Advertisement
ಎರಡು ದಿನಗಳ ಹಿಂದಷ್ಟೇ ಹ್ಯಾಮಿಲ್ಟನ್‌ನಲ್ಲಿ 92 ರನ್ನಿಗೆ ದಿಂಡುರುಳಿ 8 ವಿಕೆಟ್‌ಗಳ ಹೀನಾಯ ಸೋಲುಂಡ ರೋಹಿತ್ ಪಡೆ ರವಿವಾರ ವೆಲ್ಲಿಂಗ್ಟನ್‌ನಲ್ಲಿ ಗೆಲುವಿನ ಲಯಕ್ಕೆ ಮರಳಿ “ವೆಲ್ ಡನ್’ ಎನಿಸಿಕೊಂಡಿತು. ಆದರೆ ಈ ಗೆಲುವು ನಿರೀಕ್ಷಿಸಿದಷ್ಟು ಸುಲಭದಲ್ಲಿ ಒಲಿಯಲಿಲ್ಲ. ತೀವ್ರ ಆರಂಭಿಕ ಕುಸಿತದಿಂದ ಪಾರಾಗಿ, ದಿಟ್ಟ ಹೋರಾಟದ ಮೂಲಕ ಇನ್ನೂರೈವತ್ತರ ಗಡಿ ದಾಟಿ, ಬಳಿಕ ಬ್ಲ್ಯಾಕ್ ಕ್ಯಾಪ್ಸ್‌ಗೆ ಬ್ರೇಕ್ ಹಾಕುವ ಮೂಲಕ ಸಾಹಸಮಯ ಪ್ರದರ್ಶನವೊಂದನ್ನು ನೀಡಿತು.
Related Articles
ಅಗ್ರ ಕ್ರಮಾಂಕದಲ್ಲಿ ಮತ್ತೂಮ್ಮೆ ಕಂಪನ ಸಂಭವಿಸಿದಾಗ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ನೆರವಿಗೆ ನಿಂತರು. ಇವರಿಗೆ ಆಲ್‌ರೌಂಡರ್ ವಿಜಯ್ ಶಂಕರ್ ಉತ್ತಮ ಸಾಥ್ ಕೊಟ್ಟರು. 5ನೇ ವಿಕೆಟಿಗೆ 98 ರನ್ ಒಟ್ಟುಗೂಡಿಸಿ ತಂಡಕ್ಕೆ ರಕ್ಷಣೆ ಒದಗಿಸಿದರು.
Advertisement
ಜವಾಬ್ದಾರಿಯುತ ಹಾಗೂ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದ ರಾಯುಡು ಮಧ್ಯಮ ಕ್ರಮಾಂಕಕ್ಕೆ ಬಲ ಕೊಡುವ ನಿಟ್ಟಿನಲ್ಲಿ ಧಾರಾಳ ಯಶಸ್ಸು ಕಂಡರು. ಆದರೆ ಈ ಅಮೋಘ ಆಟಕ್ಕೆ ಶತಕ ಮಾತ್ರ ಒಲಿಯಲಿಲ್ಲ. ಇದಕ್ಕೆ ಹತ್ತೇ ರನ್ ಕೊರತೆ ಬಿತ್ತು. ಹೀಗಾಗಿ ಇದು ಅವರ 10ನೇ ಅರ್ಧ ಶತಕವಾಗಿ ದಾಖಲಾಯಿತು. ಒಟ್ಟು 113 ಎಸೆತ ಎದುರಿಸಿದ ರಾಯುಡು 8 ಬೌಂಡರಿ ಜತೆಗೆ 4 ಪ್ರಚಂಡ ಸಿಕ್ಸರ್ ಎತ್ತಿದರು. 2 ಸಿಕ್ಸರ್‌ಗಳು ಮುನ್ರೊ ಅವರ ಸತತ ಎಸೆತಗಳಲ್ಲಿ ಸಿಡಿದಿದ್ದವು. ವಿಜಯ್ ಶಂಕರ್ 64 ಎಸೆತಗಳಿಂದ 45 ರನ್ ಹೊಡೆದರು (4 ಬೌಂಡರಿ).ಮುಂದಿನದು ರಾಯುಡು-ಕೇದಾರ್ ಜಾಧವ್ ಜೋಡಿಯ ಸರದಿ. ಇವರಿಂದ 6ನೇ ವಿಕೆಟಿಗೆ 74 ರನ್ ಹರಿದು ಬಂತು. ಜಾಧವ್ ಗಳಿಕೆ 45 ಎಸೆತಗಳಿಂದ 34 ರನ್ (3 ಬೌಂಡರಿ). ಕಿವೀಸ್ ಬ್ಯಾಟಿಂಗ್ ಕುಸಿತ
