Advertisement

ಕೃಷಿ ಬೆಳೆಗೆ ಕಂಟಕವಾದ ಅಂತರಗಂಗೆ ಕಳೆ

06:00 AM May 28, 2018 | |

ಕೋಟ: ಕೋಟ ಹೋಬಳಿ ವ್ಯಾಪ್ತಿಯ ಕೃಷಿಭೂಮಿಯ ಸುಮಾರು 500 ಎಕರೆ ಪ್ರದೇಶದಲ್ಲಿ ಅಂತರಗಂಗೆ ಜಲಕಳೆಯ ಸಮಸ್ಯೆಯಿಂದ ಪ್ರತಿವರ್ಷ ಬೆಳೆ ನಾಶವಾಗುತ್ತಿದ್ದು ಸಮರ್ಪಕ ಪರಿಹಾರ ಕಾಣದೆ ರೈತ ಕಂಗಾಲಾಗಿದ್ದಾನೆ.

Advertisement

ಏನಿದು ಅಂತರಗಂಗೆ? 
ಇದೊಂದು ನೀರಿನ ಮೇಲೆ ತೇಲುವ ಜಲಕಳೆ. ಮೂಲ ಹೆಸರು ವಾಟರ್‌ಪರ್ನ್.ಜಲ ಮೂಲಗಳನ್ನು ವೇಗವಾಗಿ ಆಕ್ರಮಿಸಿ ಹಸಿರು ಹೊದಿಕೆ ಹಾಕಿದಂತೆ ಕಂಡುಬರುತ್ತದೆ. ಕೋಟ ಹೋಬಳಿ ವ್ಯಾಪ್ತಿಯ ಆವಿ ಮಣ್ಣಿನ ಹೊಂಡ, ಕೆರೆ, ಹೊಳೆ, ತೋಡುಗಳಲ್ಲಿ ಇದು ಹೇರಳವಾಗಿದೆ. 

ಮಳೆಗಾಲಕ್ಕೂ ಮೊದಲು ಕಿರಿದಾಗಿದ್ದು, ಮಳೆ ಬಿದ್ದಾಕ್ಷಣ ಹಿಗ್ಗಿಕೊಂಡು ನೆರೆ ನೀರಿನೊಂದಿಗೆ ಸೇರಿ ಕೃಷಿ ಭೂಮಿಗೆ ಲಗ್ಗೆ ಇಟ್ಟು ಭತ್ತದ ಸಸಿಯನ್ನು ನಾಶಗೊಳಿಸುತ್ತದೆ ಹಾಗೂ ಜಲಸಸ್ಯ, ಜಲಚರಗಳಿಗೂ ಕಂಟಕವಾಗುತ್ತದೆ.


ಈ ಕಳೆ ದಕ್ಷಿಣ ಅಮೇರಿಕಾದ ಬ್ರೆಜಿಲ್‌ನಲ್ಲಿ 1930ರಲ್ಲಿ ಪ್ರಥಮವಾಗಿ ಕಂಡುಬಂದು ಅನಂತರ ಶ್ರೀಲಂಕಾ, ಆಫ್ರಿಕಾ, ಆಸ್ಟ್ರೇಲಿಯಾ, ಅಮೇರಿಕಾ, ಭಾರತಕ್ಕೂ ಹರಡಿದೆ. ಇದರ ದುಷ್ಪರಿಣಾಮ ಅರಿಯದೆ ಆಲಂಕಾರಿಕ ಸಸ್ಯವಾಗಿ ಉಪಯೋಗಿಸಿದ್ದರಿಂದ ಎಲ್ಲ ಕಡೆ ಪಸರಿಸಿದೆ.
  
ಹೂಳೆತ್ತದ್ದರಿಂದ ಸಮಸ್ಯೆ ಉಲ್ಬಣ
ಹೊಳೆ, ತೋಡುಗಳ ಹೂಳೆತ್ತದಿರುವುದು ಈ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ನೀರು ಸರಾಗವಾಗಿ ಹರಿದರೆ ನೀರಿನೊಂದಿಗೆ ಇದು ಸಮುದ್ರ ಸೇರುತ್ತದೆ. ಹೂಳೆತ್ತುವ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರು ಯಾರು ಕೂಡ ಗಮನಹರಿಸಿಲ್ಲ ಎನ್ನುವುದು ರೈತರ ನೋವಾಗಿದೆ.

