Advertisement

ನಮ್ಮೂರ ಹೈಕ್ಳುಗೇಕೆ ಊರ ಉಸಾಬರಿ!

10:53 AM Jun 28, 2017 | |

ಈ ವಾರ ಒಟ್ಟು ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ “ನಮ್ಮೂರ ಹೈಕ್ಳು’ ಎಂಬ ಚಿತ್ರವೂ ಒಂದು. ಹೆಸರು ಕೇಳಿದರೆ, ಇದ್ಯಾವುದೋ ಗ್ರಾಮೀಣ ಪ್ರದೇಶದ ಹಿನ್ನೆಲೆಯ ಸಿನಿಮಾ ಎಂದನಿಸಬಹುದು. ಅದೇನೋ ನಿಜ. ಆದರೆ, ಈ ಚಿತ್ರ ಕಾದಂಬರಿಯೊಂದನ್ನಾಧರಿಸಿದೆ ಎಂಬ ವಿಷಯ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಗೊತ್ತಿಲ್ಲದಿದ್ದರೆ, ನಿಮಗೆ ಗೊತ್ತಿರಲಿ ಇದು “ಊರ ಉಸಾಬರಿ’ ಎಂಬ ಕಾದಂಬರಿಯನ್ನಾಧರಿಸಿದ ಸಿನಿಮಾ ಎಂದು.

Advertisement

“ಊರ ಉಸಾಬರಿ’ ಕಾದಂಬರಿಯನ್ನು ಬರೆದಿರುವುದು ಪ್ರಸನ್ನ ಶೆಟ್ಟಿ. ಈಗ ಅವರೇ ಅದನ್ನು ತೆರೆಗೆ ತಂದಿದ್ದಾರೆ. ಇನ್ನು ಅವರ ನಿರ್ದೇಶನದ ಮೊದಲನೆಯ ಚಿತ್ರ. ತಮ್ಮ ಊರನ್ನು ಯಾವ ರೀತಿ ಸ್ವತ್ಛವಾಗಿಡಬೇಕೆಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆಯಂತೆ. ಚಿತ್ರದ ಬಹುತೇಕ ಚಿತ್ರೀಕರಣ ಹಾಸನ ಬಳಿಯ ಹಳ್ಳಿಯೊಂದರಲ್ಲಿ ನಡೆದಿದೆ. ಸುಮಾರು ವರ್ಷಗಳಿಂದ ಆ ಹಳ್ಳಿಯಲ್ಲಿ ನಿಂತು ಹೋಗಿದ್ದ ಜಾತ್ರೆ, ರಥೋತ್ಸವ ಇವರ ಚಿತ್ರಕ್ಕಾಗಿ ಮತ್ತೆ ಆರಂಭವಾಯಿತಂತೆ.

ಹಾಗಾಗಿ, ತಮ್ಮ ಚಿತ್ರದ ಮೂಲಕ ಊರಲ್ಲಿ ರಥೋತ್ಸವ ಮಾಡಿಸಿದ ಖುಷಿ ಕೂಡಾ ಚಿತ್ರತಂಡಕ್ಕಿದೆ. ಈ ಚಿತ್ರವನ್ನು ಶ್ರೀನಿವಾಸ ಹಾಗೂ ರಘುರಾಜ್‌ ಹಾಸನ ಸೇರಿ ನಿರ್ಮಿಸಿದ್ದಾರೆ. ಶ್ರೀನಿವಾಸ್‌ ಅವರು ಗಾಂಧಿನಗರದಲ್ಲಿ ಓದಿದವರಂತೆ. ಹಾಗಾಗಿ, ಚಿಕ್ಕಂದಿನಿಂದಲೇ ಸಿನಿಮಾ ಆಸಕ್ತಿ ಹುಟ್ಟಿತಂತೆ. ಆ ಆಸಕ್ತಿಯ ಪರಿಣಾಮವಾಗಿ ಈಗ ಸಿನಿಮಾ ಮಾಡಿದ್ದಾರೆ. ಇನ್ನು, ರಘುರಾಜ್‌ ಅವರು ಈ ಸಿನಿಮಾಕ್ಕೆ ಬಂಡವಾಳ ಹಾಕುವ ಜೊತೆಗೆ ಪ್ರಮುಖ ಪಾತ್ರವೊಂದನ್ನು ಮಾಡಿದ್ದಾರೆ.

ಊರ ಪ್ರೀತಿಯಿಂದ ಹಾಸನ ಕನ್ನಡವನ್ನು ಕೂಡಾ ಇಲ್ಲಿ ಬಳಸಲಾಗಿದೆಯಂತೆ. ಚಿತ್ರದಲ್ಲಿ ನಟಿಸಿದ ಮಮತಾ ರಾವತ್‌ ಇಲ್ಲಿ ಖಡಕ್‌ ಸಾವಿತ್ರಿ ಎಂಬ ಪಾತ್ರದಲ್ಲಿ ಕಾಣಿಕೊಂಡರೆ, ದೀಪ್ತಿ ಮಾನೆ ಸಿಟಿಯಿಂದ ಹಳ್ಳಿಗೆ ಬರುವ ಹುಡುಗಿಯಾಗಿ ನಟಿಸಿದ್ದಾರಂತೆ. ಕುರಿ ಸುನೀಲ್‌ ಕೂಡಾ ಇಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶಕೀಲ್‌ ಅಹಮದ್‌ ಅವರ ಸಂಗೀತ ಮತ್ತು ಹರೀಶ್‌ ಅವರ ಸಂಕಲನವಿದೆ.

Advertisement

Udayavani is now on Telegram. Click here to join our channel and stay updated with the latest news.

Next