Advertisement

ಭಾರತದ ಕೊನೆಯ ಗ್ರಾಮಕ್ಕೆ ಸ್ವಾಗತ

09:07 AM Sep 10, 2020 | Karthik A |

ಮಾಣಾಗೆ ಪ್ರವೇಶಿಸುತ್ತಿದ್ದಂತೆ ಕಾಣ ಸಿಗುವ ಈ ಬೋರ್ಡ್‌ ಎಲ್ಲರನ್ನೂ ಆಕರ್ಷಿಸುತ್ತದೆ.

Advertisement

ಜತೆಗೆ ಅಲ್ಲಿನ ಅಂಗಡಿಗಳಲ್ಲಿಯೂ ಈ ರೀತಿಯ ಬೋರ್ಡ್‌ ಅಳವಡಿಸಲಾಗಿದೆ.

ಉತ್ತರಾಖಂಡದ ಮಾಣಾ ಭಾರತದ ಕೊನೆಯ ಗ್ರಾಮ ಎಂದೇ ಪರಿಗಣಿಸಲ್ಪಡುತ್ತದೆ.

ಸಮುದ್ರ ಮಟ್ಟದಿಂದ ಸುಮಾರು 3,118 ಮೀಟರ್‌ ಎತ್ತರದಲ್ಲಿರುವ ಮಾಣಾ ಚಮೋಲಿ ಜಿಲ್ಲೆಯಲ್ಲಿದೆ.

ಈ ಗ್ರಾಮ ಸರಸ್ವತಿ ನದಿಯ ದಡದಲ್ಲಿ ತಲೆ ಎತ್ತಿ ನಿಂತಿದೆ. ಇಲ್ಲಿಂದ ಪ್ರಮುಖ ಯಾತ್ರಾ ಸ್ಥಳ ಬದರೀನಾಥಕ್ಕೆ 5 ಕಿ.ಮೀ. ಅಂತರ.

Advertisement

ಗೊಂದಲ
ಭಾರತದ ಕೊನೆಯ ಗ್ರಾಮದ ವಿಚಾರದಲ್ಲಿ ಕೆಲವು ಗೊಂದಲಗಳಿವೆ. ಹಿಮಾಚಲ ಪ್ರದೇಶದ ಚಿತ್ಕುಲ್‌ ಭಾರತದ ಕೊನೆಯ ಗ್ರಾಮ ಎನ್ನುವ ವಾದವೂ ಇದೆ. ಚಿತ್ಕುಲ್‌ ಇಂಡೋ-ಟಿಬೆಟ್‌ ಗಡಿಯಲ್ಲಿರುವ ಕೊನೆಯ ಜನವಸತಿ ಗ್ರಾಮ. ಆದರೆ ಮಾಣಾ ಭಾರತದ ಕೊನೆಯ ಗ್ರಾಮ ಎಂದೇ ಗುರುತಿಸಲ್ಪಡುತ್ತದೆ.

ದೇಶದ ಕೊನೆಯ ಚಹಾದಂಗಡಿ
ಮಾಣಾದ ವಿವಿಧೆಡೆ ಕಾಣ ಸಿಗುವ ಭಾರತದ ಕೊನೆಯ ಚಹಾ, ಕಾಫಿ ಅಂಗಡಿ ಎನ್ನುವ ಬೋರ್ಡ್‌ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಶೇಷ ಎಂದರೆ ಮಾಣಾ ಇಂಡೋ-ಚೀನಾ ಗಡಿಯ ಕೇವಲ 24 ಕಿ.ಮೀ. ದೂರದಲ್ಲಿದೆ.

ಪೌರಾಣಿಕ ಹಿನ್ನೆಲೆ
ಈ ಗ್ರಾಮಕ್ಕೆ ಪೌರಾಣಿಕ ಹಿನ್ನೆಲೆಯೂ ಇದ್ದು, ಸಾವಿರಾರು ವಿಶ್ವಾಸಿಗಳನ್ನು ತನ್ನೆಡೆಗೆ ಸೆಳೆಯುತ್ತದೆ. ಮಹಾಭಾರತಕ್ಕೂ ಮಾಣಾ ಗ್ರಾಮಕ್ಕೂ ಸಂಬಂಧವಿದೆ ಎನ್ನುವ ನಂಬಿಕೆಯಿದೆ. ಪಾಂಡವರು ಮಾಣಾ ಗ್ರಾಮದ ಮೂಲಕ ಸ್ವರ್ಗಕ್ಕೆ ತೆರಳಿದರು ಎನ್ನಲಾಗುತ್ತದೆ. ಇಲ್ಲಿ ಸರಸ್ವತಿ ನದಿಗೆ ಅಡ್ಡಲಾಗಿ ಬಂಡೆಯ ಸೇತುವೆಯೊಂದಿದ್ದು ಇದನ್ನು ಭೀಮ ಪುಲ್‌ ಎಂದು ಕರೆಯುತ್ತಾರೆ. ಹಿಂದೆ ಭೀಮ ನದಿ ದಾಟಲು ಈ ಸೇತುವೆ ನಿರ್ಮಿಸಿದ ಎನ್ನುವುದು ಪ್ರತೀತಿ.

