Advertisement

ಬೀದರಲ್ಲಿವೆ ಸುಸಜ್ಜಿತ ಕೋವಿಡ್‌ ಕೇರ್‌ ಸೆಂಟರ್‌ಗಳು!

08:36 PM May 21, 2021 | Team Udayavani |

ಬೀದರ: ಗಡಿ ನಾಡು ಬೀದರನಲ್ಲಿ ಕಿಲ್ಲರ್‌ ಕೊರೊನಾ ಸೋಂಕು ಅಬ್ಬರಿಸಿ ಕೊಂಚ ನಿಯಂತ್ರಣಕ್ಕೆ ಬರುತ್ತಿದ್ದರೂ ಸಾವಿರಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಸೋಂಕು ಹರಡುವುದನ್ನು ತಪ್ಪಿಸಲು ಹಾಗೂ ಸೋಂಕಿತರಿಗಾಗಿ ಜಿಲ್ಲಾಡಳಿತ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ತೆರೆದಿದೆ. ಆದರೆ ಕೇರ್‌ ಸೆಂಟರ್‌ಗೆ ಆಗಮಿಸುತ್ತಿರುವ ಸೋಂಕಿತರ ಸಂಖ್ಯೆ ಕಡಿಮೆಯಿದೆ.

Advertisement

ಏಪ್ರಿಲ್‌ ಕೊನೆ ವಾರದಿಂದ ಎರಡನೇ ಅಲೆ ರೂಪದಲ್ಲಿ ಅಪ್ಪಳಿಸಿದ ಹೆಮ್ಮಾರಿ ಕೊರೊನಾ ನಿತ್ಯ 400 ರಿಂದ 500 ಪಾಸಿಟಿವ್‌ ಪ್ರಕರಣಗಳು ವರದಿಯಾಗುವ ಮೂಲಕ ಆತಂಕ ಹೆಚ್ಚಿಸುತ್ತ ಬಂದಿತ್ತು. ಸಕ್ರಿಯ ಸೋಂಕಿತರ ಸಂಖ್ಯೆ 4 ಸಾವಿರದ ಗಡಿ ದಾಟಿತ್ತು. ಹಾಗಾಗಿ ಜಿಲ್ಲಾಡಳಿತದಿಂದ ಬೀದರ ನಗರ ಸೇರಿ 7 ಕೋವಿಡ್‌ ಕೇರ್‌ ಸೆಂಟರ್‌ಗಳನ್ನಾಗಿ ಗುರುತಿಸಿ, 693 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಗುರುವಾರದವರೆಗೆ ಜಿಲ್ಲೆಯಲ್ಲಿ 1820 ಸಕ್ರಿಯ ಪ್ರಕರಣಗಳಿದ್ದರೂ ಸದ್ಯ ಆರೈಕೆ ಕೇಂದ್ರಗಳಲ್ಲಿ ಇರುವ ಸೋಂಕಿತರ ಸಂಖ್ಯೆ 18 ಮಾತ್ರ.

ರೋಗ ಲಕ್ಷಣಗಳಿಲ್ಲದ ಕೊರೊನಾ ಸೋಂಕಿತರು ಮನೆಯಲ್ಲಿ ಚಿಕಿತ್ಸೆ (ಹೋಂ ಐಸೋಲೇಷನ್‌)ಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಕೋವಿಡ್‌ ಆರೈಕೆ ಕೇಂದ್ರಗಳತ್ತ ಬರಲು ಮನ ಮಾಡುತ್ತಿಲ್ಲ. ಇನ್ನು ಕೆಲವರು ಕೇರ್‌ ಸೆಂಟರ್‌ಗಳಲ್ಲಿ ಗುಣಮುಟ್ಟದ ಊಟ ಜತೆಗೆ ಮೂಲ ಸೌಕರ್ಯಗಳ ಕೊರತೆ ನೆಪವೊಡ್ಡಿ ದರೆ ಕೆಲ ಸೋಂಕಿತರು ಭಯದಿಂದ ಆರೈಕೆ ಕೇಂದ್ರಗಳಿಂದ ದೂರ ಉಳಿಯುತ್ತಿದ್ದಾರೆ. ನಗರ ಪ್ರದೇಶದ ಜತೆಗೆ ಈಗ ಗ್ರಾಮೀಣ ಭಾಗಕ್ಕೂ ಕೋವಿಡ್‌ ಸೋಂಕಿನ ಕರಾಳ ಛಾಯೆ ಆವರಿಸಿ ಮತ್ತಷ್ಟು ಭೀತಿ ಹೆಚ್ಚಿಸಿದೆ. ಸೌಮ್ಯ ಲಕ್ಷಣಗಳು ಹೊಂದಿದವರು ಸಮಯಕ್ಕೆ ಕೋವಿಡ್‌ ಪರೀಕ್ಷೆ, ಚಿಕಿತ್ಸೆ ಪಡೆಯದೇ ಸ್ಥಳೀಯ ವೈದ್ಯರು, ಅಂಗಡಿಗಳಲ್ಲೇ ಔಷಧ  ಪಡೆದುಕೊಳ್ಳುತ್ತಿದ್ದಾರೆ.

