Advertisement

ವಾರಾಂತ್ಯ ಕರ್ಫ್ಯೂ: ಮಧ್ಯಾಹ್ನದ ಬಳಿಕ ಸಂಪೂರ್ಣ ಬಂದ್‌

07:23 PM Sep 04, 2021 | Team Udayavani |

ಕುಂದಾಪುರ:  ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಈ ವಾರದಿಂದ ಮತ್ತೆ ವಾರಾಂತ್ಯ ಕರ್ಫ್ಯೂ ವಿಧಿಸಲಾಗಿದ್ದು, ಶನಿವಾರ ಮಧ್ಯಾಹ್ನದವರೆಗೆ ಸಹಜ ಸ್ಥಿತಿಯಲ್ಲಿದ್ದು,  2 ಗಂಟೆಯ ಬಳಿಕ ಕುಂದಾಪುರದ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸಂಪೂರ್ಣ ಬಂದ್‌ ಆಗಿತ್ತು.

Advertisement

ಈ ವೇಳೆ  ಮಧ್ಯಾಹ್ನ 2 ಗಂಟೆಯವರೆಗೆ ಆವಶ್ಯಕ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಕುಂದಾಪುರದ ಎಲ್ಲೆಡೆಗಳಲ್ಲಿ ಬೆಳಗ್ಗೆ ತರಕಾರಿ, ಹಣ್ಣು, ಮೀನು, ಮಾಂಸ, ದಿನಸಿ ಅಂಗಡಿ ಮಳಿಗೆಗಳು ತೆರೆದಿದ್ದವು. ಮಧ್ಯಾಹ್ನದ ಬಳಿಕ ಮೆಡಿಕಲ್‌, ಬ್ಯಾಂಕ್‌, ಸಹಕಾರಿ ಸಂಸ್ಥೆಗಳು ಹೊರತುಪಡಿಸಿ, ಬಹುತೇಕ ಎಲ್ಲ ಮಳಿಗೆಗಳು ಮುಚ್ಚಿದ್ದವು. ಇನ್ನು ವಾರಾಂತ್ಯ ಕರ್ಫ್ಯೂ ಮಾರ್ಗಸೂಚಿ ಗೊಂದಲಗಳಿಂದಾಗಿ ಕೆಲವೆಡೆಗಳಲ್ಲಿ ಚಪ್ಪಲಿ, ಬಟ್ಟೆ, ಸೆಲೂನ್‌ಗಳು ತೆರೆದಿದ್ದು, ಆದರೆ ಬಳಿಕ ಪೊಲೀಸರು ಭೇಟಿ ನೀಡಿ ಅವುಗಳನ್ನು ಮುಚ್ಚಿಸಿದ ಪ್ರಸಂಗ ಸಹ ನಡೆಯಿತು.

ಬಸ್‌ ಓಡಾಟ ವಿರಳ:

ಬೆಳಗ್ಗೆ ಜನರ ಓಡಾಟ ಇದ್ದ ಕಾರಣ ಖಾಸಗಿ ಮತ್ತು ಕೆಎಸ್ಸಾರ್ಟಿಸಿ ಬಸ್‌ಗಳೂ ಕಾರ್ಯಾಚರಣೆ ನಡೆಸಿದ್ದವು. ಆದರೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಮಾತ್ರ ಕಡಿಮೆಯಿತ್ತು. ಮಧ್ಯಾಹ್ನದ ಬಳಿಕ ಜನರ ಓಡಾಟ ಕಡಿಮೆ ಇದ್ದ ಕಾರಣ ಬಹುತೇಕ ಬಸ್‌ಗಳು  ಸಂಚಾರ ಸ್ಥಗಿತಗೊಳಿಸಿದ್ದವು. ಇತರ ವಾಹನಗಳೂ ಕಡಿಮೆ ಇತ್ತು.

ಗ್ರಾಮೀಣ ಪ್ರದೇಶದಲ್ಲೂ  ಬಂದ್‌ :

Advertisement

ಕುಂದಾಪುರದ ನಗರ ಭಾಗ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶಗಳಾದ ಹಾಲಾಡಿ, ಗೋಳಿಯಂಗಡಿ, ಹೆಮ್ಮಾಡಿ, ಶಂಕರನಾರಾಯಣ, ಸಿದ್ದಾಪುರ, ಹೊಸಂಗಡಿ, ನೇರಳಕಟ್ಟೆ, ವಂಡ್ಸೆ, ಬಸೂÅರು, ಕೋಟೇಶ್ವರ, ತೆಕ್ಕಟ್ಟೆ ