Advertisement

ಜಿಲ್ಲೆಯಾದ್ಯಂತ ವೀಕೆಂಡ್‌-ನೈಟ್‌ ಕರ್ಫ್ಯೂ ಜಾರಿ

05:19 PM Jan 06, 2022 | Team Udayavani |

ಬಾಗಲಕೋಟೆ: ಕೋವಿಡ್‌ ಮೂರನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಜಿಲ್ಲೆಯಾದ್ಯಂತ ವೀಕೆಂಡ್‌ ಮತ್ತು ನೈಟ್‌ ಕರ್ಫ್ಯೂ ಪಾಲನೆಗೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ. ರಾಜೇಂದ್ರ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಹೊರಡಿಸಿದ ಹೊಸ ಮಾರ್ಗಸೂಚಿ ಅನ್ವಯ ನೈಟ್‌ ಕರ್ಫ್ಯೂ ಮುಂದುವರಿಯಲಿದ್ದು, ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 5ರ ವರೆಗೆ ವೀಕೆಂಡ್‌ ಕರ್ಫ್ಯೂ ಹೇರಲಾಗಿದೆ. ವಿಕೆಂಡ್‌ ಕರ್ಫ್ಯೂ ಸಮಯದಲ್ಲಿ ಮೆಡಿಕಲ್‌, ಹಾಲಿನ ಅಂಗಡಿ ಹೊರತುಪಡಿಸಿ ಉಳಿದವುಗಳಿಗೆ ಅವಕಾಶವಿರುವುದಿಲ್ಲ. ಆದರೆ ಹೋಮ್‌ ಡಿಲೆವರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು
ತಿಳಿಸಿದರು.

ಕಂದಾಯ, ಪೊಲೀಸ್‌, ಆರೋಗ್ಯ ಹಾಗೂ ಪಂಚಾಯತ್‌ ರಾಜ್‌ ಹಾಗೂ ಇತರೆ ಇಲಾಖೆಗಳು ಹೊರತುಪಡಿಸಿ ಉಳಿದ ಇಲಾಖೆಗಳು ಸೋಮವಾರದಿಂದ ಶುಕ್ರವಾರದ ವರೆಗೆ ಕಾರ್ಯನಿರ್ವಹಿಸಲಿವೆ. ಕ್ಲಬ್‌, ರೆಸ್ಟೋರೆಂಟ್‌, ಬಾರ್‌, ಹೋಟೆಲ್‌, ಚಿತ್ರಮಂದಿರ, ರಂಗಮಂದಿರ ಆಸನ ಸಾಮರ್ಥ್ಯದ ಶೇ. 50 ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಾಲ್‌, ಶಾಪಿಂಗ್‌ ಕಾಂಪ್ಲೆಕ್ಸ್‌ ಹಾಗೂ ದಿನಸಿ ಅಂಗಡಿಗಳು ವಾರದ ದಿನಗಳಲ್ಲಿ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಅಲ್ಲದೇ ಇದರ ಜೊತೆಗೆ ಪ್ರತಿಯೊಂದು ಅಂಗಡಿಗಳಲ್ಲಿ ಎರಡು ಡೋಸ್‌ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶವಿರುವ ಬಗ್ಗೆ ಬೋರ್ಡ್‌ ಹಾಕಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಲಸಿಕೆ ಪಡೆದವರಿಗೆ ದೇವಸ್ಥಾನ ಪ್ರವೇಶ:
ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಲಸಿಕೆ ಪಡೆದ 50 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಇದನ್ನು ಹೊರತುಪಡಿಸಿ ಹರಕೆ, ಸೇವೆ, ಜಾತ್ರೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ದೇವಸ್ಥಾನದಲ್ಲಿ ಅನ್ನಸಂತರ್ಪಣೆ, ಪ್ರಸಾದ ಹಾಗೂ ತೀರ್ಥ ಕೊಡುವುದನ್ನೂ ನಿಷೇಧಿಸಲಾಗಿದೆ.

