Advertisement

ಜೈಲಿಗೆ ಹೋಗಿ ಬಂದವರಿಗೆ ಹಾರ ಹಾಕಿ ಸ್ವಾಗತ: ವಿಷಾದ

11:37 AM Jul 25, 2017 | Team Udayavani |

ಮೈಸೂರು: ಅತ್ಯಾಚಾರಿಗಳಿಗೆ ಹಿಂದೆ ಸಮಾಜದಿಂದ ಬಹಿಷ್ಕರಿಸಲಾಗುತ್ತಿತ್ತು. ಆದರೆ, ಇಂದು ಇಂತಹ ಪ್ರಕರಣಗಳಲ್ಲಿ ಜೈಲಿಗೆ ಹೋದವರನ್ನು ಹಾರ-ತುರಾಯಿ ಹಾಕಿ ಬರಮಾಡಿಕೊಳ್ಳಲಾಗುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಎನ್‌.ಸಂತೋಷ್‌ ಹೆಗ್ಡೆ ವಿಷಾದಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದಿಂದ ಏರ್ಪಡಿಸಿದ್ದ ಮಕ್ಕಳ ಹಕ್ಕುಗಳ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

Advertisement

ಸಂವಿಧಾನದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಅನೇಕ ಕಾನೂನುಗಳಿದ್ದರೂ ಅವುಗಳ ಜಾರಿಯಲ್ಲಿ ಸೋತಿದ್ದೇವೆ. ಸಮಾಜದಲ್ಲಿ ಬದಲಾವಣೆ ತರಲು ಕೇವಲ ಕಾನೂನು ರೂಪಿಸಿದರೆ ಸಾಲದು ಅದನ್ನು ಅನುಸರಿಸುವ ಮತ್ತು ಸರಿ-ತಪ್ಪುಗಳ ಅರಿತು ಆತ್ಮವಿಮರ್ಶೆ ಮಾಡಿಕೊಂಡು ನಡೆಯುವಂತಹ ಮನಸ್ಸುಳ್ಳವರು ಅವಶ್ಯಕ ಎಂದು ಹೇಳಿದರು.

ಪ್ರಸ್ತುತ ರಾಜಕೀಯ ಹಾಗೂ ಆಡಳಿತ ರಂಗಗಳೆರಡೂ ದುರುಪಯೋಗವಾಗಿದ್ದು, ಈಗಾಗಲೇ ಘಟಿಸಿರುವ ಅನೇಕ ಹಗರಣಗಳು ಇದಕ್ಕೆ ಉದಾಹರಣೆಯಾಗಿವೆ. ಯುವ ಸಮುದಾಯ ಎಚ್ಚರಗೊಂಡು ಕಾನೂನುಗಳನ್ನು ಪಾಲಿಸುವ ಭವಿಷ್ಯದ ಮಕ್ಕಳಿಗೆ ಸಮಾಜದಲ್ಲಿ ಶಾಂತಿ ನೆಲೆಸಿಕೊಡುವ ನಿಟ್ಟಿನಲ್ಲಿ ತೊಡಗಬೇಕಿದೆ ಎಂದರು.

ಭ್ರಷ್ಟಾಚಾರ ಪ್ರಕರಣಗಳು ಇಂದು ಹೆಚ್ಚಾಗಿದ್ದು,  ಪ್ರಾಮಾಣಿಕತೆಗೆ ಬೆಲೆಯಿಲ್ಲದಂತಾಗಿದೆ. ಹಿಂದೆ ಅತ್ಯಾಚಾರಗಳಂತಹ ಪ್ರಕರಣಗಳಿಗೆ ಊರಿಂದ ಬಹಿಷ್ಕಾರ ಹಾಕಿ ಶಿಕ್ಷೆ ನೀಡಲಾಗುತ್ತಿತ್ತು. ಅದಕ್ಕಿಂತ ಕಠಿಣ ಶಿಕ್ಷೆ ಮತ್ತೂಂದಿರಲಿಲ್ಲ. ಆದರೆ, ಇಂದು ಜೈಲಿನಿಂದ ಬರುವವರಿಗೆ ಹಾರ, ತುರಾಯಿಗಳನ್ನು ಹಾಕಿ ಸನ್ಮಾನಿಸಿ ಕರೆತರುತ್ತಿರುವುದು ವಿಪರ್ಯಾಸ ಎಂದು ಹೇಳಿದರು.

ಪ್ರತಿಯೊಬ್ಬರಲ್ಲಿಯೂ ತೃಪ್ತಿ ಮತ್ತು ಮಾನವೀಯತೆ ಎಂಬುದು ತುಂಬ ಮುಖ್ಯ. ಇಲ್ಲವಾದಲ್ಲಿ ದುರಾಸೆಯಿಂದ ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತದೆ. ಸರ್ಕಾರಿ ಹುದ್ದೆಗಳು ಮಾರಾಟದ ವಸ್ತುಗಳಂತಾಗಿದ್ದು, ಬಿಟ್ಟಿ ಬಂದಿಲ್ಲ, ಕೊಟ್ಟು ಬಂದ್ದಿದ್ದೀನಿ ಎಂಬ ಮಾತುಗಳು ಕೇಳಿ ಬರುತ್ತವೆ, ಇಂಥವರಿಂದ ಪ್ರಾಮಾಣಿಕವಾದ ಕೆಲಸ ಪಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

Advertisement

ಮೌಲ್ಯವು ಅರ್ಥಕಳೆದುಕೊಂಡಿದ್ದು, ಮೌಲ್ಯವೆಂದರೆ ಹಣಗಳಿಸುವುದಾಗಿದೆ. ಪೋಷಕರು ಮಕ್ಕಳಿಗೆ ಮೌಲ್ಯಗಳನ್ನು ರೂಪಿಸುವ ಮತ್ತು ನ್ಯಾಯಯುತವಾಗಿ ಹಣಗಳಿಸುವ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಹೇಳಿದರು. ಕರ್ನಾಟಕ ಪೊಲೀಸ್‌ ಅಕಾಡೆಮಿ ಉಪ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಮಾತನಾಡಿ, ಮಕ್ಕಳಿಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸುವಂತಹ ವಾತಾವರಣ ನಿರ್ಮಿಸಬೇಕು ಎಂದರು.

ಎಲ್ಲರೂ ನಮ್ಮ ಮಕ್ಕಳು ಎಂಬ ಮನೋಭಾವ ಬರಬೇಕು ಆ ಮೂಲಕ ಸಹಾಯ ಬಯಸುವ ಮಕ್ಕಳಿಗೆ ಸಹಾಯ ಮಾಡುವ, ರಕ್ಷಣೆ ನೀಡುವ, ತಪ್ಪು$ ದಾರಿಯಲ್ಲಿ ನಡೆಯುವವರನ್ನು ಸರಿದಾರಿಗೆ ತರುವ ಕಾರ್ಯವಾಗಬೇಕು ಎಂದು ತಿಳಿಸಿದರು. ಮೈಸೂರು ವಿವಿ ಪ್ರಬಾರ ಕುಲಪತಿ ಪೊ›.ದಯಾನಂದ ಮಾನೆ, ಕಾನೂನು ವಿಭಾಗದ ಡೀನ್‌ ಡಾ.ಸಿ.ಬಸವರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next