ಬೀದರ: ಬರೆದಂತೆ ಬದುಕಿದ, ಬದುಕಿದಂತೆ ಬರೆದ ಆದರ್ಶ ಶಿಕ್ಷಕ, ಸಾಹಿತಿ, ಶರಣಜೀವಿ ವೀರಶೆಟ್ಟಿ ಬಾವುಗೆಯವರಾಗಿದ್ದಾರೆ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.
ಭಾಲ್ಕಿ ನಗರದಲ್ಲಿ ಬಸವಸಿರಿ ಪ್ರಕಾಶನ ವತಿಯಿಂದ ವೀರಶೆಟ್ಟಿ¸ ಬಾವುಗೆಯವರ ಬದುಕು ಬರಹ ಕುರಿತ “ಅರಿವಿನ ಗುರು’ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ಸಾಹಿತಿಗಳು ಇಂದು ಬದುಕೇ ಬೇರೆ, ಬರಹವೇ ಬೇರೆ ಎಂದು ಸಮರ್ಥನೆ ಮಾಡಿಕೊಳ್ಳುವಂಥವರಿದ್ದಾರೆ. ಬದುಕು-ಬರಹ ನಾಣ್ಯದ ಎರಡು ಮುಖಗಳಿದ್ದಂತೆ. ಹೀಗಾಗಿ ಕವಿ ಬದುಕು-ಬರಹ ಕೂಡ ಅಷ್ಟೇ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ| ಶಿವಾನಂದ ಮಹಾಸ್ವಾಮಿಗಳು ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ, ವೀರಶೆಟ್ಟಿ ಬಾವುಗೆ ನಾಡು-ನುಡಿಗೆ ನೀಡಿದ ಕೊಡುಗೆ ಅನನ್ಯ. ಅವರ ಜೀವನ, ಆದರ್ಶ ಸಮಾಜಕ್ಕೆ ಅನಿವಾರ್ಯ. ಇಂದಿನ ಯುಗದಲ್ಲಿ ಮನುಷ್ಯನ ಬದುಕು-ಬರಹ ಒಂದಾಗಬೇಕಾದ ಅನಿವಾರ್ಯತೆಯಿದೆ. ಈ ಕೃತಿ ಕುರಿತು ಹಿರಿಯರಾದ ಸಿದ್ದಣ್ಣ ಲಂಗೋಟಿ, ವಿ. ಸಿದ್ಧರಾಮಣ್ಣರವರಂತಹ ಶರಣಜೀವಿಗಳು ಅಭಿಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇದು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೃತಿಯಾಗಿದೆ ಎಂದರು.
ಸಾಯಗಾಂವ ಶ್ರೀ ಬಸವಗುರುವಿನ ಪೂಜೆ ಸಲ್ಲಿಸಿದರು. ಹಿರಿಯ ಸಾಹಿತಿ ಡಾ| ಸೋಮನಾಥ ನುಚ್ಚಾ ಕೃತಿ ವಿಮರ್ಶೆ ಮಾಡಿದರು. ನಂತರ ಕೃತಿ ಪ್ರಧಾನ ಸಂಪಾದಕರಾದ ಡಾ| ರಘುಶಂಖ ಭಾತಂಬ್ರಾರವರು ಮಾತನಾಡಿದರು. ಸಂಪಾದಕರಾದ ಡಾ| ರಾಮಚಂದ್ರ ಗಣಾಪುರ ಪ್ರಾಸ್ತಾವಿಕ ಮಾತನಾಡಿದರು. ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕೃತಿ ಸಂಪಾದಕರು ಹಾಗೂ ಎಲ್ಲ ಲೇಖನಗಳ ಲೇಖಕರನ್ನು ಸನ್ಮಾನಿಸಲಾಯಿತು. ಹಾಗೂ ವೀರಶೆಟ್ಟಿ ಬಾವುಗೆ ದಂಪತಿಯನ್ನು ಪೂಜ್ಯರು ಹಾಗೂ ಅಭಿಮಾನಿಗಳು ಸನ್ಮಾನಿಸಿದರು.
ಈ ವೇಳೆ ಸಹ ಸಂಪಾದಕರಾದ ರುಕ್ಮೋದ್ದಿನ ಇಸ್ಲಾಂಪುರ ಸೇರಿದಂತೆ ಇತರರು ಇದ್ದರು. ಸಹ ಸಂಪಾದಕ ಗಣಪತಿ ಭೂರೆ ಸ್ವಾಗತಿಸಿದರು. ನಿರಂಜಪ್ಪ ಪಾತ್ರೆ ನಿರೂಪಿಸಿದರು. ಅಕ್ಕನಾಗಮ್ಮ ವಿಕ್ರಮ ಖಳ್ಳಾಳೆ ವಂದಿಸಿದರು.