ರೋಗ ಉಲ್ಬಣಗೊಳ್ಳುತ್ತಿದ್ದಂತೆ ಆಸ್ಪತ್ರೆಯತ್ತ ದೌಡಾಯಿಸುತ್ತಿದ್ದಾರೆ. ಲಕ್ಷಣ ರಹಿತರಿಗೆ ಕೇರ್‌ ಸೆಂಟರ್‌ ಗಳಲ್ಲಿ ಐಸೋಲೇಷನ್‌ಗೆ ಸೂಚಿಸಲಾಗುತ್ತಿದ್ದರೂ ಮನೆಗಳಲ್ಲಿ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಆದರೆ, ಸೋಂಕಿತರಿಗೆ ಪ್ರತ್ಯೇಕ ಕೋಣೆ ವ್ಯವಸ್ಥೆ ಇಲ್ಲದ ಮನೆಗಳಲ್ಲಿ ರೋಗ ಇನ್ನಷ್ಟು ಜನರಿಗೆ ಹರಡುವ ಆತಂಕ ಮೂಡಿಸಿದೆ.

ಕೋವಿಡ್‌ ಲಕ್ಷಣವುಳ್ಳವರು ತಪಾಸಣೆಯಿಂದ ಬಿಟ್ಟು ಹೋಗಬಾರದೆಂಬ ಉದ್ದೇಶದಿಂದ ಜಿಲ್ಲಾದ್ಯಂತ ಮನೆ-ಮನೆ ಭೇಟಿ ಆರೋಗ್ಯ ತಪಾಸಣೆ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಲಾಗಿದೆ. ಜ್ವರ, ಕೆಮ್ಮು, ನೆಗಡಿ, ಮೈ-ಕೈ ನೋವು, ಗಂಟಲು ನೋವು ಹೊಂದಿದವರಿಗೆ ಸ್ಥಳದಲ್ಲೇ ರ್ಯಾಟ್‌ ಪರೀಕ್ಷೆ ನಡೆಸಿ, ಪಾಸಿಟಿವ್‌ ರೋಗಿಗಳನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ. ಸೋಂಕಿನ ಸರಪಳಿ ಕತ್ತರಿಸಲು ಹೊಂ ಐಸೋಲೇಷನ್‌ಗಿಂತ ಆರೈಕೆ ಕೇಂದ್ರ ಉತ್ತಮವಾಗಿದ್ದು ಸೋಂಕಿತರು ಎಲ್ಲ ವ್ಯವಸ್ಥೆ ಇರುವ ಕೇರ್‌ ಸೆಂಟರ್‌ಗಳತ್ತ ಮುಖ ಮಾಡಬೇಕಿದೆ.

Advertisement

ಕೇರ್‌ ಸೆಂಟರ್‌ಗಳು ಎಲ್ಲೇಲ್ಲಿವೆ?
ಬೀದರ ನಗರ ಸೇರಿ 7 ಕೋವಿಡ್‌ ಕೇರ್‌ ಸೆಂಟರ್‌ ಗಳನ್ನಾಗಿ ಗುರುತಿಸಲಾಗಿದ್ದು, 693 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಝೀರಾ ಕನ್ವೆಂಶನಲ್‌ ಹಾಲ್‌ (75 ಹಾಸಿಗೆ), ಶಾಹೀನ್‌ ಪಿಯು ಕಾಲೇಜು (128), ಬಸವಕಲ್ಯಾಣ ತಾಲೂಕಿನ ಖಾನಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ (250), ರಾಜ ರಾಜೇಶ್ವರಿ ಆಯುರ್ವೇದ ವೈದ್ಯ ಕಾಲೇಜು ಹುಮನಾಬಾದ (50), ಕಿತ್ತೂರ ರಾಣಿ ಚೆನ್ನಮ್ಮ ಶಾಲೆ (90) ಮತ್ತು ಭಾಲ್ಕಿಯ ಡಾ| ಅಂಬೇಡ್ಕರ್‌ ವಸತಿ ನಿಲಯದಲ್ಲಿ (100)
ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಲಾಗಿದೆ.

ಬೀದರ ಜಿಲ್ಲೆಯ ವಿವಿಧೆಡೆ 7 ಕೋವಿಡ್‌ ಕೇರ್‌ ಸೆಂಟರ್‌ಗಳು ಆರಂಭಿಸಿ, 693 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಆದರೆ, ಸದ್ಯ ಕೇಂದ್ರಗಳಲ್ಲಿ 18 ಜನ ಮಾತ್ರ ದಾಖಲಾಗಿದ್ದಾರೆ. ರೋಗ ಲಕ್ಷಣಗಳಿಲ್ಲದ ಕೊರೊನಾ ಸೋಂಕಿತರು ಹೋಮ್‌ ಐಸೋಲೇಷನ್‌ಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಕೋವಿಡ್‌ ಲಕ್ಷಣವುಳ್ಳವರು ತಪಾಸಣೆಯಿಂದ ಬಿಟ್ಟು ಹೋಗಬಾರದೆಂಬ ಉದ್ದೇಶದಿಂದ ಜಿಲ್ಲಾದ್ಯಂತ ಮನೆ-ಮನೆ ಭೇಟಿ ಆರೋಗ್ಯ ತಪಾಸಣೆ ಅಭಿಯಾನ ಆರಂಭಿಸಲಾಗಿದೆ.
ಡಾ| ಕೃಷ್ಣಾರೆಡ್ಡಿ, ಡಿಎಸ್‌ಒ, ಬೀದರ

*ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next