ಫಾರ್ಮ್ನಲ್ಲಿಲ್ಲದ ಗಪ್ಟಿಲ್ ಗೈರಲ್ಲಿ ಕಣಕ್ಕಿಳಿದ ನ್ಯೂಜಿಲ್ಯಾಂಡ್ ಆರಂಭ ಕೂಡ ಎಂದಿನಂತೆ ನಿರಾಶಾದಾಯಕವಾಗಿತ್ತು. 11ನೇ ಓವರ್ ಆಗುವಾಗ 38 ರನ್ನಿಗೆ 3 ವಿಕೆಟ್ ಬಿತ್ತು. ಆರಂಭಿಕ ಸ್ಪೆಲ್‌ನಲ್ಲಿ ಶಮಿ ಮತ್ತೆ ಘಾತಕವಾಗಿ ಪರಿಣಮಿಸಿದ್ದರು. ಪಾಂಡ್ಯ ಮತ್ತು ಚಾಹಲ್ ಕೂಡ ಕಿವೀಸ್ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾದರು. ನಾಯಕ ವಿಲಿಯಮ್ಸನ್ (39), ಕೀಪರ್ ಲ್ಯಾಥಂ (37), ಆಲ್‌ರೌಂಡರ್ ನೀಶಮ್ (44) ಹೋರಾಟ ಸಂಘಟಿಸಿದರೂ ತಂಡವನ್ನು ದಡ ಮುಟ್ಟಿಸುವಲ್ಲಿ ವಿಫಲರಾದರು. ಸಾಕಷ್ಟು ಓವರ್ ಇದ್ದರೂ ಕೈಯಲ್ಲಿ ವಿಕೆಟ್ ಇಲ್ಲದಿದ್ದುದು ಕಿವೀಸ್‌ಗೆ ಕಗ್ಗಂಟಾಗಿ ಪರಿಣಮಿಸಿತು. ನೀಶಮ್ ರನೌಟಾಗುವುದರೊಂದಿಗೆ ನ್ಯೂಜಿಲ್ಯಾಂಡ್ ಗೆಲುವಿನ ಆಸೆಯನ್ನು ಕೈಬಿಡಬೇಕಾಯಿತು.
3 ವಿಕೆಟ್ ಕಿತ್ತ ಚಾಹಲ್ ಭಾರತದ ಯಶಸ್ವಿ ಬೌಲರ್. ಶಮಿ ಮತ್ತು ಪಾಂಡ್ಯ ತಲಾ 2 ವಿಕೆಟ್ ಉರುಳಿಸಿದರು. ಪಾಂಡ್ಯ ಹಾರಾಟ
ಭಾರತದ ಬ್ಯಾಟಿಂಗ್ ಸರದಿಗೆ ನಿಜವಾದ ಜೋಶ್ ತುಂಬಿದ್ದು ಹಾರ್ದಿಕ್ ಪಾಂಡ್ಯ. ಕೆಳ ಹಂತದಲ್ಲಿ ಬ್ಯಾಟ್ ಹಿಡಿದು ಬಂದ ಪಾಂಡ್ಯ ಕೇವಲ 22 ಎಸೆತಗಳಿಂದ 45 ರನ್ ಸಿಡಿಸಿ ಭಾರತದ ಮೊತ್ತ 250ರ ಗಡಿ ದಾಟಿಸಲು ನೆರವಾದರು. ಈ ಬ್ಯಾಟಿಂಗ್ ಆರ್ಭಟದ ವೇಳೆ 2 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಯಿತು. ಇದರಲ್ಲಿ 3 ಸಿಕ್ಸರ್‌ಗಳನ್ನು ಟಾಡ್ ಆ್ಯಸ್ಟಲ್ ಅವರ ಸತತ ಎಸೆತಗಳಲ್ಲಿ ಬಾರಿಸಿ ಅಬ್ಬರಿಸಿದರು. ಬೌಲ್ಟ್ ಪಡೆದ ಅದ್ಭುತ ಕ್ಯಾಚ್‌ಗೆ ಪಾಂಡ್ಯ ವಿಕೆಟ್ ಉರುಳುವಾಗ ಒಂದು ಓವರ್ ಬಾಕಿ ಇತ್ತು. ಎಕ್ಸ್‌ಟ್ರಾ ಇನ್ನಿಂಗ್ಸ್ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಅತೀ ದೊಡ್ಡ ಸರಣಿ ಗೆಲುವು ದಾಖಲಿಸಿತು (4-1). 