Advertisement

ವೀಕೆಂಡ್‌ ಕರ್ಫ್ಯೂ ಮುಂದುವರಿಕೆ

10:46 AM Jun 26, 2021 | Team Udayavani |

ಹಾವೇರಿ: ಮಹಾಮಾರಿ ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ವೀಕೆಂಡ್‌ ಕರ್ಫ್ಯೂ ಮುಂದುವರಿಸಲಾಗಿದ್ದು, ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅತ್ಯಾವಶ್ಯಕ ಮತ್ತು ತುರ್ತು ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.

Advertisement

ಕೋವಿಡ್ ಎರಡನೇ ಅಲೆ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ ಸರ್ಕಾರದಿಂದ ಜಾರಿಗೊಳಿಸಲಾದ ಮಾರ್ಗಸೂಚಿಗಳನ್ನು ಜಿಲ್ಲಾದ್ಯಂತ ಜುಲೈ 5 ರವರೆಗೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳು ಜೂ.20 ರಂದು ಹೊರಡಿಸಿದ ಆದೇಶದಂತೆ ವಾರಾಂತ್ಯದಲ್ಲಿ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 6ರವರೆಗೆ ದಿನಸಿ, ತರಕಾರಿ, ಹಾಲು, ಔಷಧ, ಮಾಂಸ, ಮೀನು, ಪಶು ಆಹಾರದ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳು, ಸಾರ್ವಜನಿಕ ವಿತರಣಾ ವ್ಯವಸ್ಥೆ ಅಂಗಡಿಗಳಿಗೆ ಹಾಗೂ ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳಿಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 5 ರವರೆಗೆ ಅನುಮತಿಸಲಾಗಿದೆ. ಅತ್ಯಾವಶ್ಯಕ ಹಾಗೂ ತುರ್ತು ಚಟುವಟಿಕೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಉಳಿದ ವಾರದ ದಿನಗಳಲ್ಲಿ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ನಿಗ ದಿತ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಲಾಗಿದೆ. ಸೋಮವಾರದಿಂದ ಶುಕ್ರವಾರದವರೆ ರಾತ್ರಿ ಕರ್ಫ್ಯೂ ಸಂಜೆ 7 ರಿಂದ ಬೆಳಗ್ಗೆ 5 ಗಂಟೆವರೆಗೆ ಜಾರಿಯಲ್ಲಿರುತ್ತದೆ. ವೀಕೆಂಡ್‌ ಕರ್ಫ್ಯೂ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಎಲ್ಲಾ ಉತ್ಪಾದನಾ ಘಟಕಗಳು, ಸಂಸ್ಥೆಗಳು, ಕೈಗಾರಿಕೆಗಳು ತಮ್ಮ ಸಿಬ್ಬಂದಿ ಸಾಮರ್ಥ್ಯದ ಶೇ.50 ರಷ್ಟು ಸಿಬ್ಬಂದಿಯೊಂದಿಗೆ ಹಾಗೂ ಗಾರ್ಮೆಂಟ್‌ ತಯಾರಿಕೆಯಲ್ಲಿ ತೊಡಗಿರುವ ಉತ್ಪಾದನಾ ಘಟಕಗಳು, ಸಂಸ್ಥೆಗಳು, ಕೈಗಾರಿಕೆಗಳು ತಮ್ಮ ಸಿಬ್ಬಂದಿ ಸಾಮರ್ಥ್ಯದ ಶೇ.30ರಷ್ಟು ಸಿಬ್ಬಂದಿಯೊಂದಿಗೆ ಕೋವಿಡ್‌-19ರ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.

