ಹಾವೇರಿ: ಹಿಂದುಳಿದ ವರ್ಗದ ವೃತ್ತಿಪರ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ನೆರವಾಗುವ ರೀತಿಯಲ್ಲಿ ಸುಸಜ್ಜಿತ ವಸತಿ ನಿಲಯ ನಿರ್ಮಾಣ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ, ಶಾಸಕ ನೆಹರು ಓಲೇಕಾರ ಹೇಳಿದರು.
ನಗರದ ಸೃಷ್ಠಿ ಬಡಾವಣೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ನೂತನವಾಗಿ ನಿರ್ಮಿಸಲಿರುವ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನಾಳೆಯಿಂದ ಕಟ್ಟಡ ಕಾಮಗಾರಿ ಪ್ರಾರಂಭವಾಗಲಿದ್ದು, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರ ಮಾಡಲಾಗುವುದು. ದೂರದ ಊರಿನಿಂದ ಉನ್ನತ ಶಿಕ್ಷಣಕ್ಕಾಗಿ ನಗರಕ್ಕೆ ಆಗಮಿಸುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗುವ ರೀತಿಯಲ್ಲಿ 3.35 ಕೋಟಿ ವೆಚ್ಚದಲ್ಲಿ ವಸತಿ ನಿಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಕಟ್ಟಡದ ಮಾದರಿಯಲ್ಲೇ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರಿಗೂ 3.35 ಕೋಟಿ ವೆಚ್ಚದಲ್ಲಿ ವಸತಿ ನಿಲಯ ನಿರ್ಮಾಣ ಮಾಡಲಾಗುವುದು. ಈಗಾಗಲೇ ಹಾವೇರಿ ನಗರದಲ್ಲಿ ಜಮೀನು ಗುರುತಿಸಲಾಗಿದೆ. ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಿ ಕಟ್ಟಡ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವಗಿರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಗಿರೀಶ್ ಹೊಳಲು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರವೀಣ್.ಕೆ.ಎನ್, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಕಾರಿ ಎಂ.ಬಿ.ರಾಠೊಡ, ಕರ್ನಾಟಕ ಗೃಹ ಮಂಡಳಿ ಎಂಜಿನಿಯರ್ ನಾಗರಾಜ್ ನಂದಿ, ಮುನಿರುದ್ದೀನ್ ಅಹ್ಮದ್, ಆಶ್ರಯ ಸಮಿತಿ ಸದಸ್ಯೆ ಲಲಿತಾ ಗುಂಡೇನಹಳ್ಳಿ ಹಾಗೂ ಇತರರು ಇದ್ದರು.
ವಸತಿ ನಿಲಯ ಕಟ್ಟಡ ನಿರ್ಮಿಸಲು 15 ಗುಂಟೆ ನಿವೇಶನ ಒದಗಿಸಲಾಗಿದ್ದು, 7.5 ಗುಂಟೆಯಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ವಿದ್ಯಾವಂತರಾಗಿ ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು.
ನೆಹರು ಓಲೇಕಾರ, ಶಾಸಕರು