ಹುಬ್ಬಳ್ಳಿ: ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪ್ರಮುಖ ಹಂತ. ಅದರಲ್ಲೂ ವಿಷಯಗಳ ಆಯ್ಕೆಯಲ್ಲಿ ವಿದ್ಯಾರ್ಥಿಗಳ ಪಾತ್ರ
ತುಂಬಾ ಮುಖ್ಯ ಎಂದು ಧಾರವಾಡ ಕವಿವಿಯ ಸಮಾಜಶಾಸ್ತ್ರ ವಿಭಾಗದ ಡೀನ್, ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ
ಡಾ|ವಿ.ಎ.ಅಮ್ಮಿನಬಾವಿ ಹೇಳಿದರು.
ಇಲ್ಲಿನ ಗೋಕುಲ ರಸ್ತೆಯ ವಾಸವಿ ಮಹಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಿಯದರ್ಶಿನಿ ಕಾಲೊನಿಯ ಡಾ| ಆರ್ .ಬಿ. ಪಾಟೀಲ ಮಹೇಶ ಪಪೂ ವಿಜ್ಞಾನ ಮಹಾವಿದ್ಯಾಲಯದ 2018-19ನೇ ಸಾಲಿನ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ನನ್ನೊಳಗೆ ಏನೋ ಹುದುಗಿದೆ ಎಂಬ ಅರಿವು ಹಾಗೂ ಸಾಮರ್ಥ್ಯದ ಬಗ್ಗೆ ತಿಳಿವಳಿಕೆ ಇರಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಉತ್ತರ ಕರ್ನಾಟಕದ ಎಲ್ಲಾ ಮಹೇಶ ಕಾಲೇಜುಗಳ ವಿಭಾಗೀಯ ಮುಖ್ಯಸ್ಥ ವಿನೋದಕುಮಾರ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಶಿಸ್ತು, ಪರಿಶ್ರಮ, ಪ್ರಯತ್ನ, ಪ್ರಾಮಾಣಿಕತೆ ಅಳವಡಿಸಿಕೊಂಡಾಗ ಗುರಿ ತಲುಪಲು ಸಾಧ್ಯವೆಂದರು.
ಉಪಪ್ರಾಚಾರ್ಯ ರಮೇಶ ಹೊಂಬಾಳಿ, ಕಾಲೇಜಿನ ಸಿಬ್ಬಂದಿ, ಹೊಸದಾಗಿ ದಾಖಲಾತಿ ಪಡೆದ ವಿದ್ಯಾರ್ಥಿಗಳು-ಪಾಲಕರು ಮೊದಲಾದವರಿದ್ದರು. ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ಮೂವರು ವಿದ್ಯಾರ್ಥಿಗಳು ಹಾಗೂ ಸಿಇಟಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಉಪನ್ಯಾಸಕ ಐ.ಎಸ್. ಹಿರೇಮಠ ಸ್ವಾಗತಿಸಿದರು. ಪ್ರಾಚಾರ್ಯ ರಾಮಮೋಹನ ಎಚ್.ಕೆ. ಪ್ರಾಸ್ತಾವಿಕ ಮಾತನಾಡಿದರು. ಪೂರ್ಣಾನಂದ ಮಳಲಿ, ರಮೇಶ ಹೊಂಬಾಳೆ ಪರಿಚಯಿಸಿದರು. ನೀಲ ಪ್ರತಾಪ ನಿರೂಪಿಸಿದರು. ವಿದ್ಯಾ ಫಾಲ್ಕರ ವಂದಿಸಿದರು.