ಹತೋಟಿ ಕ್ರಮಗಳು 
– ಮಳೆಗಾಲಕ್ಕೆ ಮೊದಲು ಕಳೆಯನ್ನು ಮೇಲೆತ್ತಿ ಗುಂಡಿ ತೆಗೆದು ಮುಚ್ಚುವುದು. 
– ನೀರು ಮಲೀನವಾಗದಂತೆ ತಡೆಯುವುದು.
– ಕಳೆನಾಶಕಗಳಾದ ಡೆ„ಕ್ವಾಟ್‌, ಪ್ಯಾರಾಕ್ವಾಟ್‌, ಮುಂತಾದ ರಾಸಾಯನಿಕಗಳನ್ನು ಬಳಕೆ
– ಸಿರಟೊಬ್ಯಾಗಸ್‌ ಸಾಲ್ವೆನಿಯಾ ಎಂಬ ದುಂಬಿಯಿಂದ ಈ ಜಲಕಳೆ ಹತೋಟಿ

ಗ್ರಾಮ     ಹಾನಿ ವಿಸ್ತೀರ್ಣ ಎಕ್ರೆಗಳಲ್ಲಿ
ಮಣೂರು    70 
ಗಿಳಿಯಾರು    75 
ಹನೆಹಳ್ಳಿ    50
ಹೊಸಾಳ    37.50
ಕಚ್ಚಾರು    50 
ಬನ್ನಾಡಿ    37.50
ಕಾವಡಿ    12.50
ವಡ್ಡರ್ಸೆ    37.50
ಅಚ್ಲಾಡಿ    25
ಶಿರಿಯಾರ    12.50
ಚಿತ್ರಪಾಡಿ    100

Advertisement

ಇದರ ಜತೆಗೆ ತೆಕ್ಕಟ್ಟೆ, ಮಲ್ಯಾಡಿ, ಕೆದೂರು, ಉಳೂ¤ರು, ಹಲೂ¤ರು, ಗುಳ್ಳಾಡಿ ಗ್ರಾಮಗಳ ನೂರಾರು ಎಕ್ರೆ ಕೃಷಿಭೂಮಿಗೆ ಈ ಅಂತರಗಂಗೆಯ ಸಮಸ್ಯೆ ಇದೆ.

ಕಳೆ ನಾಶಪಡಿಸಿ ಕೃಷಿ ರಕ್ಷಿಸಿ 
ಅಂತರಗಂಗೆಯಿಂದ ಪ್ರತಿ ವರ್ಷ ನಮ್ಮ ಕೃಷಿ ಹಾನಿಯಾಗುತ್ತಿದ್ದು, ಬೇಸಾಯ ಕಷ್ಟ ಸಾಧ್ಯವಾಗಿದೆ. ಹಲವು ಮಂದಿ ಇದೇ ಕಾರಣಕ್ಕೆ ಗದ್ದೆ ಹಡವು ಹಾಕಿದ್ದಾರೆ. ಸಂಬಂಧಪಟ್ಟ ಇಲಾಖೆ ಅಥವಾ ಸ್ಥಳೀಯಾಡಳಿತ ಮಳೆಗಾಲಕ್ಕೆ ಮೊದಲು ಈ ಕಳೆಯನ್ನು ಮೇಲೆತ್ತಿ ನಾಶಪಡಿಸಿದರೆ ಅನುಕೂಲವಾಗುತ್ತದೆ. ಈ ಹಿಂದೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ
– ರಾಘವೇಂದ್ರ ಶೆಟ್ಟಿ, ಶೇಷಪ್ಪ ಮಯ್ಯ, 
ರೈತರು ಗಿಳಿಯಾರು

ಚಿಕ್ಕ ದುಂಬಿಯಿಂದ ಹತೋಟಿ ಸಾಧ್ಯ
ಅಂತರಗಂಗೆ ವಿಶ್ವಾದ್ಯಂತ ಭಯಾನಕ ಜಲಕಳೆಯಾಗಿ ಪರಿಗಣಿಸಲ್ಪಟ್ಟಿದೆ. ಕಳೆನಾಶಕ ಹಾಗೂ ಸಾಲ್ವೆನಿಯಾ ಎಂಬ ಚಿಕ್ಕ ದುಂಬಿಯಿಂದ ಇದನ್ನು ಹತೋಟಿ ಮಾಡಲು ಸಾಧ್ಯವಿದೆ ಹಾಗೂ ಇದು ಮೂಲದಲ್ಲೇ ನಾಶಪಡಿಸಿ ಹರಡದಂತೆ ಎಚ್ಚರಿಕೆ ವಹಿಸಬೇಕು.
– ಡಾ| ಎನ್‌.ಇ. ನವೀನ, 
ಕೆ.ವಿ.ಕೆ. ಬ್ರಹ್ಮಾವರ

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next