ಕಾಲೇಜಿನ ಮೆಟ್ಟಿಲು ಏರುತ್ತಿದ್ದಂತೆ, ಅಷ್ಟು ದಿನ ಎಲ್ಲೋ ಮುದುಡಿ ಮಲಗಿದ್ದ ಆಸೆಗಳಿಗೆಲ್ಲ ರೆಕ್ಕೆ-ಪುಕ್ಕ ಬಂದಂತಾಗುತ್ತದೆ. ಪರೀಕ್ಷೆ, ಪಾಠ- ಪ್ರವಚನಗಳ ಟೆನ್ಶನ್ ಇಲ್ಲದೇ, ಕ್ಲಾಸಿಗೆ ಬಂಕ್ ಹಾಕಿ ಕಾರಿಡಾರ್‌ನ ಹಿಂದೆ- ಮುಂದೆ ಓಡಾಡುತ್ತಾ, ಸಿನಿಮಾ, ಕ್ಯಾಂಟೀನ್, ಗಾರ್ಡನ್ ಅಂತೆಲ್ಲಾ ಹಾಯಾಗಿ ಕಾಲ ಕಳೆಯುವ ಜೀವಗಳಿಗೆಲ್ಲಾ ದೊಡ್ಡ ತಲೆನೋವು ಶುರುವಾಗೋದು ಎಕ್ಸಾಂ ಟೈಂನಲ್ಲಿ ಮಾತ್ರ! ಆಗ ಅವೆಲ್ಲಾ ಹುಡುಕೋ ಸರಳ್ಳೋಪಾಯವೇ ಕಾಪಿ ಮಾಡೋದು. ನಾನೂ ಒಮ್ಮೆ ಮಾಡಿದ ಕಾಪಿ ಕಥೆ ನನ್ನ ನೆನಪಿನಲ್ಲಿ ಆಗಾಗ್ಗೆ ಮರುಕಳಿಸುತ್ತಲೇ ಇರುತ್ತದೆ. ಆ ಕಥೆ ನಿಮಗೂ ಹೇಳ್ತೀನಿ ಕೇಳಿ…
ಅದು ವಾರ್ಷಿಕ ಪರೀಕ್ಷೆಗಳ ಸಮಯ. ಎಕ್ಸಾಂ ಹಿಂದಿನ ದಿನವೇ ನಮ್ಮ ಮನೇಲಿ ಅಣ್ಣನ ವಿವಾಹ. ಮದ್ವೆ ಅಂದಮೇಲೆ ಕೇಳ್ಬೇಕೆ? ಸ್ಟಡಿ ಹಾಲಿಡೇಸ್ ಅಂತ ಒಂದ್ ತಿಂಗ್ಳು ರಜೆ ಕೊಟ್ಟಿದ್ರೂ, ಒಂದು ದಿನಾನೂ ನಾನು ಬುಕ್ ಮುಟ್ಟಿರಲಿಲ್ಲ. ಮದ್ವೆ ತಯಾರಿ ಮಾತ್ರ ಭರ್ಜರಿಯಾಗಿ ನಡೆಸಿದ್ದೆ. ಮದ್ವೆಯನ್ನಂತೂ ಖುಷಿಯಿಂದ ಕಳೆದೆ. ಮಾರನೇ ದಿನವೇ ಎಕ್ಸಾಂ ಇತ್ತಲ್ವಾ, ರಾತ್ರಿ ಇಡೀ ಎಕ್ಸಾಂ ಭೂತ ನನಗೆ ಮಲಗಲಿಕ್ಕೂ ಬಿಡಲಿಲ್ಲ. “ದೇವ್ರೇ ಪ್ಲೀಸ್, ಇದೊಂದ್ಸಲ ಸೇವ್ ಮಾಡು’ ಅಂತ ಸಾವಿರ ಸಲ ದೇವರಿಗೆ ಅರ್ಜಿ ಸಲ್ಲಿಸಿದೆ. ಬೆಳಗ್ಗೆ ಎಂಟು ಗಂಟೆಗೆ ತಿಂಡಿಯನ್ನೂ ಸರಿಯಾಗಿ ತಿನ್ನದೆ ಬ್ಯಾಗೇರಿಸಿಕೊಂಡು ಕಾಲೇಜಿಗೆ ಹೊರಟೆ.