2008-09ರ 5 ಪಂದ್ಯಗಳ ಸರಣಿಯನ್ನು 3-1ರಿಂದ ಜಯಿಸಿದ್ದು ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಅಂದಿನ ಒಂದು ಪಂದ್ಯ ರದ್ದುಗೊಂಡಿತ್ತು. ನ್ಯೂಜಿಲ್ಯಾಂಡ್ 4ನೇ ಸಲ ತವರಿನ ಸರಣಿಯಲ್ಲಿ 4 ಹಾಗೂ ಹೆಚ್ಚಿನ ಪಂದ್ಯಗಳನ್ನು ಸೋತಿತು. 1999-2000ದಲ್ಲಿ ಆಸ್ಟ್ರೇಲಿಯ ವಿರುದ್ಧ 4-1 ಅಂತರದಿಂದ, 2000-2001ರಲ್ಲಿ ಶ್ರೀಲಂಕಾ ವಿರುದ್ಧ 4-1 ಅಂತರದಿಂದ ಹಾಗೂ 2004-05ರಲ್ಲಿ ಆಸ್ಟ್ರೇಲಿಯ ವಿರುದ್ಧ 5-0 ಅಂತರದಿಂದ ಸರಣಿಯನ್ನು ಕಳೆದುಕೊಂಡಿತ್ತು. ಭಾರತ ಕೇವಲ 2ನೇ ಸಲ ಮೊದಲ 4 ವಿಕೆಟ್‌ಗಳನ್ನು 20 ರನ್ನಿನೊಳಗೆ ಕಳೆದುಕೊಂಡೂ ಜಯ ಸಾಧಿಸಿತು. ಇದಕ್ಕೂ ಹಿಂದಿನ ನಿದರ್ಶನ 1983ರ ವಿಶ್ವಕಪ್ ವೇಳೆ ಜಿಂಬಾಬ್ವೆ ವಿರುದ್ಧ ಕಂಡುಬಂದಿತ್ತು. ಅಂದು ಭಾರತ 9 ರನ್ನಿಗೆ 4 ವಿಕೆಟ್ ಉದುರಿಸಿಕೊಂಡಿತ್ತು. ಬಳಿಕ ಕಪಿಲ್‌ದೇವ್ ಅವರ ಅಜೇಯ 175 ರನ್ ಸಾಹಸದಿಂದ 31 ರನ್ನಿನಿಂದ ಗೆದ್ದಿತ್ತು. ನ್ಯೂಜಿಲ್ಯಾಂಡ್ ನೆಲದಲ್ಲಿ ಭಾರತ 2ನೇ ಕನಿಷ್ಠ ಮೊತ್ತವನ್ನು ಉಳಿಸಿಕೊಂಡು ಜಯ ಸಾಧಿಸಿತು (252). ಹಿಂದಿನ ಕನಿಷ್ಠ ಮೊತ್ತ 222 ರನ್. 1990ರ ಈ ವೆಲ್ಲಿಂಗ್ಟನ್ ಪಂದ್ಯವನ್ನು ಭಾರತ ಒಂದು ರನ್ನಿನಿಂದ ಜಯಿಸಿತ್ತು. ರೋಹಿತ್ ಶರ್ಮ ಅವರ ಸತತ ಶತಕಗಳ ಅಭಿಯಾನ 10 ಸರಣಿ/ಪಂದ್ಯಾವಳಿಗಳಿಗೆ ಕೊನೆಗೊಂಡಿತು. ರೋಹಿತ್ 2017ರ ಚಾಂಪಿಯನ್ಸ್ ಟ್ರೋಫಿ ಬಳಿಕ ಪ್ರತಿಯೊಂದು ಸರಣಿ/ಪಂದ್ಯಾವಳಿಯಲ್ಲಿ ಶತಕ ಬಾರಿಸುತ್ತ ಬಂದಿದ್ದರು. ಹಾರ್ದಿಕ್ ಪಾಂಡ್ಯ 4ನೇ ಸಲ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದರು. ಇದಕ್ಕೂ ಮುನ್ನ ಇಮಾದ್ ವಾಸಿಮ್, ಶಾಬಾದ್ ಖಾನ್ ಮತ್ತು ಆ್ಯಡಂ ಝಂಪ ಎಸೆತಗಳಲ್ಲಿ ಈ ಸಾಧನೆಗೈದಿದ್ದರು. ಈ ಸರಣಿಯಲ್ಲಿ ಭಾರತದ ಸ್ಪಿನ್ನರ್‌ಗಳು 19 ವಿಕೆಟ್ ಕಿತ್ತರು. ಇದು ನ್ಯೂಜಿಲ್ಯಾಂಡ್ ಎದುರಿನ ಸರಣಿಯಲ್ಲಿ ಸ್ಪಿನ್ನರ್‌ಗಳ 2ನೇ ಅತ್ಯುತ್ತಮ ಸಾಧನೆಯಾಗಿದೆ. 1998ರ 5 ಪಂದ್ಯಗಳ ಸರಣಿಯಲ್ಲಿ ಜಿಂಬಾಬ್ವೆ ಸ್ಪಿನ್ನರ್ 20 ವಿಕೆಟ್ ಉರುಳಿಸಿದ್ದು ದಾಖಲೆ. ಈ ಸರಣಿಯಲ್ಲಿ ಯಾವುದೇ ಶತಕ ದಾಖಲಾಗಲಿಲ್ಲ. 3ನೇ ಪಂದ್ಯದಲ್ಲಿ ರಾಸ್ ಟಯ್ಲರ್ 93 ರನ್ ಹೊಡೆದದ್ದೇ ಸರ್ವಾಧಿಕ ವೈಯಕ್ತಿಕ ಗಳಿಕೆ. 2010ರ ಬಳಿಕ ನ್ಯೂಜಿಲ್ಯಾಂಡ್ ಕ್ರಿಕೆಟಿಗರು 5 ಪಂದ್ಯಗಳ ಸರಣಿಯಲ್ಲಿ ಶತಕ ಬಾರಿಸಲು ವಿಫಲರಾದರು. ಅಂದು ಭಾರತದ ವಿರುದ್ಧವೇ ನ್ಯೂಜಿಲ್ಯಾಂಡ್ ಈ ಸಂಕಟಕ್ಕೆ ಸಿಲುಕಿತ್ತು. ಹಾಗೆಯೇ ಭಾರತ 2013ರ ಬಳಿಕ ಶತಕ ಬಾರಿಸದೆ 5 ಪಂದ್ಯಗಳ ಸರಣಿಯನ್ನು ಮುಗಿಸಿತು. ಅಂದಿನ ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಭಾರತದ ಕಡೆಯಿಂದ ಯಾವುದೇ ಸೆಂಚುರಿ ದಾಖಲಾಗಿರಲಿಲ್ಲ. “ಉರಿ’ ಶೈಲಿಯಲ್ಲಿ ವಿಜಯೋತ್ಸವ
ಟೀಮ್ ಇಂಡಿಯಾ ವೆಲ್ಲಿಂಗ್ಟನ್ ವಿಕ್ಟರಿ ಬಳಿಕ ಸರ್ಜಿಕಲ್ ಸ್ಟ್ರೈಕ್ ಕಥಾ ವಸ್ತುವುಳ್ಳ “ಉರಿ’ ಚಿತ್ರದ ರೀತಿಯಲ್ಲಿ ವಿಜಯೋತ್ಸವ ಆಚರಿಸಿದ್ದು ವಿಶೇಷವಾಗಿತ್ತು. ಎಂದಿನಂತೆ ಕಿರಿಯ ಕ್ರಿಕೆಟಿಗ ಶುಭಮನ್ ಗಿಲ್ ಅವರಿಗೆ ಟ್ರೋಫಿ ಎತ್ತುವ ಅವಕಾಶ ಲಭಿಸಿತು. ಆಗ ಕೇದಾರ್ ಜಾಧವ್ ಒಮ್ಮೆಲೇ “ಹೌ ಈಸ್ ದ ಜೋಶ್’ ಎಂದು ಗಟ್ಟಿಯಾಗಿ ಕೇಳುತ್ತಾರೆ. ಉಳಿದ ಆಟಗಾರರೆಲ್ಲ “ಹೈ ಸರ್’ ಎಂದು ಕೂಗುತ್ತಾರೆ.
