Advertisement

ವಾರಾಂತ್ಯದಲ್ಲಿ ಬಿಎಂಟಿಸಿ ಬಸ್‌ ಇರಲ್ಲ: ಮೆಟ್ರೋ ಕಾರ್ಯಾಚರಣೆ ಅವಧಿ ಕಡಿತ

12:54 PM Jan 06, 2022 | Team Udayavani |

ಬೆಂಗಳೂರು: ನಗರದಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಯಾದ ಬೆನ್ನಲ್ಲೇ ಸಾರ್ವಜನಿಕ ಸಾರಿಗೆ ಸೇವೆಗಳಿಗೆ ಕತ್ತರಿ ಬಿದ್ದಿದೆ. ಈ ಅವಧಿಯಲ್ಲಿ ಬಿಎಂಟಿಸಿ ಬಸ್ ಗಳ ಸಂಚಾರ ಸಂಪೂರ್ಣ ಸ್ತಬ್ಧಗೊಳ್ಳಲಿದ್ದರೆ, “ನಮ್ಮ ಮೆಟ್ರೋ’ ಕಾರ್ಯಾಚರಣೆ ಅವಧಿ ಕಡಿತಗೊಳ್ಳಲಿದೆ.

Advertisement

ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಮುಂದಿನ ಎರಡೂ ವಾರಾಂತ್ಯದ ದಿನಗಳಲ್ಲಿ ಅಂದರೆ ಜ. 8, 9 ಹಾಗೂ ಜ. 15, 16ರಂದು ಬಿಎಂಟಿಸಿ ಬಸ್‌ಗಳಲ್ಲಿ ಸಾರ್ವಜನಿಕ ಪ್ರಯಾಣ ನಿರ್ಬಂಧಿಸಲಾಗಿದೆ.

ಸರ್ಕಾರದ ಮಾರ್ಗಸೂಚಿಯಂತೆ ಈ ಅವಧಿಯಲ್ಲಿ ಅಗತ್ಯ ಸಾರಿಗೆ ಸೇವೆಗಳು ಮಾತ್ರ ಲಭ್ಯ ಇರಲಿವೆ. ಹೀಗಾಗಿ, ವಾರಾಂತ್ಯದಲ್ಲಿ ನಗರದಲ್ಲಿನ ಕಂಟೈನ್ಮೆಂಟ್‌ ವಲಯಗಳನ್ನು ಹೊರತುಪಡಿಸಿ, ಶೇ.10ರಷ್ಟು ಅಗತ್ಯ ಸಾರಿಗೆಗಳು ಕಾರ್ಯಾಚರಣೆ ಮಾಡಲಿವೆ ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.

ಉದಾಹರಣೆಗೆ ಪೊಲೀಸ್‌, ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅರಣ್ಯ ಇಲಾಖೆ, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ವೈದ್ಯಕೀಯ ತಂತ್ರಜ್ಞರು, ಪ್ಯಾರಾಮೆಡಿಕಲ್ಸ್‌, ಡಯಾಗ್ನಸ್ಟಿಕ್‌ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವವರು, ಪರೀಕ್ಷೆ ಗಳಿಗೆ ಹಾಜರಾಗುವ ವಿದ್ಯಾರ್ಥಿಗಳು, ಕೈಗಾರಿಕೆ ಮತ್ತಿತರ ವಲಯದ ಸಿಬ್ಬಂದಿಯು ಭಾವಚಿತ್ರ ಇರುವ ಗುರುತಿನ ಚೀಟಿಯೊಂದಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಇನ್ನು ಉಳಿದಂತೆ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯಗೊಳಿಸಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಹತ್ತುವುದು, ಇಳಿಯುವುದು ಮಾಡಬೇಕು. ಜ್ವರ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವ ಪ್ರಯಾಣಿಕರು ಬಸ್‌ಗಳಲ್ಲಿ ಪ್ರಯಾಣಿಸುವಂತಿಲ್ಲ ಎಂದು ಬಿಎಂಟಿಸಿ ತಿಳಿಸಿದೆ.

