ವರ್ಷಂಪ್ರತಿ ಸಮಸ್ಯೆ
ಎಲ್ಲೂರು ಗ್ರಾ.ಪಂ. ವ್ಯಾಪ್ತಿಯ ಕುಂಜೂರು ದುರ್ಗಾ ನಗರಕ್ಕೆ ತಾಗಿ ಕೊಂಡಿರುವ ಸುಮಾರು 12 ಎಕರೆ ಪ್ರದೇಶ ದಲ್ಲಿ ಯಾವುದೇ ಚರಂಡಿ ವ್ಯವಸ್ಥೆಯಿಲ್ಲದೇ, ಸೆಟ್ ಬ್ಯಾಕ್‌ನ ವ್ಯವಸ್ಥೆಯಿಲ್ಲದೇ ಖಾಸಗಿ ಬಡಾವಣೆ ನಿರ್ಮಾಣಗೊಂಡಿದೆ. ಇದರಿಂದ ತಗ್ಗು ಪ್ರದೇಶದಲ್ಲಿರುವ ಮೂರ್‍ನಾಲ್ಕು ಮನೆಗಳ ನಿವಾಸಿಗಳು ಮಳೆಗಾಲದಲ್ಲಿ ವರ್ಷಂಪ್ರತಿ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಾರಿ ಮುಂಗಾರು ಮುನ್ನ ಉತ್ತಮ ಮಳೆಯಾಗುತ್ತಿರುವುದರಿಂದ ಸಮಸ್ಯೆ ಉಲ್ಬಣಿಸಿದೆ.
ಅಂಗಳಕ್ಕೆ ಮಣ್ಣು
ಕುಂಜೂರು ನಿವಾಸಿಗಳಾದ ಶ್ಯಾಮ ದೇವಾಡಿಗ, ಗೋಪಿ ಪೂಜಾರಿ¤, ವನಜ ಶೆಡ್ತಿ, ರಾಮ ದೇವಾಡಿಗ ಎಂಬವರ ಮನೆಯ ಸುತ್ತಲೂ ಖಾಸಗಿ ವಸತಿ ಬಡಾವಣೆಯ ನೀರು ನೇರವಾಗಿ ಹರಿದು ಬರುತ್ತಿದ್ದು, ಕೆಲವೊಮ್ಮೆ ಈ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಂತೆ ಭಾಸವಾಗುತ್ತವೆ. ಮಾತ್ರವಲ್ಲದೇ ಕೆಲವು ಬಾವಿಗಳಿಗೆ ಕೆಸರು ನೀರು ಹರಿದು ಬರುವುದು, ಕೆಲವು ಮನೆಗಳ ಅಂಗಳದಲ್ಲಿ ಕೆಸರು ಮಣ್ಣು ಶೇಖರಣೆ ಯಾಗುವುದು ಸಾಮಾನ್ಯವಾಗಿ ಬಿಟ್ಟಿದೆ.
ತಾತ್ಕಾಲಿಕ ವ್ಯವಸ್ಥೆಯೂ ಕೊಚ್ಚಿ ಹೋಯಿತು!:
ಕೆಸರು ನೀರು ಮತ್ತು ಕೆಸರು ಮಣ್ಣು ಬಾವಿ ಮತ್ತು ಅಂಗಳಕ್ಕೆ ಬಂದು ಶೇಖರಣೆಯಾದ ಹಿನ್ನೆಲೆಯಲ್ಲಿ ಎಲ್ಲೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಮತಾ ಶೆಟ್ಟಿ ಅವರು ಸಿಬಂದಿಗಳ ಜೊತೆ ಸೇರಿ ಮೇ 10ರಂದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಅಂದು ನೀಡಿದ್ದ ಭರವಸೆಯಂತೆ ಗ್ರಾಮ ಪಂಚಾಯತ್ ವತಿಯಿಂದ ಲೇಔಟ್ ವ್ಯಾಪ್ತಿಯಲ್ಲಿ ತೋಡು ತೆಗೆದು ನೀರು ಹರಿಯುವಂತೆ ಮಾಡಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದಾರಾದರೂ ಮೇ 17ರಂದು ಸುರಿದ ಭಾರೀ ಮಳೆಗೆ ಮತ್ತದೇ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
ತೋಡು ನಿರ್ಮಿಸಿ ನೀರು ಹರಿಯಲು ವ್ಯವಸ್ಥೆಕಲುಷಿತ ನೀರಿನ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಹಿಂದೆ ಖಾಸಗಿ ಲೇಔಟ್ ನಿರ್ಮಾಣವಾಗುವ ಸಂದರ್ಭ ಮುನ್ನೆಚ್ಚರಿಕೆ ವಹಿಸದ ಕಾರಣ ಹೀಗಾಗಿದೆ. ಜನರ ಬೇಡಿಕೆಗೆ ಅನುಸಾರವಾಗಿ ತೋಡು ನಿರ್ಮಿಸಿ ನೀರು ಹರಿಯಲು ವ್ಯವಸ್ಥೆ ಮಾಡಲಾಗುವುದು.
– ಮಮತಾ ಶೆಟ್ಟಿ ,ಎಲ್ಲೂರು ಗ್ರಾ.ಪಂ. ಪಿಡಿಒ
ಖಾಸಗಿ ಬಡಾವಣೆಯಿಂದ ಹರಿದು ಬರುವ ಮಳೆ ನೀರು ಸರಾಗವಾಗಿ ಹರಿದು ಹೋಗಲೆಂದು ಕಳೆದ ವರ್ಷ ಕಾಂಕ್ರೀಟ್ ತೋಡು ನಿರ್ಮಿಸಲಾಗಿದೆ. ಆದರೆ ಅದು ಕೂಡ ಮಳೆಗೆ ಕೊಚ್ಚಿ ಹೋಗುವ ಭೀತಿ ಎದುರಾಗಿದೆ. ಲೇಔಟ್‌ನ ಮಧ್ಯದಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಿಸಬೇಕಿದೆ. ಆದರೆ ಅದಕ್ಕೆ ಸಂಬಂಧಿಸಿದ ಕ್ರಿಯಾ ಯೋಜನೆ ಸಿದ್ಧ ಪಡಿಸಲು ನೀತಿ ಸಂಹಿತೆ ಅಡ್ಡಿಯಾಗಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು ತುರ್ತಾಗಿ ಸಮಸ್ಯೆ ಬಗೆ ಹರಿಸಲಿದ್ದೇವೆ.
– ಸತೀಶ್ ಶೆಟ್ಟಿ ಗುಡ್ಡೆಚ್ಚಿ ,ಗ್ರಾ.ಪಂ. ಸದಸ್ಯ