ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡ ಭೂ ವಿವಾದ ಪ್ರಕರಣದ ವಿಚಾರಣೆಯ ಕೊನೆಯ ದಿನವಾದ ಬುಧವಾರ ಸುಪ್ರೀಂಕೋರ್ಟ್ ನಲ್ಲಿ ಹೈಡ್ರಾಮಾ, ನಾಟಕೀಯ ಬೆಳವಣಿಗೆಯಲ್ಲಿ ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್ ಧವನ್ ರಾಮಜನ್ಮಭೂಮಿ ನಕ್ಷೆಯನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಮುಸ್ಲಿಂ ವಕ್ಫ್ ಬೋರ್ಡ್ ಪರ ವಕೀಲರಾಗಿ ರಾಜೀವ್ ಧವನ್ ವಾದ ಮಂಡಿಸಲು ಕೋರ್ಟ್ ಗೆ ಹಾಜರಾಗಿದ್ದರು. ಏತನ್ಮಧ್ಯೆ ಆಲ್ ಇಂಡಿಯಾ ಹಿಂದೂ ಮಹಾಸಭಾದ ವಕೀಲರಾದ ವಿಕಾಸ್ ಸಿಂಗ್ ಅವರು ಕುನಾಲ್ ಕಿಶೋರ್ ಪ್ರಕಟಣೆಯ ಪುಸ್ತಕದಲ್ಲಿರುವ ರಾಮಜನ್ಮಭೂಮಿ ನಕ್ಷೆಯನ್ನು ಪುರಾವೆಯನ್ನಾಗಿ ಕೋರ್ಟ್ ಗೆ ಸಲ್ಲಿಸಲು ಮುಂದಾಗಿದ್ದರು.
ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಜನ್ಮ ಸ್ಥಾನ ಇತ್ತು ಎಂಬುದಕ್ಕೆ ಪುರಾವೆಯಾಗಿ ವಿಕಾಸ್ ನಕ್ಷೆಯನ್ನು ನೀಡಿದ್ದರು. ಆಗ ಏಕಾಏಕಿ ಮುಸ್ಲಿಂ ಸಂಘಟನೆ ಪರ ವಕೀಲ ರಾಜೀವ್ ಧವನ್ ಅವರು ನಕ್ಷೆಯನ್ನು ಹರಿದು ಹಾಕಿದ್ದರು.
ಸುಪ್ರೀಂಕೋರ್ಟ್ ಈ ಪುಸ್ತಕದಲ್ಲಿರುವ ನಕ್ಷೆಯನ್ನು ಪುರಾವೆಯನ್ನಾಗಿ ನಂಬಬಾರದು ಎಂದು ವಕೀಲ ರಾಜೀವ್ ಧವನ್ ಅವರು ವಿನಂತಿಸಿಕೊಂಡಿದ್ದರು. ನಿಮಗೆ ಈಗ ಏನು ಬೇಕಾಗಿದೆ ಎಂದು ಸಿಜೆಐ ರಂಜನ್ ಗೋಗೊಯಿ ಪ್ರಶ್ನಿಸಿದ್ದು, ನೀವು ಮತ್ತೆ ಇದನ್ನು ಹರಿಯುತ್ತೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ನೀವು(ಧವನ್) ಶಿಷ್ಟಾಚಾರವನ್ನು ಹಾಳುಗೆಡುವುತ್ತಿದ್ದೀರಿ. ಶಿಷ್ಟಾಚಾರ ಪಾಲಿಸದೇ ಹೋದರೆ, ಇದೇ ರೀತಿಯಲ್ಲಿ ಪ್ರಕ್ರಿಯೆ ಮುಂದುವರಿದರೆ ನಾವು ನಮ್ಮ ಸ್ಥಾನದಿಂದ ಎದ್ದು ಹೋಗಬೇಕಾಗುತ್ತದೆ ಎಂದು ಸಿಜೆಐ ಎಚ್ಚರಿಕೆ ನೀಡಿರುವು ಪ್ರಸಂಗ ನಡೆಯಿತು.