ದೇವಸ್ಥಾನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು. ಈ ಬಗ್ಗೆ ದೇವಸ್ಥಾನದ ಕಮಿಟಿಯವರ ಸಭೆ ಕರೆದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ತಿಳಿಸಲಾಗಿದೆ. ಕಲ್ಯಾಣಿಯಲ್ಲಿ ಸ್ನಾನ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ವಾರದ ಸಂತೆಯನ್ನು ರದ್ದು ಮಾಡಲಾಗಿದೆ ಎಂದರು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ, ವೀಕೆಂಡ್‌ ಮತ್ತು ನೈಟ್‌ ಕರ್ಫ್ಯೂ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ನಿರ್ಧಾಕ್ಷಿಣ್ಯವಾಗಿ ಕಾನೂನಿನ ಕ್ರಮ ಜರುಗಿಸಲಾಗುತ್ತದೆ. ನೈಟ್‌ ಕರ್ಫ್ಯೂ ರಾತ್ರಿ 10ರಿಂದ ಪ್ರಾರಂಭವಾಗಲಿದ್ದು, 9.30 ಗಂಟೆಗೆ ಎಲ್ಲ ಅಂಗಡಿ ಮುಗ್ಗಟ್ಟು, ಬಾರ್‌, ಕ್ಲಬ್‌, ರೆಸ್ಟೋರೆಂಟ್‌ಗಳು ಮುಚ್ಚತಕ್ಕದ್ದು. ಪಾಲನೆಯಾಗದಿದ್ದಲ್ಲಿ ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.

ಜಿ.ಪಂ. ಸಿಇಒ ಟಿ. ಭೂಬಾಲನ್‌ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೋವಿಡ್‌ ಮೂರನೇ ಅಲೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಹಾಗೂ ಕಣ್ಗಾವಲು ಇಡಲಾಗುತ್ತದೆ. ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ದುಡಿಯಲು ಹೋದ ಕಾರ್ಮಿಕರು ಮರಳಿ ತಮ್ಮ ಊರಿಗಳಿಗೆ ಬಂದಲ್ಲಿ ಅವರಿಗೆ ತಪಾಸಣೆ ಮಾಡಿಸಿ ನರೇಗಾದಡಿ ಕೆಲಸ ನೀಡಲು ಕ್ರಮ ವಹಿಸಲಾಗುತ್ತದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ತಂಡದಿಂದ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಬಾಲ್ಯ ವಿವಾಹ ತಡೆಗೆ ಕ್ರಮವಹಿಸಲಾಗುತ್ತಿದೆ. ಸರಕಾರ ಹೊರಡಿಸಿದ ಹೊಸ ಮಾರ್ಗಸೂಚಿ ಪಾಲನೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೋವಿಡ್‌ ಮೂರನೇ ಅಲೆ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದು, ಅದನ್ನು ತಡೆಯಲು ಕ್ರಮ ವಹಿಸುವುದರ ಜೊತೆಗೆ ಕೋವಿಡ್‌ ಪಾಸಿಟಿವ್‌ ಬಂದ ವ್ಯಕ್ತಿಗಳ ಚಿಕಿತ್ಸೆಗೆ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಆಕ್ಸಿಜನ್‌ ಕಮಿಟಿ ಸಲಹೆಯಂತೆ ಎಲ್ಲ ರೀತಿಯ ಸಲಕರಣೆಗಳನ್ನು ಪರೀಕ್ಷಿಸಿ ಸೂಸ್ಥಿತಿಯಲ್ಲಿ ಇಡಲಾಗಿದೆ. ಮೆಡಿಶಿಗಳ ಸಂಗ್ರಹ ಮಾಡಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ ಶೇ.50 ರಷ್ಟು ಕೋವಿಡ್‌ ಚಿಕಿತ್ಸೆಗೆ ಬೆಡ್‌ಗಳನ್ನು ಮೀಸಲಿರಿಸಲು ತಿಳಿಸಲಾಗಿದೆ.
ಕ್ಯಾಪ್ಟನ್‌ ಡಾ| ಕೆ. ರಾಜೇಂದ್ರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next