ಇದು “ಉರಿ’ ಚಿತ್ರದ ಒಂದು ಸನ್ನಿವೇಶದ ಪರಿಣಾಮಕಾರಿ ದೃಶ್ಯ. ಸರ್ಜಿಕಲ್ ಸ್ಟ್ರೈಕ್‌ಗೂ ಮುನ್ನ ನಟ ವಿಕ್ಕಿ ಕೌಶಲ್ ತನ್ನ ಟ್ರೂಪ್ಸ್ ಬಳಿ “ಹೇಗಿದೆ ಜೋಶ್’ ಎಂದು ಕೇಳುತ್ತಾರೆ. ಆಗ ಎಲ್ಲರೂ “ಬಹಳ ಎತ್ತರದಲ್ಲಿದೆ’ ಎಂದು ಗಟ್ಟಿಯಾಗಿ ಹೇಳುತ್ತಾರೆ. ನ್ಯೂಜಿಲ್ಯಾಂಡನ್ನು ಅವರದೇ ನೆಲದಲ್ಲಿ ಭಾರೀ ಅಂತರದಿಂದ ಸರಣಿ ಸೋಲಿಸಿದ ಸಾಹಸವನ್ನು ಭಾರತದ ಕ್ರಿಕೆಟಿಗರು ಸರ್ಜಿಕಲ್ ಸ್ಟ್ರೈಕ್‌ಗೆ ಹೋಲಿಸಿಕೊಂಡು ಸಂಭ್ರಮಿಸಿದ ವೀಡಿಯೋ ಈಗ ವೈರಲ್ ಆಗಿದೆ. ಸ್ಕೋರ್‌ಪಟ್ಟಿ ಭಾರತ
ರೋಹಿತ್ ಶರ್ಮ ಬಿ ಹೆನ್ರಿ 2
ಶಿಖರ್ ಧವನ್ ಸಿ ಹೆನ್ರಿ ಬಿ ಬೌಲ್ಟ್ 6
ಶುಭಮನ್ ಗಿಲ್ ಸಿ ಸ್ಯಾಂಟ್ನರ್ ಬಿ ಹೆನ್ರಿ 7
ಅಂಬಾಟಿ ರಾಯುಡು ಸಿ ಮುನ್ರೊ ಬಿ ಹೆನ್ರಿ 90
ಎಂ.ಎಸ್. ಧೋನಿ ಬಿ ಬೌಲ್ಟ್ 1
ವಿಜಯ್ ಶಂಕರ್ ರನೌಟ್ 45
ಕೇದಾರ್ ಜಾಧವ್ ಬಿ ಹೆನ್ರಿ 34
ಹಾರ್ದಿಕ್ ಪಾಂಡ್ಯ ಸಿ ಬೌಲ್ಟ್ ಬಿ ನೀಶಮ್ 45
ಭುವನೇಶ್ವರ್ ಕುಮಾರ್ ಸಿ ಟಯ್ಲರ್ ಬಿ ಬೌಲ್ಟ್ 6
ಮೊಹಮ್ಮದ್ ಶಮಿ ರನೌಟ್ 1
ಯಜುವೇಂದ್ರ ಚಾಹಲ್ ಔಟಾಗದೆ 0
ಇತರ 15
ಒಟ್ಟು (49.5 ಓವರ್‌ಗಳಲ್ಲಿ ಆಲೌಟ್) 252
ವಿಕೆಟ್ ಪತನ: 1-8, 2-12, 3-17, 4-18, 5-116, 6-190, 7-203, 8-248, 9-252.