ಹವಾನಿಯಂತ್ರಣ ವ್ಯವಸ್ಥೆಯನ್ನು ಚಾಲನೆಗೊಳಿಸದೇ ಎಲ್ಲ ಅಂಗಡಿಗಳಿಗೆ ಪ್ರತಿದಿನ ಬೆಳಗ್ಗೆ 6ರಿಂದ ಸಂಜೆ 5 ಗಂಟೆವರೆಗೆ ಕೋವಿಡ್‌ ಎಸ್‌ಓಪಿ ನಿಯಮ ಅನುಸರಿಸಿಕೊಂಡು ತೆರೆಯಲು ಅನುಮತಿ ನೀಡಲಾಗಿದೆ. ಹೋಟೆಲ್‌, ರೆಸ್ಟೋರೆಂಟ್‌, ಬಾರ್‌ ಮತ್ತು ಕ್ಲಬ್‌ಗಳಲ್ಲಿ(ಮದ್ಯಪಾನ ಹೊರತುಪಡಿಸಿ)ಕುಳಿತುಕೊಂಡು ಆಹಾರ ಸೇವಿಸಲು ಪ್ರತಿದಿನ ಬೆಳಗ್ಗೆ 6 ಸಂಜೆ 5 ಗಂಟೆವರೆಗೆ ಅನುಮತಿ ನೀಡಲಾಗಿದೆ. ಕೋವಿಡ್‌ ಮಾರ್ಗಸೂಚಿ ಅನುಸರಿಸಿ ಶೇ.50ರ ಸಾಮರ್ಥ್ಯದೊಂದಿಗೆ ಲಾಡ್ಜ್ಗಳು ಮತ್ತು ರೆಸಾರ್ಟ್ ಗಳಿಗೆ ಅವಕಾಶ ನೀಡಲಾಗಿದೆ. ಕಟ್ಟಡ ನಿರ್ಮಾಣ ಮತ್ತು ದುರಸ್ತಿಗೆ ಸಂಬಂಧಿಸಿದ ಸಾಮಗ್ರಿಗಳೊಂದಿಗೆ ವ್ಯವಹರಿಸುವ ಅಂಗಡಿಗಳು, ಸಂಸ್ಥೆಗಳಿಗೆ ಪ್ರತಿದಿನ ಬೆಳಗ್ಗೆ 6 ಸಂಜೆ 5 ಗಂಟೆವರೆಗೆ ಅನುಮತಿ ನೀಡಲಾಗಿದೆ. ವಾಕಿಂಗ್‌ ಉದ್ದೇಶಕ್ಕಾಗಿ ಬೆಳಗ್ಗೆ 5 ರಿಂದ ಸಂಜೆ 6 ಗಂಟೆವರೆಗೆ ಉದ್ಯಾನವನಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ, ಯಾವುದೇ ಗುಂಪು ಚಟುವಟಿಕೆಗಳಿಗೆ ಅನುಮತಿ ಇರುವುದಿಲ್ಲ. ಶೇ.50 ರಷ್ಟು ಸಾಮರ್ಥ್ಯದೊಂದಿಗೆ ಜಿಮ್‌ಗಳಿಗೆ(ಹವಾನಿಯಂತ್ರಣ ಇಲ್ಲದೆ) ಅವಕಾಶ ನೀಡಲಾಗಿದೆ.

ಗರಿಷ್ಠ ಇಬ್ಬರು ಪ್ರಯಾಣಿಕರೊಂದಿಗೆ ಟ್ಯಾಕ್ಸಿಗಳು ಮತ್ತು ಆಟೋ ರಿಕ್ಷಾಗಳಿಗೆ ಸಂಚರಿಸಲು ಅನುಮತಿಸಲಾಗಿದೆ. ವೀಕ್ಷಕರಿಲ್ಲದೆ ಹೊರಾಂಗಣ ಕ್ರೀಡೆಗಳಿಗೆ ಅನುಮತಿ ನೀಡಲಾಗಿದೆ. ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ ಸಿಬ್ಬಂದಿಯ ಶೇ.50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಜಿಲ್ಲಾದ್ಯಂತ ನಿಂತು ಪ್ರಯಾಣಿಸುವುದನ್ನು ನಿರ್ಬಂಧಿಸಿ ಬಸ್‌ಗಳ ಸಂಚಾರಕ್ಕೆ ಶೇ.50 ರಷ್ಟು ಪ್ರಯಾಣಿಕರಿಗೆ ಮಿತಿಗೊಳಿಸಿ ಅನುಮತಿಸಲಾಗಿದೆ.

Advertisement

ಈಗಾಗಲೇ ನಿಗದಿಪಡಿಸಲಾಗಿರುವ ಮದುವೆ ಸಮಾರಂಭಗಳನ್ನು ಅವರವರ ಮನೆಗಳಲ್ಲಿಯೇ ಹತ್ತಿರದ ಸಂಬಂಧಿಕರು ಒಳಗೊಂಡಂತೆ 40 ಜನರಿಗೆ ಮೀರದಂತೆ ಅನುಮತಿಸಿದೆ ಹಾಗೂ ಅಂತ್ಯ ಸಂಸ್ಕಾರಕ್ಕೆ ಐದು ಜನರು ಮೀರದಂತೆ ನಡೆಸಲು ಅನುಮತಿಸಲಾಗಿದೆ. ಜಿಲ್ಲಾದ್ಯಂತ ವಿನಾಯಿತಿ ಪಡೆದ ಉದ್ದೇಶಗಳನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕಕ್ಕೂ ಅಧಿಕ ವ್ಯಕ್ತಿಗಳ ಸೇರುವಿಕೆಯನ್ನು ನಿಷೇ ಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಕೋವಿಡ್ ಎರಡನೇ ಅಲೆ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳನ್ನು ಜಿಲ್ಲಾದ್ಯಂತ ಜುಲೈ 5 ರವರೆಗೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲಾದ್ಯಂತ ಬಸ್‌ಗಳಲ್ಲಿ ನಿಂತುಕೊಂಡು ಪ್ರಯಾಣಿಸುವುದನ್ನು ನಿರ್ಬಂಧಿಸಿ, ಬಸ್‌ಗಳಲ್ಲಿ ಶೇ.50 ರಷ್ಟು ಪ್ರಯಾಣಿಕರನ್ನು ಮಿತಿಗೊಳಿಸಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ.-ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿಗಳು

Advertisement

Udayavani is now on Telegram. Click here to join our channel and stay updated with the latest news.

Next