ಬೆಲ್ ಹೊಡೆಯಿತು. ನಡುಗುತ್ತಲೇ ಎಕ್ಸಾಂ ಹಾಲ್‌ಗೆ ಹೋದೆ. ಪ್ರಶ್ನೆ ಪತ್ರಿಕೆ ನೋಡಿದರೆ, ಎಲ್ಲವೂ ವಿಚಿತ್ರವಾಗಿ ಕಂಡಿತು. ಪ್ರಶ್ನೆಗಳ ರೂಪದಲ್ಲಿ ಎಂದೂ ಕಂಡಿರದ ಶಬ್ದಗಳೇ ಇದ್ದವು. ಒಂದಕ್ಕೂ ಉತ್ತರ ಗೊತ್ತಿರಲಿಲ್ಲ. ಪಾಪ, ನನ್ನ ಪಕ್ಕ ಕುಳಿತಿದ್ದವ ದಾನಶೂರ ಕರ್ಣನಂಥವನು. ನನ್ನ ಅವಸ್ಥೆ ನೋಡಲಾಗದೆ ತನ್ನ ಉತ್ತರ ಪತ್ರಿಕೆಯನ್ನೇ ತೆಗೆದು ಕೈಗಿತ್ತ. ಹಸಿದ ಹುಲಿಯ ಬಾಯಿಗೆ ಜಿಂಕೆ ತಾನಾಗಿಯೇ ಬಂದು ಬಿದ್ದರೆ ಹುಲಿ ಬೇಡವೆನ್ನುವುದುಂಟೇ? ಆ ಕ್ಷಣ ನನಗಾದ ಖುಷಿಗೆ ಎಲ್ಲೆಯೇ ಇರಲಿಲ್ಲ. ತುಂಬಾ ಚೆನ್ನಾಗಿ ಅವನ ಪೇಪರನ್ನು ಕಾಪಿ ಮಾಡಿದೆ. ಮನೆಯಲ್ಲಿ ಕಾಫಿಯನ್ನೂ ಅಷ್ಟು ಚೆನ್ನಾಗಿ ಮಾಡೋಳಲ್ಲ ನಾನು.
ಕಾಪಿ ಮಾಡುವಾಗಲೂ ಒಂದು ಬುದ್ಧಿವಂತಿಕೆ ಮೆರೆದಿದ್ದೆ. ಪೇಪರ್ ಚೆಕ್ ಮಾಡೋರಿಗೆ ಡೌಟ್ ಬರದೆ ಇರಲಿ ಅಂತ ಕೊನೆಯ ಎರಡು ಪ್ರಶ್ನೆಗಳಿಗೆ ಗೋಬಿ ಮಂಚೂರಿ, ಬಿರಿಯಾನಿ ಮಾಡುವ ವಿಧಾನವನ್ನು ತುಂಬಾ ರುಚಿಕಟ್ಟಾಗಿ ಬರೆದು ಬಂದಿದ್ದೆ. ಮಜಾ ಅಂದ್ರೆ ನನಗೆ ಪೇಪರ್ ತೋರಿಸಿ ಸಹಾಯ ಮಾಡೊನಿಗಿಂತ ಹೆಚ್ಚು ಅಂಕ ನನಗೇ ಬಂದಿತ್ತು. ಆ ಸಂದರ್ಭ ನೆನಪಾದಾಗಲೆಲ್ಲಾ ನಗು ಬರುತ್ತೆ.
ಜಯಶ್ರೀ ಎಸ್. ಕಾನಸೂರ್