Advertisement

ರಾಜೀವ್‌ ಜ್ಯೋತಿ ಸದ್ಭಾವನಾ ಯಾತ್ರೆಗೆ ಅದ್ಧೂರಿ ಸ್ವಾಗತ

03:27 PM Aug 13, 2018 | Team Udayavani |

ರಾಯಚೂರು: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ 74ನೇ ಜನ್ಮದಿನ ನಿಮಿತ್ತ ಕೆಪಿಸಿಸಿ ಕಾರ್ಮಿಕ ವಿಭಾಗದಿಂದ
ಹಮ್ಮಿಕೊಂಡಿರುವ ರಾಜೀವ್‌ ಜ್ಯೋತಿ ಸದ್ಭಾವನಾ ಯಾತ್ರೆಗೆ ಜಿಲ್ಲಾ ಕಾಂಗ್ರೆಸ್‌ನಿಂದ ಅದ್ಧೂರಿ ಸ್ವಾಗತ ಕೋರಲಾಯಿತು. ದೇಶದ ವಿವಿಧ ರಾಜ್ಯಗಳಲ್ಲಿ ಸಂಚರಿಸಲಿರುವ ಈ ಯಾತ್ರೆ ರವಿವಾರ ಬೆಳಗ್ಗೆ ಜಿಲ್ಲೆಗೆ ಆಗಮಿಸಿತು. ಈ ವೇಳೆ ಜಿಲ್ಲಾ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಯಾತ್ರೆಗೆ ಸ್ವಾಗತ ಕೋರಿದರು.

Advertisement

ಯಾತ್ರೆ ಕುರಿತು ನಗರದ ಮಲ್ಲನ್‌ ನಾರಾಯಣ ಕಲ್ಯಾಣ ಮಂಟಪದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಯಾತ್ರೆ ಅಧ್ಯಕ್ಷ ಎಸ್‌.ಎಸ್‌.ಪ್ರಕಾಶಂ, ದೇಶದಲ್ಲಿ ಅಶಾಂತಿ, ಭಯೋತ್ಪಾದನೆ, ಕೋಮು ಸಂಘರ್ಷಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಯಾತ್ರೆ ಆರಂಭಿಸಲಾಗಿದೆ. ಪ್ರತಿ ವರ್ಷ ಯಾತ್ರೆ ನಡೆಸಲಾಗುತ್ತಿದೆ. ದೇಶದ ಮೂಲೆ ಮೂಲೆಗಳಿಗೆ ತೆರಳಲಿರುವ ಯಾತ್ರೆ ಆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಆ.9ರಂದು ತಮಿಳುನಾಡಿನ ಪೆರಂಬದೂರಿನಲ್ಲಿ ಯಾತ್ರೆಗೆ ಚಾಲನೆ ನೀಡಲಾಯಿತು. ಅಲ್ಲಿಂದ ಶುರುವಾಗಿ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ರಾಜ್ಯಗಳ ಮೂಲಕ ಆ.19ರಂದು ನವದೆಹಲಿ ತಲುಪಲಿದೆ ಎಂದು ವಿವರಿಸಿದರು.

ಆ.20ರಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಜ್ಯೋತಿ ಸ್ವೀಕರಿಸಲಿದ್ದು, ಅಲ್ಲಿಂದ ಜ್ಯೋತಿ ವೀರಭೂಮಿ ತಲುಪಲಿದೆ.
ಬಳಿಕ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ಯಾತ್ರೆಯುದ್ದಕ್ಕೂ ರಾಜೀವ್‌ ಗಾಂಧಿ ಅವರ ಬದುಕಿನ ಆದರ್ಶಗಳ ವಿಚಾರಧಾರೆ ಜನರಿಗೆ ಪರಿಚಯಿಸಲಾಗುತ್ತಿದೆ. ದೇಶದಲ್ಲಿ ಶಾಂತಿ, ಸೌಹಾರ್ದ ನೆಲೆಸಬೇಕು ಎನ್ನುವ ಅಂಶಗಳನ್ನು ಜನರಿಗೆ ತಿಳಿ ಹೇಳಲಾಗುತ್ತಿದೆ ಎಂದರು.

ಯಾತ್ರೆ ಮುಖ್ಯಸ್ಥ ಗೋಮದೀಶನ್‌ ಅಯ್ಯರ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ, ಮುಖಂಡರಾದ
ಪಾರಸಮಲ್‌ ಸುಖಾಣಿ, ಕೆ.ಶಾಂತಪ್ಪ, ಜಿ.ಶಿವಮೂರ್ತಿ, ರವಿ ಬೋಸರಾಜು, ಬಸನಗೌಡ, ಜಿ.ಬಸವರಾಜ ರೆಡ್ಡಿ, ಅರುಣ ಧೋತರಬಂಡಿ, ಬಾಬು ನಾಯಕ ಸೇರಿ ಬ್ಲಾಕ್‌ ಕಾರ್ಯಕರ್ತರು, ಯಾತ್ರೆಯೊಂದಿಗೆ ಬಂದ 200ಕ್ಕೂ ಅಧಿಕ ಕಲಾವಿದರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next