ಮೈಸೂರು: ವಾರಾಂತ್ಯ ಕರ್ಫ್ಯೂನಿಂದಾಗಿ ರಸ್ತೆಗಳು, ಮಾರುಕಟ್ಟೆಗಳು ಸಂಪೂರ್ಣ ಖಾಲಿ ಖಾಲಿಯಾಗಿದ್ದವು. ಎಲ್ಲೆಡೆ ಬಿಕೋ ಎನ್ನವ ವಾತಾವರಣ ಸೃಷ್ಟಿಯಾಗಿತ್ತು.
ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವುದು ಹಾಗೂ ವಾರಾಂತ್ಯ ಕರ್ಫ್ಯೂ ವಿಧಿಸಿರುವುದರಿಂದ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿತ್ತು. ಪ್ರಮುಖ ವಾಣಿಜ್ಯ ಕೇಂದ್ರ ಕೆ.ಆರ್.ಸರ್ಕಲ್,ಡಿ.ದೇವರಾಜ ಅರಸು ರಸ್ತೆ, ಸಯ್ನಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ, ಧನ್ವಂತರಿ ರಸ್ತೆ, ಕಾಳಿದಾಸ ರಸ್ತೆ, ಅಗ್ರಹಾರ ವೃತ್ತಗಳಲ್ಲಿ ಜನಸಂಚಾರ ವಿರಳವಾಗಿ ಬಿಕೋ ಎನ್ನುವ ವಾತಾವರಣ ಇತ್ತು.
ಸಂಕ್ರಾಂತಿ ಹಬ್ಬವನ್ನು ಆಚರಿಸಿದ ಜನರು ಕರ್ಫ್ಯೂವಿರುವ ಕಾರಣ ಹೊರಗಡೆ ಸಂಚರಿಸಲಿಲ್ಲ. ಬಡಾವಣೆಗಳಲ್ಲಿ ಸ್ವಲ್ಪಮಟ್ಟಿಗೆ ಜನಸಂಚಾರವಿದ್ದರೂ ಮಾರುಕಟ್ಟೆ ಪ್ರದೇಶಗಳಲ್ಲಿ ಜನಜೀವನ ಸ್ತಬ್ಧವಾಗಿತ್ತು. ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
ಸಾರಿಗೆ ಬಸ್‌ಗಳು, ಆಟೋರಿಕ್ಷಾಗಳ ಸಂಚಾರ ವಿರಳವಾಗಿತ್ತು. ಕೋವಿಡ್‌ನಿಂದಾಗಿ ಹಬ್ಬದ ಆಚರಣೆ ಮನೆ ಮನೆಗೆ ಸೀಮಿತವಾಯಿತು. ತಮ್ಮ ಬಂಧುಗಳು, ಸ್ನೇಹಿತರ ಮನೆಗೆ ತೆರಳಿದ ಹೆಣ್ಣು ಮಕ್ಕಳು ಎಳ್ಳು ಬೆಲ್ಲ ನೀಡಿ ಶುಭ ಕೋರಿದರು. ಮೈಸೂರಿನಲ್ಲಿ ನೆಲೆಸಿರುವ ಹೊರ ರಾಜ್ಯದವರು ತಮ್ಮ ಸಂಪ್ರದಾಯದಂತೆ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು.
ಜೀವಧಾರ ರಕ್ತನಿಧಿ ಕೇಂದ್ರದಿಂದ ಮಂಡಿ ಮೊಹಲ್ಲಾದ ಮಿಷನ್ ಆಸ್ಪತ್ರೆ ರಸ್ತೆಯಲ್ಲಿ ಸ್ವಚ್ಛತೆ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಕಬ್ಬು ಎಳ್ಳು ಬೆಲ್ಲ ಹಾಗೂ ಹೂವು ನೀಡುವ ಮೂಲಕ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು.