದ್ದಾಡುವಂತಾಗಿದೆ. ಪಂಚಾಯತಿನವರು ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಿದ್ದರೂ ಕೊಡ ಹಿಡಿದು ಸರತಿ ಸಾಲಿನಲ್ಲಿ ನಿಂತು ಸೀಮಿತ ಪ್ರಮಾಣದ ನೀರು ಪಡೆಯುವ ಪರಿಸ್ಥಿತಿ ಗ್ರಾಮೀಣ ಜನರದ್ದಾಗಿದೆ.
ಕೆಎಚ್ಬಿ ಬವಣೆ: ನಗರದ ನ್ಯೂ ಕೆಎಚ್ಬಿ ಕಾಲೊನಿಯಲ್ಲಿ ವರ್ಷದ 365 ದಿನವೂ ಜನರು ನೀರಿನ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ಇಲ್ಲಿ ನಿರ್ಮಿಸಲಾಗಿರುವ ಮನೆಗಳು ಇಕ್ಕಟ್ಟಿನಲ್ಲಿರುವುದರಿಂದ ಬಹುತೇಕ ಮನೆಗಳ ನೀರಿನ ಬಾವಿ, ಬೋರ್‌ವೆಲ್ಗಳು ಚರಂಡಿ ಪಕ್ಕದಲ್ಲೇ ಇವೆ. ಹೀಗಾಗಿ ಇವುಗಳ ನೀರು ಕುಡಿಯುವ ಗಣಮಟ್ಟದಲ್ಲಿರುವುದಿಲ್ಲ. ಈ ಕಾರಣದಿಂದ ಇಲ್ಲಿನ ಜನರು ನಗರಸಭೆ ನಳದ ನೀರನ್ನೇ ಅವಲಂಬಿಸಿದ್ದಾರೆ. ಕಡು ಬೇಸಿಗೆ ಕಾರಣದಿಂದ ಗಂಗಾವಳಿ ನೀರು ಪೂರೈಕೆಯು 2 ದಿನಗಳಿಗೊಮ್ಮೆ ಆಗುವುದರಿಂದ ಇಲ್ಲಿನ ಜನರು ಕುಡಿಯುವ ನೀರಿಗಾಗಿ ಪರದಾಡಬೇಕಾಗುತ್ತದೆ.
ಅಂಕೋಲಾದ ಗಂಗಾವಳಿ ನದಿ ನೀರನ್ನು ಕೃಷಿ ಹಾಗೂ ಕುಡಿಯುವ ಉದ್ದೇಶಕ್ಕಾಗಿ ಅತಿಯಾಗಿ ಬಳಸಲಾಗುತ್ತಿದೆ. ಹೀಗಾಗಿ ನದಿ ನೀರು ಬರಿದಾಗುತ್ತಿದೆ. ಕುಡಿಯಲು ಯೋಗ್ಯ ಇರುವ ನೀರಿನ ಬಾವಿಗಳನ್ನು ಗುರುತಿಸಿ ನಗರದ ಬೈತಖೋಲ್, ಸೀತಾನಗರ, ಜೈಲ್ವಾಡಾ ಮುಂತಾದ ಅವಶ್ಯಕತೆ ಇರುವ ಪ್ರದೇಶಗಳಿಗೆ ಈಗಾಗಲೇ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡುವ ಕಾರ್ಯ ಆರಂಭವಾಗಿದೆ. •ಎಸ್.ಯೋಗೇಶ್ವರ ನಗರಸಭೆ ಪೌರಾಯಕ್ತರು, ಕಾರವಾರ.
ನಗರಸಭೆ ಗಂಗಾವಳಿ ನದಿ ನೀರನ್ನು ಎರಡು ದಿನಕ್ಕೊಮ್ಮೆ ಪೂರೈಕೆ ಮಾಡಿದರೆ, ನ್ಯೂ ಕೆಎಚ್ಬಿ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಾಡಲಿದೆ. ನಗರಸಭೆ ಈ ಕಾಲೂನಿಗೆ ನೀರಿನ ಟ್ಯಾಂಕರ್ ಕಳಿಸಬೇಕಾದ ಸನ್ನಿವೇಶ ನಿರ್ಮಾಣವಾಗಬಹುದು. •ಆದಿಲ್ ಶೇಖ್ ನ್ಯೂ ಕೆಎಚ್ಬಿ, ಕಾರವಾರ.
ನಾಗರಾಜ್ ಹರಪನಹಳ್ಳಿ