ವಾಡಿ: ಶತಮಾನಗಳಿಂದ ಈ ಗ್ರಾಮದ ಜನರಿಗೆ ಕುಡಿಯಲು ಸಿಹಿ ನೀರು ಹಂಚುತ್ತಿದ್ದ ಬಾವಿಗಳೀಗ ಏಕಾಏಕಿ ಕಲುಷಿತಗೊಂಡಿದ್ದು, ನೀರಿನಲ್ಲಿ ರಾಸಾಯನಿಕ ಮಿಶ್ರಣದ ವಾಸನೆ ಬರುತ್ತಿದೆ. ತಿಳಿ ನೀರಿನಲ್ಲಿ ಹಸಿರು ಪಾಚಿ ಕಾಣಿಸಿಕೊಂಡಿದೆ. ನಿತ್ಯ ಕುಡಿಯಲು ನೀರು ಪಡೆಯುತ್ತಿದ್ದ ಗ್ರಾಮಸ್ಥರು ಈಗ ಬಾವಿ ಹತ್ತಿರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಜಿಪಂ ಕೇಂದ್ರ ಸ್ಥಾನವಾಗಿರುವ ರಾವೂರ ಗ್ರಾಮದಲ್ಲಿ ಶತಮಾನಗಳ ಕಥೆ ಹೇಳುವ ನೂರಾರು ಬಾವಿಗಳಿದ್ದು, ನಿರ್ವಹಣೆ ಕೊರತೆಯಿಂದ ಹಲವು ಬಾವಿಗಳು ಬಳಕೆಯಾಗದೆ ಕಸಕಡ್ಡಿಯಿಂದ ಭರ್ತಿಯಾಗಿ ಪಾಳು ಬಿದ್ದಿದ್ದು, ಇನ್ನು ಕೆಲವು ಬಾವಿಗಳು ಮಾತ್ರ ಇಂದಿಗೂ ನೀರು ಪೂರೈಸುವ ಮೂಲಕ ಗ್ರಾಮಸ್ಥರ ಒಡಲ ದಾಹ ತಣಿಸುತ್ತಿವೆ. ಸದಾ ಶುದ್ಧ ಹಾಗೂ ಸಿಹಿ ನೀರಿನಿಂದ ತುಂಬಿರುತ್ತಿದ್ದ ಕೆಲ ಬಾವಿಗಳಲ್ಲಿ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಊರಿನ ಜನರಲ್ಲಿ ಆತಂಕ ಎದುರಾಗಿದೆ.
ಗ್ರಾಮದ ವಾರ್ಡ್ 1ರಲ್ಲಿ ಇರುವ ತೇಲಿ ಬಾವಿಯ ನೀರಿನಿಂದ ರಾಸಾಯನಿಕ ತೈಲದ ವಾಸನೆ ಹರಡುತ್ತಿದೆ. ಕೃಷಿ ಚಟುವಟಿಕೆಗೆ ಬಳಸಲಾಗುವ ರಾಸಾಯನಿಕ ತೈಲದ ಬ್ಯಾರಲ್‌ಗಳನ್ನು ಯಾರೋ ಬಾವಿ ನೀರಿನಲ್ಲಿ ತೊಳೆದಿರಬೇಕು ಎಂಬ ಅನುಮಾನ ಗ್ರಾಮಸ್ಥರನ್ನು ಕಾಡುತ್ತಿದ್ದು, ಅಂತರ್ಜಲದ ಸೆಲೆಯ ಮೂಲಕ ಗ್ರಾಮದ ಹಲವು ಬಾವಿಗಳಿಗೆ ರಾಸಾಯನಿಕ ತೈಲ ತೇಲಿ ಹೋಗಿದೆ ಎಂಬುದೇ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಐತಿಹಾಸಿಕ ಬಾವಿಗೂ ಈ ರಾಸಾಯನಿಕ ತೈಲ ಹರಿದು ಬಂದಿದೆ ಎನ್ನಲಾಗಿದ್ದು, ಮಠದ ಆಧೀನದಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳ ಅಕ್ಷರದಾಸೋಹ ಹಾಗೂ ಶ್ರೀ ಮಠದಿಂದ ನಿತ್ಯ
ನಡೆಯುವ ಅನ್ನದಾಸೋಹಕ್ಕೆ ಇದೇ ಬಾವಿ ನೀರು ಬಳಕೆಯಾಗುತ್ತಿದೆ. ವಸತಿನಿಲಯದ ಸಾವಿರಾರು ಮಕ್ಕಳು ಇದೇ ನೀರನ್ನು ಕುಡಿಯುತ್ತಾರೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ರಾವೂರಿನ ಬಾವಿಗಳ ನೀರಿನ ಸೆಲೆಗಳಲ್ಲಿ ಪೆಟ್ರೋಲ್ ಸರಬರಾಜಾಗಿ ಕುಡಿಯುವ ನೀರು ವಾಸನೆ ಹರಡಿತ್ತು. ಈಗ ಇದೇ ಬಾವಿಗಳ ಸೆಲೆಗಳಲ್ಲಿ ಕೃಷಿಗೆ ಬಳಕೆ ಮಾಡುವ ರಸಾಯನಿಕ ತೈಲ ಮಿಶ್ರಣವಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯ ಗ್ರಾಪಂ ಅಧಿಕಾರಿಗಳು ಬಾವಿಗಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದ್ದು, ಬಾವಿಗಳ ಸ್ವಚ್ಚತೆಗೆ ಕ್ರಮಕೈಗೊಂಡಿಲ್ಲ. ತಕ್ಷಣ ಗ್ರಾಮದ ಎಲ್ಲ ಬಾವಿಗಳ ನೀರು ಪರೀಕ್ಷೆಗೊಳಪಡಿಸಬೇಕು ಮತ್ತು ಸ್ವತ್ಛತೆಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.