Advertisement
ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಇರಲಿದ್ದು, ಪೊಲೀಸರು ನಗರದ ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿ ಅನಗತ್ಯ ವಾಹನ ಸಂಚಾರ ತಡೆಯುತ್ತಿದ್ದಾರೆ. ಶುಕ್ರವಾರ ರಾತ್ರಿ 10 ಗಂಟೆಯ ಬಳಿಕ ವಿವಿಧ ಕಡೆಗಳಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ದೃಶ್ಯ ನಗರದಲ್ಲಿ ಕಂಡು ಬಂತು. ಶನಿವಾರ ದಿನವಿಡೀ ವಾರಾಂತ್ಯ ಕರ್ಫ್ಯೂ ಮುಂದುವರಿಯಲಿದ್ದು, ಈ ವೇಳೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಸೇವೆಗಳು ಸ್ಥಗಿತಗೊಳ್ಳಲಿವೆ. ಸಾರ್ವಜನಿಕರ ಅನಗತ್ಯ ಸಂಚಾರಕ್ಕೆ ಕಡಿವಾಣ ಬೀಳಲಿದೆ. ದಿನಸಿ, ಹಾಲು, ತರಕಾರಿ, ಬೀದಿ ಬದಿ ವ್ಯಾಪಾರ, ಮೀನು, ಮಾಂಸ, ಹಾಲು, ಔಷಧ ಅಂಗಡಿಗಳು ತೆರೆದಿರುತ್ತವೆ. ಹೊಟೇಲ್‌ಗಳಲ್ಲಿ ಕುಳಿತು ಆಹಾರ ಸೇವಿಸಲು ಅವಕಾಶವಿಲ್ಲ. ಬದಲಾಗಿ ಪಾರ್ಸೆಲ್ ಸೇವೆ ಇರಲಿದೆ. ಆನ್‌ಲೈನ್ ಆಹಾರ ಡೆಲಿವರಿ ಎಂದಿನಂತೆ ಇರಲಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಪ್ರವೇಶ ನಿರ್ಬಂಧ ಇರಲಿದೆ. ತೀರಾ ಕೌಟುಂಬಿಕ ಕಾರ್ಯಕ್ರಮಗಳನ್ನು ಸೀಮಿತ ಸಂಖ್ಯೆಯಲ್ಲಿ ನಡೆಸಲು ಮಾತ್ರ ಅವಕಾಶ ನೀಡಲಾಗಿದೆ.
ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ವಿರಳ ಸಂಖ್ಯೆಯ ಬಸ್ ಸಂಚರಿಸುವ ಸಾಧ್ಯತೆ ಇದೆ. ಈ ಕುರಿತಂತೆ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಬಸ್ ಮಾಲಕರು ಈ ಹಿಂದೆಯೇ ನಷ್ಟದ ಸುಳಿ ಯಲ್ಲಿದ್ದರು. ವಾರಾಂತ್ಯ ಕರ್ಫ್ಯೂ ಘೋಷಣೆ ಬಳಿಕ ಮತ್ತಷ್ಟು ನಷ್ಟ ಉಂಟಾಗುತ್ತಿದೆ. ಕಳೆದ ವಾರ ಶನಿವಾರ, ರವಿವಾರ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇತ್ತು. ಹಾಗಾಗಿ ಈ ವಾರ ಕಡಿಮೆ ಸಂಖ್ಯೆಯ ಬಸ್‌ಗಳು ರಸ್ತೆಗಳಿಯಲಿವೆ. ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಬಸ್ ಕಾರ್ಯಾಚರಿಸಲಿವೆ’ ಎಂದಿದ್ದಾರೆ. ಕೆಎಸ್ಸಾರ್ಟಿಸಿ ಅಧಿಕಾರಿಗಳು ಮಾಹಿತಿ ನೀಡಿ, ಪ್ರಯಾಣಿಕರ ಸಂಖ್ಯೆಗೆ ಅನು ಗುಣವಾಗಿ ಬಸ್ ಸಂಚರಿಸಲಿದೆ ಎನ್ನುತ್ತಾರೆ.