ಭೇಟಿ ನೀಡಬಹುದಾದ ಸ್ಥಳಗಳು: ಮಾಣಾ ಸುತ್ತಮುತ್ತ ಅನೇಕ ಧಾರ್ಮಿಕ, ಪ್ರೇಕ್ಷಣೀಯ ಸ್ಥಳಗಳಿವೆ. ಅವುಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ವ್ಯಾಸ ಗುಫಾ: ಮಾಹಾಭಾರತ ಕೃರ್ತ ವೇದವ್ಯಾಸ ಇಲ್ಲಿರುವ ಗುಹೆಯಲ್ಲಿದ್ದುಕೊಂಡು ವೇದಗಳನ್ನು ಬರೆದರು ಎನ್ನಲಾಗುತ್ತಿದೆ. ಈ ಗುಹೆ 5 ಸಾವಿರ ವರ್ಷಗಳಿಗಿಂತಲೂ ಪ್ರಾಚೀನವಾದುದು ಎನ್ನುವ ಲೆಕ್ಕಾಚಾರವಿದೆ. ಹೀಗಾಗಿ ಈ ಗುಹೆ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ವಸುಧಾರಾ ಜಲಪಾತ: ಮಾಣಾದ ಇನ್ನೊಂದು ಪ್ರಮುಖ ಆಕರ್ಷಣೆ ಈ ವಸುಧಾರಾ ಜಲಪಾತ. ಪಾಂಡವರು ಕೆಲವು ಸಮಯ ಇಲ್ಲಿ ತಂಗಿದ್ದರು ಎನ್ನುವ ನಂಬಿಕೆ ಮನೆ ಮಾಡಿದೆ.

ತಾಪ್ತ್ ಕುಂಡ್‌: ತಪ್ತ್ ಕುಂಡ್‌ ಅಗ್ನಿ ದೇವತೆಯ ವಾಸ ಸ್ಥಾನ ಎಂದೇ ಪರಿಗಣಿಸಲ್ಪಡುತ್ತದೆ. ಕೆಲವು ಪ್ರತ್ಯೇಕ ದಿನಗಳಲ್ಲಿ ಈ ಕುಂಡದ ನೀರಿಗೆ ವಿಶೇಷ ಔಷಧೀಯ ಗುಣವಿದ್ದು, ಚರ್ಮ ರೋಗ ಗುಣಪಡಿಸುವ ಶಕ್ತಿ ಇರುತ್ತದೆ ಎನ್ನಲಾಗುತ್ತದೆ.

ಚಾರಣಿಗರ ಸ್ವರ್ಗ
ಮಾಣಾ ಚಾರಣಿಗರಿಗೆ, ಸಾಹಸಪ್ರಿಯರಿಗೆ ಅನೇಕ ಅವಕಾಶಗಳನ್ನು ತೆರೆದಿಡುತ್ತದೆ. ದೇಶದಲ್ಲಿ ಚಾರಣಕ್ಕಿರುವ ಉತ್ತಮ ಸ್ಥಳಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗುತ್ತದೆ. ಇಲ್ಲಿನ ನೀಲಕಂಠ ಶಿಖರ ಸಮುದ್ರ ಮಟ್ಟದಿಂದ 6,597 ಅಡಿ ಎತ್ತರದಲ್ಲಿದ್ದು, ಚಾರಣಿಗರ ಪಾಲಿಗೆ ಸೋಜಿಗ.

ತಲುಪುವ ಬಗೆ
ಹರಿದ್ವಾರ ಸಮೀಪದ ರೈಲು ನಿಲ್ದಾಣ. ಹರಿದ್ವಾರದಿಂದ 275 ಕಿ.ಮೀ. ದೂರದಲ್ಲಿದೆ ಭಾರತದ ಕೊನೆಯ ಗ್ರಾಮ. ಇಲ್ಲಿಂದ ಬಸ್‌, ಟ್ಯಾಕ್ಸಿ ಮೂಲಕ ತೆರಳಬಹುದು.

 ರಮೇಶ್‌ ಬಿ., ಕಾಸರಗೋಡು 

 

 

Advertisement

Udayavani is now on Telegram. Click here to join our channel and stay updated with the latest news.

Next