ಚಿಕ್ಕೋಡಿ: ಮಳೆಗಾಲದಲ್ಲಿ ಮೈದುಂಬಿ ಹರಿದು ಲಕ್ಷಾಂತರ ಜನರ ದಾಹ ತೀರಿಸುವ ಕೃಷ್ಣಾ ನದಿ ಬಿರು ಬೇಸಿಗೆಯಲ್ಲಿ ಬತ್ತಿ ಬೆಂಗಾಡಾದಾಗ ಜನ ಅದರಲ್ಲಿಯೇ ಬಾವಿ ತೋಡಿ ನೀರು ಪಡೆಯುವ ವಿದ್ಯಮಾನ ಈಚೆಗೆ ನಡೆಯುತ್ತಿದೆ.
ನದಿ ಬತ್ತಿ ಗುಟುಕು ನೀರಿಗೆ ಸಂಚಕಾರ ಸೃಷ್ಟಿಯಾಗಿ ನದಿ ಪಾತ್ರದ ಜನ ಜೆಸಿಬಿ ಯಂತ್ರ ಬಳಸಿಕೊಂಡು ಹೆಜ್ಜೆ ಹೆಜ್ಜೆಗೂ ಆಳುದ್ದ ಬಾವಿ ತೋಡಿಕೊಂಡು ನೀರು ಪಡೆದುಕೊಳ್ಳುತ್ತಿದ್ದಾರೆ.
ಮಡ್ಡಿ ಪ್ರದೇಶಗಳಲ್ಲಿ ರೈತರು ಬಾವಿ ತೋಡಿಕೊಂಡು ಅದರ ನೀರಿನಲ್ಲಿಯೇ ಜೀವನ ಸಾಗಿಸುತ್ತಿದ್ದರೂ. ಬಾವಿಯಲ್ಲಿ ನೀರು ಖಾಲಿಯಾದಾಗ ನದಿ ನೀರನ್ನೇ ಬಾವಿಗೆ ಹರಿಸಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಭೀಕರ ಬರಗಾಲದಲ್ಲಿ ವರ್ಷ ಪೂರ್ತಿ ತುಂಬಿ ಹರಿಯುವ ಕೃಷ್ಣಾ ನದಿಯೇ ಬತ್ತಿ ಹೋಗಿದೆ. ಹೀಗಿದ್ದಾಗ ಬಾವಿ, ಕೊಳವೆ ಬಾವಿ ಯಾವ ಲೆಕ್ಕ. ಆದರೂ ಬತ್ತಿದ ನದಿಯಲ್ಲಿ ಬಾವಿ ತೋಡುವ ಮೂಲಕ ನದಿ ಪಾತ್ರದ ಜನ ನೀರು ಪಡೆದುಕೊಳ್ಳುತ್ತಿದ್ದಾರೆ.
ನದಿಗೆ ಬಾರದ ನೀರು:
ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನಾಲ್ಕು ಟಿಎಂಸಿ ಅಡಿ ನೀರು ಹರಿಸಬೇಕೆಂದು ಉತ್ತರ ಕರ್ನಾಟಕದ ಬಿಜೆಪಿ ನಾಯಕರ ನಿಯೋಗ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ. ಅಲ್ಲದೇ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಬೆಳಗಾವಿ ವಿಭಾಗದ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿ ಕೊಯ್ನಾ ಜಲಾಶಯದಿಂದ ನೀರು ಬಿಡಲು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದೆ. ಆದರೂ ಕೂಡಾ ಮಹಾರಾಷ್ಟ್ರ ಸರ್ಕಾರ ಮಾತ್ರ ಕರ್ನಾಟಕ್ಕೆ ನೀರು ಹರಿಸಲು ವಿಳಂಬ ಮಾಡುತ್ತಿರುವುದು ಗಡಿ ಭಾಗದ ರೈತಾಪಿ ವರ್ಗದ ಜನರಲ್ಲಿ ಹತಾಶೆ ಹೆಚ್ಚಿಸಿದೆ.
ಗಡಿ ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಕೃಷ್ಣಾ ನದಿ ಪಾತ್ರದ ಚಿಕ್ಕೋಡಿ, ರಾಯಬಾಗ ಮತ್ತು ಅಥಣಿ ತಾಲೂಕಿನ ಸುಮಾರು 40 ಕ್ಕೂ ಹೆಚ್ಚಿನ ಹಳ್ಳಿಯ ಜನರು ನದಿಯಲ್ಲಿ ತಗ್ಗುಗಳನ್ನು ತೊಡಿಕೊಂಡು ನೀರು ಪಡೆಯುತ್ತಿದ್ದಾರೆ. ನದಿಗೆ ನೀರು ಹರಿಸಿ ಜನರ ಸಂಕಷ್ಟ ದೂರ ಮಾಡುವ ಸರ್ಕಾರ ಮೌನವಾಗಿದೆ.
ಗಡಿ ಭಾಗವಾಗಿರುವ ಚಿಕ್ಕೋಡಿ ಉಪವಿಭಾಗದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದರೂ ಜಿಲ್ಲಾ ಆಡಳಿತ ಮಾತ್ರ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳುತ್ತಿಲ್ಲ, ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಹರಿಸಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ ಎಂಬುದು ನದಿ ತೀರದ ಗ್ರಾಮಸ್ಥರ ಆಕ್ರೋಶವಾಗಿದೆ.
.ಮಹಾದೇವ ಪೂಜೇರಿ