ರಬಕವಿ-ಬನಹಟ್ಟಿ: ರಾಜ್ಯ ಸರಕಾರ ವಿಧಿಸಿದ ವಾರಾಂತ್ಯ ಕರ್ಫ್ಯೂಗೆ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶನಿವಾರ ಬೆಳಿಗ್ಗೆಯಿಂದಲೇ ಕಾಯಿಪಲ್ಲೆ, ಹಾಲು ಹಾಗೂ ಮೆಡಿಕಲ್ ಅಂಗಡಿಗಳನ್ನು ಬಿಟ್ಟು ಉಳಿದ ಎಲ್ಲಾ ಅಂಗಡಿಗಳೂ ಬಂದ್ ಇದ್ದು ಜನ ಸಂಚಾರ ಅತ್ಯಂತ ವಿರಳವಾಗಿತ್ತು.
ಸದಾ ಜನ ಮತ್ತು ವಾಹನಗಳಿಂದ ಗಿಜಿಗುಡುತ್ತಿದ್ದ ಪಟ್ಟಣದ ಮುಖ್ಯರಸ್ತೆಗಳು, ಮಾರುಕಟ್ಟೆ ರಸ್ತೆ, ಗಾಂಧಿವೃತ್ತ, ರಬಕವಿಯ ಶಂಕರಲಿಂಗ ದೇವಸ್ಥಾನ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳೆಲ್ಲ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.
ಎಲ್ಲಾ ಅಂಗಡಿಗಳೂ ಕೂಡಾ ಬಂದ್ ಇದ್ದುದರಿಂದ ಜನ ಪೇಟೆಗೆ ಬರುವ ಗೋಜಿಗೇ ಹೋಗಿಲ್ಲ. ಹೋಟೇಲ್‌ಗಳು ಸಹ ಬಾಗಿಲೇ ತೆರೆಯದೇ ಬಂದ್ ಮಾಡಿದ್ದು ಕಂಡು ಬಂತು. ಕೆಲವು ಕಡೆಗಳಲ್ಲಿ ಹಣ್ಣು ವ್ಯಾಪಾರಸ್ಥರು ತಳ್ಳುವ ಗಾಡಿಗಳಲ್ಲಿ ವ್ಯಾಪಾರ ಮಾಡುಲು ಬಂದರೂ ಕೂಡಾ ಗಿರಾಕಿಗಳೇ ಇಲ್ಲದೇ ಕಾಯುವಂತಾಗಿತ್ತು. ಜನರು ರಸ್ತೆಗಿಳಿಯದೇ ಇರುವುದರಿಂದ ಪೊಲೀಸ್ ಇಲಾಖೆಯ ಕೆಲಸ ಸುಗಮವಾಗಿತ್ತು. ಆದರೂ ಅಲ್ಲಲ್ಲಿ ನಿಂತು ಓಡಾಡುವವರನ್ನು ವಿಚಾರಿಸುತ್ತಿರುವುದು ಕಂಡು ಬಂತು.
ಎರಡನೇ ಶನಿವಾರವಾದ್ದರಿಂದ ಸರಕಾರಿ ಕಚೇರಿಗಳು, ಬ್ಯಾಂಕುಗಳಿಗೆ ರಜೆ ಇದ್ದುದರಿಂದ ಜನರ ಓಡಾಟ ಇನ್ನಷ್ಟು ವಿರಳವಾಗಿತ್ತು. ಕೆಲವೊಂದು ಸೇವೆಗಳಿಗೆ ಹಾಗೂ ಆಸ್ಪತ್ರೆಗೆ ಹೋಗುವವರಿಗೆ, ವ್ಯಾಕ್ಸಿನೇಶನ್ ತೆಗೆದುಕೊಳ್ಳಲು ಹೋಗುವವರಿಗೆ ವಿನಾಯಿತಿ ಇದ್ದರೂ ಸಹ ಜನ ಹೆಚ್ಚಾಗಿ ಹೊರಗೆ ಬರದೇ ಇರುವುದರಿಂದ ರಸ್ತೆಗಳೆಲ್ಲ ಖಾಲಿ ಖಾಲಿಯಾಗಿತ್ತು. ಒಟ್ಟಾರೆ ಬೆಳಿಗ್ಗೆಯಿಂದಲೇ ಜನ ಸಂಚಾರ ಇಲ್ಲದೇ ಬಂದ್ ಸಂಪೂರ್ಣ ಯಶಸ್ವಿಯಾಗಿತ್ತು.
ಈ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ ಪತ್ರಿಕೆಯೊಂದಿಗೆ ಮಾತನಾಡಿ, ತಾಲೂಕಿನಲ್ಲಿ ವಾರಾಂತ್ಯದ ಕರ್ಫ್ಯೂಗೆ ಜನಸ್ಪಂದಿಸಿದ್ದು ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿ ಸಹಕರಿಸಿದ್ದಾರೆ. ಅಲ್ಲದೇ ಕೆಲವು ವಿನಾಕಾರಣ ಹೊರಗೆ ಬರುವವರ ವಿರುದ್ದ ಪೊಲೀಸ ಇಲಾಖೆಯವರು ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಿಪಿಐ ಜೆ. ಕರುಣೇಶಗೌಡ ಮಾತನಾಡಿ, ವಾರಾಂತ್ಯದ ಕರ್ಫ್ಯೂ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಕಟ್ಟು ನಿಟ್ಟಾಗಿ ಸರಕಾರದ ನಿಯಮಗಳನ್ನು ಪಾಲಿಸಬೇಕು ಅನಗತ್ಯವಾಗಿ ಬೈಕ ಮೇಲೆ ಓಡಾಡುವುದು ಮಾಡಬಾರದು. ತಪ್ಪಿದ್ದಲ್ಲಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.