ಬೌಲಿಂಗ್:
ಮ್ಯಾಟ್ ಹೆನ್ರಿ 10-1-35-4
ಟ್ರೆಂಟ್ ಬೌಲ್ಟ್ 9.5-2-39-3
ಜೇಮ್ಸ್ ನೀಶಮ್ 5-0-33-1
ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 7-0-33-0
ಕಾಲಿನ್ ಮುನ್ರೊ 10-0-47-0
ಮಿಚೆಲ್ ಸ್ಯಾಂಟ್ನರ್ 3-0-18-0
ಟಾಡ್ ಆ್ಯಸ್ಟಲ್ 5-0-35-0
ನ್ಯೂಜಿಲ್ಯಾಂಡ್
ಕಾಲಿನ್ ಮುನ್ರೊ ಬಿ ಶಮಿ 24
ಹೆನ್ರಿ ನಿಕೋಲ್ಸ್ ಸಿ ಜಾಧವ್ ಬಿ ಶಮಿ 8
ಕೇನ್ ವಿಲಿಯಮ್ಸನ್ ಸಿ ಧವನ್ ಬಿ ಜಾಧವ್ 39
ರಾಸ್ ಟಯ್ಲರ್ ಎಲ್‌ಬಿಡಬ್ಲ್ಯು ಪಾಂಡ್ಯ 1
ಟಾಮ್ ಲ್ಯಾಥಂ ಎಲ್‌ಬಿಡಬ್ಲ್ಯು ಚಾಹಲ್ 37
ಜೇಮ್ಸ್ ನೀಶಮ್ ರನೌಟ್ 44
ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಎಲ್‌ಬಿಡಬ್ಲ್ಯು ಚಾಹಲ್ 11
ಮಿಚೆಲ್ ಸ್ಯಾಂಟ್ನರ್ ಸಿ ಶಮಿ ಬಿ ಪಾಂಡ್ಯ 22
ಟಾಡ್ ಆ್ಯಸ್ಟಲ್ ಎಲ್‌ಬಿಡಬ್ಲ್ಯು ಚಾಹಲ್ 10
ಮ್ಯಾಟ್ ಹೆನ್ರಿ ಔಟಾಗದೆ 17
ಟ್ರೆಂಟ್ ಬೌಲ್ಟ್ ಸಿ ಶಮಿ ಬಿ ಭುವನೇಶ್ವರ್ 1
ಇತರ 3
ಒಟ್ಟು (44.1 ಓವರ್‌ಗಳಲ್ಲಿ ಆಲೌಟ್) 217
ವಿಕೆಟ್ ಪತನ: 1-18, 2-37, 3-38, 4-105, 5-119, 6-135, 7-176, 8-194, 9-204.
ಬೌಲಿಂಗ್:
ಭುವನೇಶ್ವರ್ ಕುಮಾರ್ 7.1-0-38-1
ಮೊಹಮ್ಮದ್ ಶಮಿ 8-0-35-2
ಹಾರ್ದಿಕ್ ಪಾಂಡ್ಯ 8-1-50-2
ವಿಜಯ್ ಶಂಕರ್ 4-0-19-0
ಯಜುವೇಂದ್ರ ಚಾಹಲ್ 10-0-41-3
ಕೇದಾರ್ ಜಾಧವ್ 7-0-34-1
ಪಂದ್ಯಶ್ರೇಷ್ಠ: ಅಂಬಾಟಿ ರಾಯುಡು
ಸರಣಿಶ್ರೇಷ್ಠ: ಮೊಹಮ್ಮದ್ ಶಮಿ ಟಿ20 ಸರಣಿ ವೇಳಾಪಟ್ಟಿ
ದಿನಾಂಕ ಸ್ಥಳ ಆರಂಭ
ಫೆ. 6 ವೆಲ್ಲಿಂಗ್ಟನ್ ಅಪರಾಹ್ನ 12.30
ಫೆ. 8 ಆಕ್ಲೆಂಡ್ ಬೆ. 11.30
ಫೆ. 10 ಹ್ಯಾಮಿಲ್ಟನ್ ಅಪರಾಹ್ನ 12.30