Advertisement

ರಾತ್ರಿ 9ಕ್ಕೆ ಮೆಟ್ರೋ ಕೊನೆ ರೈಲು

ನಮ್ಮ ಮೆಟ್ರೋದಲ್ಲಿ ಶನಿವಾರ ಮತ್ತು ಭಾನುವಾರ ಮೆಟ್ರೋ ಸೇವೆ ರಾತ್ರಿ 9ರವರೆಗೆ ಮಾತ್ರ ಲಭ್ಯ ಇರಲಿದೆ. ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ಸೇರಿದಂತೆ ನಾಲ್ಕೂ ಟರ್ಮಿನಲ್‌ ಗಳಿಂದ 9ಕ್ಕೆ ಕೊನೆಯ ರೈಲುಗಳು ಹೊರಡಲಿವೆ. ಇನ್ನು ಈ ಎರಡೂ ದಿನಗಳು ಬೆಳಗ್ಗೆ 8ರಿಂದ ಮೆಟ್ರೋ ಸೇವೆಗಳು ಆರಂಭಗೊಳ್ಳಲಿವೆ. ಪ್ರತಿ 20 ನಿಮಿ ಷಗಳ ಅಂತರದಲ್ಲಿ ಮೆಟ್ರೋ ಕಾರ್ಯಾಚರಣೆ ಮಾಡಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಮಾಹಿತಿ ನೀಡಿದೆ. ಇನ್ನು ವಾರದ ದಿನಗಳಲ್ಲಿ ಅಂದರೆ ಸೋಮವಾರದಿಂದ ಗುರುವಾರದವರೆಗೆ ಎಂದಿನಂತೆ ಮೆಟ್ರೋ ಸೇವೆಗಳು ರಾತ್ರಿ 11 ರವರೆಗೆ ಇರಲಿವೆ. ಅದರಂತೆ ಕೊನೆಯ ರೈಲು ಗಳು ನಾಲ್ಕೂ ಟರ್ಮಿನಲ್‌ಗ‌ಳಿಂದ 11ಕ್ಕೆ ನಿರ್ಗಮಿಸಲಿವೆ. ಬೆಳಗಿನಜಾವ ಕೂಡ 5ರಿಂದಲೇ ಸೇವೆಗಳು ಲಭ್ಯ ಇರಲಿದ್ದು, ಫ್ರೀಕ್ವೆನ್ಸಿ (ಎರಡು ರೈಲುಗಳ ನಡುವಿನ ಅಂತರ) ಮಾತ್ರ ಕಡಿಮೆ ಇರಲಿದೆ. ಶುಕ್ರವಾರ ಮಾತ್ರ ರಾತ್ರಿ 10ಗಂಟೆಗೇ ನಾಲ್ಕೂ ಟರ್ಮಿನಲ್‌ಗ‌ಳಿಂದ ಕೊನೆಯ ರೈಲುಗಳು ನಿರ್ಗಮಿಸಲಿವೆ ಎಂದು ನಿಗಮದ ಪ್ರಕಟಣೆ ಸ್ಪಷ್ಟಪಡಿಸದೆ.

ಇದನ್ನೂ ಓದಿ:ಇತಿಹಾಸದಿಂದ ಪಾಠ ಕಲಿಯಬೇಕಿದೆ : ಭದ್ರತಾ ಲೋಪದ ಬಗ್ಗೆ ದೇವೇಗೌಡ ವ್ಯಾಖ್ಯಾನ

ಪ್ರಯಾಣಿಕರು ಏನು ಮಾಡಬೇಕು

ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಆಸನಗಳು ಭರ್ತಿಯಾಗಿದ್ದಲ್ಲಿ ಬಸ್‌ ಹತ್ತಬಾರದು ಮತ್ತು ಜ್ವರ, ಇತರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ನಿಷಿದ್ಧ.

ಚಾಲನಾ ಸಿಬ್ಬಂದಿ ಹೊಣೆ:  ಮಾಸ್ಕ್ ಕಡ್ಡಾಯ, ಸ್ಯಾನಿಟೈಸರ್‌ ಬಳಕೆ, ಎಲ್ಲ ಪ್ರಯಾಣಿಕರ ಗುರುತಿನ ಚೀಟಿ ಪರಿಶೀಲನೆ.

ರಾತ್ರಿ ಸೇವೆಗಳಿಗೂ ಕತ್ತರಿ:  ವಾರಾಂತ್ಯದ ಜತೆಗೆ ಉಳಿದ ದಿನಗಳಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಮಾತ್ರ ಬಸ್‌ಗಳ ಕಾರ್ಯಾಚರಣೆ ಇರಲಿದೆ.

ಯಾರಿಗೆ ಅನುಮತಿ?

ಕೇಂದ್ರ ಮತ್ತು ರಾಜ್ಯ ಸರ್ಕಾರಿ, ಅರೆ ಸರ್ಕಾರಿ ನೌಕರರು, ಸಾರ್ವಜನಿಕ ಉದ್ದಿಮೆ/ ನಿಗಮ-ಮಂಡಳಿ ಹಾಗೂ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ.

ಪೊಲೀಸ್‌, ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅರಣ್ಯ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಅಧಿಕಾರಿಗಳು/ ನೌಕರರು, ಪ್ರಯೋಗಾಲಯ ಸಿಬ್ಬಂದಿ, ಡಯಾಗ್ನಸ್ಟಿಕ್‌ ಕೇಂದ್ರಗಳಲ್ಲಿನ ವೈದ್ಯರು, ನರ್ಸ್‌, ಪ್ಯಾರಾಮೆಡಿಕಲ್ಸ್‌, ಆಶಾ ಕಾರ್ಯಕರ್ತರು, ವೈದ್ಯಕೀಯ ತಂತ್ರಜ್ಞರು ಇತ್ಯಾದಿ.

ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆ, ಪ್ರಯೋಗಾಲಯಗಳಿಗೆ ಪ್ರಯಾಣಿಸುವ ರೋಗಿಗಳು ಮತ್ತು ಸಹಾಯಕರು.

ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌, ವಿಮಾ ಇಲಾಖೆ ಸಿಬ್ಬಂದಿ ಹಾಗೂ ಪತ್ರಕರ್ತರು ರೈಲು/ ವಿಮಾನಯಾನ ಪ್ರಯಾಣಿಕರು (ಟಿಕೆಟ್‌ ಮತ್ತು ಗುರುತಿನಚೀಟಿ ಕಡ್ಡಾಯ)

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು (ಪ್ರವೇಶ ಪತ್ರದೊಂದಿಗೆ)

ಕೈಗಾರಿಕೆ ಮತ್ತಿತರ ವಲಯಗಳ ಸಿಬ್ಬಂದಿ.

Advertisement

Udayavani is now on Telegram. Click here to join our channel and stay updated with the latest news.

Next