ಕೆ.ಆರ್.ನಗರ: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನದಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಹುಣಸೂರು ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರು ಕೆ.ಆರ್.ನಗರದ ತಮ್ಮ ನಿವಾಸಕ್ಕೆ ಶನಿವಾರ ಸಂಜೆ ಆಗಮಿಸಿದ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ಅದ್ಧೂªರಿ ಸ್ವಾಗತ ನೀಡಿದರು.
ಎಚ್.ವಿಶ್ವನಾಥ್ ಆಗಮಿಸಿದ ವೇಳೆ ಪಟಾಕಿ ಸಿಡಿಸಿ ಪುಷ್ಪಾರ್ಚನೆ ಮಾಡಿ ತಮ್ಮ ಸಂಭ್ರಮ ವ್ಯಕ್ತಪಡಿಸಿದ ಸಾವಿರಾರು ಮಂದಿ ಕಾರ್ಯಕರ್ತರು,ಅವರ ಪರವಾಗಿ ಜಯಕಾರದ ಘೋಷಣೆಗಳನ್ನು ಮೊಳಗಿಸಿ ಸಿಹಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮಾಜಿ ಸದಸ್ಯ ಪೆರಿಸ್ವಾಮಿ, ಎಚ್.ವಿಶ್ವನಾಥ್ ಕೈಗೊಳ್ಳುವ ಎಲ್ಲಾ ರಾಜಕೀಯ ನಿರ್ಧಾರಕ್ಕೆ ನಾವು ಬದ್ಧರಾಗಿದ್ದು, ನಮ್ಮ ನಾಯಕರು ಯಾವ ಪಕ್ಷಕ್ಕೆ ಹೋಗುತ್ತಾರೋ ಅಲ್ಲಿಗೆ ತೆರಳಲು ನಾವೆಲ್ಲರೂ ಬೆಂಬಲ ನೀಡಲಿದ್ದೇವೆ ಎಂದು ತಿಳಿಸಿದರು.
ಕಳೆದ ನಾಲ್ಕು ದಶಕಗಳಿಂದ ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಮಾರ್ಗದರ್ಶಕರಾದ ಎಚ್.ವಿಶ್ವನಾಥ್ ತಮಗಾದ ಅನ್ಯಾಯ ಮತ್ತು ಅಪಮಾನವನ್ನು ಖಂಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಅವರ ಮುತ್ಸದ್ಧಿ ಮತ್ತು ಸ್ವಾಭಿಮಾನದ ರಾಜಕೀಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅವರ ಗಟ್ಟಿ ನಿರ್ಧಾರದಿಂದ ರಾಜ್ಯದಲ್ಲಿ ಮಹತ್ತರ ರಾಜಕೀಯ ಬದಲಾವಣೆಯಾಗಿದೆ ಎಂದು ತಿಳಿಸಿದರು.
ತಮ್ಮನ್ನು ಸ್ವಾಗತಿಸಿದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಎಚ್.ವಿಶ್ವನಾಥ್, ಹಣ ಮತ್ತು ಆಮಿಷದ ರಾಜಕೀಯಕ್ಕೆ ಒಳಗಾಗಿ ನಾನು ಪಕ್ಷಾಂತರ ಮಾಡಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಚುನಾವಣಾ ರಾಜಕೀಯದಿಂದ ನಿವೃತ್ತಿಯಾದರೂ ಕಾರ್ಯಕರ್ತರ ಹಿತ ಕಾಪಾಡಲು ಬದ್ಧನಾಗಿದ್ದೇನೆ ಎಂದರು.
ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಕೆಲ ಮುಖಂಡರಿಗೆ ಮುಂದಿನ ದಿನಗಳಲ್ಲಿ ನಮ್ಮ ಬೆಂಬಲಿಗರು ತಮ್ಮ ಶಕ್ತಿ ತೋರಿಸಲಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಸಾ.ರಾ.ಮಹೇಶ್ ವಿರುದ್ಧ ಹರಿಹಾಯ್ದ ಅವರು, ದುಡ್ಡಿನ ರಾಜಕಾರಣದಿಂದ ಏನು ನಡೆಯುವುದಿಲ್ಲ. ಜನರ ಪ್ರೀತಿ ಇದ್ದರೆ ಜಗತ್ತನ್ನೇ ಗೆಲ್ಲಬಹುದು ಎಂದು ಮಾರ್ಮಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚಂದ್ರಹಾಸ, ತಾಪಂ ಮಾಜಿ ಅಧ್ಯಕ್ಷ ಎಚ್.ಟಿ.ಮಂಜುನಾಥ್, ಸದಸ್ಯರಾದ ಮುಂಡೂರು ಕುಮಾರ್, ಜಿ.ಎಸ್.ಮಂಜುನಾಥ್, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಮಾಜಿ ಸದಸ್ಯ ಜಯರಾಮೇಗೌಡ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಎ.ಟಿ.ಗೋಪಾಲ್, ಸುಬ್ಬುಕೃಷ್ಣ, ಮುಖಂಡರಾದ ಡಿ.ಸಿ.ಕಾಂತಕುಮಾರ್, ಎ.ಎಂ.ನಟರಾಜು, ಟಿ.ಎಸ್.ನಾಗೇಂದ್ರ, ಶ್ರೀನಿವಾಸ್, ಯಶ್ವಂತ್, ಸುಬ್ರಹ್ಮಣ್ಯ, ಲಾರಿಬಸವರಾಜು, ಗಿರೀಶ್, ಉಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.