Advertisement

ಡಿಕೆಶಿ ಸ್ವಾಗತ: ಪೊಲೀಸರ ಕಾರು ಅಡ್ಡಗಟ್ಟಿ ದಾಂಧಲೆ

12:23 AM Oct 30, 2019 | Lakshmi GovindaRaju |

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಪಡೆದು ಬೆಂಗಳೂರಿಗೆ ಆಗಮಿಸಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಬಂದಿದ್ದ ಜನಸ್ತೋಮದಲ್ಲಿ ಡಿಸಿಪಿ ಸೇರಿದಂತೆ ಪೊಲೀಸರ ಕರ್ತವ್ಯಕ್ಕೆ ಕೆಲವರು ಅಡ್ಡಿಪಡಿಸಿ ದಾಂಧಲೆ ನಡೆಸಿದ ಪ್ರಸಂಗ ಬೆಳಕಿಗೆ ಬಂದಿದೆ.

Advertisement

ಅ.26ರಂದು ವಿಮಾನ ನಿಲ್ದಾಣದ ಚಿಕ್ಕಜಾಲ ಟೋಲ್‌ಗೇಟ್‌ 1ರಲ್ಲಿ ಮಧ್ಯಾಹ್ನ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ಸುಮಾರು 10ರಿಂದ 15 ಜನರಿದ್ದ ಕಾಂಗ್ರೆಸ್‌ ಪಕ್ಷದ ಬಾವುಟ ಹಿಡಿದಿದ್ದ ಗುಂಪು ಬಂದೋಬಸ್ತ್ ಕರ್ತವ್ಯದಲ್ಲಿದ್ದ ಈಶಾನ್ಯ ವಿಭಾಗದ ಡಿಸಿಪಿ ಡಾ. ಭೀಮಾಶಂಕರ ಗುಳೇದ್‌ ಅವರ ಕಾರನ್ನು ಅಡ್ಡಗಟ್ಟಿ ಮುಂದೆ ತೆರಳಲು ಅವಕಾಶ ನೀಡದಂತೆ ದಾಂಧಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಮುಂದೆ ಹೋಗಲು ಅವಕಾಶ ನೀಡುವಂತೆ ಡಿಸಿಪಿ ಅವರ ಅಂಗರಕ್ಷಕ ಮನವಿ ಮಾಡಿದರೂ ಕೇಳದ ಗುಂಪು, ಅವರನ್ನೇ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವರ ಸಮವಸ್ತ್ರ ಹಿಡಿದು ಎಳೆದಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಘಟನೆ ಬಗ್ಗೆ ಡಿಸಿಪಿ ಅವರ ಅಂಗರಕ್ಷಕ ಭರಮಪ್ಪ ಸುಣಗಾರ್‌ ನೀಡಿರುವ ದೂರು ಆಧರಿಸಿ ದಾಂಧಲೆ ನಡೆಸಿದ ಗುಂಪಿನ ವಿರುದ್ಧ ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ, ಗಲಭೆ, ಸಾರ್ವಜನಿಕ ಶಾಂತಿ ಕದಡಲು ಯತ್ನ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ಚಿಕ್ಕಜಾಲ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ಟೋಲ್‌ಗೇಟ್‌ನ ಸಿಸಿಟಿವಿ ಫ‌ೂಟೇಜ್‌ ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ಗುರುತು ಪತ್ತೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಅಕ್ರಮ ಫ್ಲೆಕ್ಸ್‌, ಬ್ಯಾನರ್‌ ಮತ್ತೊಂದು ಎಫ್ಐಆರ್‌!: ಡಿ.ಕೆ ಶಿವಕುಮಾರ್‌ ಅವರಿಗೆ ಸ್ವಾಗತ ಕೋರಿ ಅಕ್ರಮವಾಗಿ ಅಳವಡಿಸಿದ್ದ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ಕಟ್ಟಿದ್ದ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧವೂ ಚಿಕ್ಕಜಾಲ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್‌ ದಾಖಲಾಗಿದೆ. ಟೋಲ್‌ ಗೇಟ್‌ನಿಂದ ಭಾರತಿ ನಗರ ಗೇಟ್‌ವರೆಗೆ ಅಳವಡಿಸಿದ್ದ ನೂರಾರು ಫ್ಲೆಕ್ಸ್‌ಗಳನ್ನು ಅಳವಡಿಕೆ ಸಂಬಂಧ ಕರ್ನಾಟಕ ಸಾರ್ವಜನಿಕ ಸ್ಥಳಗಳ ವಿರೂಪ ತಡೆ ಕಾಯಿದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next