ಮೈಸೂರು: ಕಲೆ ಮತ್ತು ಸಂಸ್ಕೃತಿಗೆ ಹೆಸರಾಗಿರುವ ಮೈಸೂರಿನ ಹಿರಿಮೆಯನ್ನು ಹೆಚ್ಚಿಸುವ ಸಲುವಾಗಿ ನಗರದ ಜನನಿ ಟ್ರಸ್ಟ್ ವತಿಯಿಂದ ದಸರಾ ಪ್ರಯುಕ್ತ ಮೈಸೂರಿಗೆ ಆಗಮಿಸುವ ದೇಶ-ವಿದೇಶಗಳ ಪ್ರವಾಸಿಗರನ್ನು ಸಾಂಪ್ರದಾಯಿಕ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ಅರಮನೆಯ ವರಾಹ ದ್ವಾರದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜನನಿ ಟ್ರಸ್ಟ್‌ನ ಸದಸ್ಯರು ಅರಮನೆಗೆ ಆಗಮಿಸುವ ಪ್ರವಾಸಿಗರಿಗೆ ಗುಲಾಬಿ ಹೂ ನೀಡಿ, ಮೈಸೂರು ಪೇಟತೊಡಿಸಿ ನಂಜನಗೂಡು ರಸಬಾಳೆ, ಮೈಸೂರು ಚಿಗುರು ವೀಳ್ಯದೆಲೆ, ಮೈಸೂರು ಪಾಕ್ ಹಾಗೂ ಮೈಸೂರು ಮಲ್ಲಿಗೆ ನೀಡಿ ಸ್ವಾಗತಿಸಿದರು. ಇನ್ನು ಪ್ರವಾಸಿತಂಡದಲ್ಲಿನ ಮಹಿಳೆಯರಿಗೆ ಬಳೆ ತೊಡಿಸಿ ಸುಗಂಧ ದ್ರವ್ಯದೊಂದಿಗೆ ಪ್ರವಾಸಿಗರಿಗೆ ಆತ್ಮೀಯ ಸ್ವಾಗತ ನೀಡಲಾಯಿತು.
ಈ ವೇಳೆ ಜನನಿ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಕೆ.ಅಶೋಕ್ ಮಾತನಾಡಿ, ಮೈಸೂರಿನಲ್ಲಿ ನಡೆಯುವ ಹತ್ತು ದಿನಗಳ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾವಿರಾರು ಪ್ರವಾಸಿಗರು ನಗರಕ್ಕಾಗಮಿಸುತ್ತಾರೆ. ನವರಾತ್ರಿಯ ಅಂಗವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳ ಜತೆಗೆ ಮೈಸೂರಿನ ಸಾಂಸ್ಕೃತಿಕ ವೈಭವ, ಪ್ರೇಕ್ಷಣಿಯ ಸ್ಥಳಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಾರೆ.
ಅವರಿಗೆ ನಮ್ಮ ನೆಲದ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಪ್ರವಾಸಿಗರಿಗೆ ಸಾಂಪ್ರದಾಯಿಕ ಸ್ವಾಗತ ನೀಡುವ ಮೂಲಕ ಅವರನ್ನು ಬರಮಾಡಿಕೊಳ್ಳಲಾಗಿದೆ. ಮೈಸೂರಿನ ಸೌಂದರ್ಯ, ಪರಂಪರೆ, ಸಂಪ್ರದಾಯವನ್ನು ಕಂಡ ಪ್ರವಾಸಿಗರು ಖುಷಿಪಟ್ಟಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಉಪಅರಣ್ಯ ಸಂರಕ್ಷಣಾಧಿಕಾರಿ ಸಿದ್ದರಾಮಪ್ಪ ಚಳಕಾಪುರೆ, ನಾದೋಪಾಸನ ಗಾಯನ ತಂಡದ ಸಂಸ್ಥಾಪಕ ಅಧ್ಯಕ್ಷ ಡಿ.ಉದಯ್ ಶಂಕರ್, ರೋಟರಿ ಕ್ಲಬ್‌ನ ಆರ್.ಗೌತಮ್ ಸಲೇಚ, ದಿ.ಸಿಟಿ ಕೋ ಅಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಡಾ.ಎಸ್.ನಾಗರತ್ನ ಇನ್ನಿತರರು ಹಾಜರಿದ್ದರು.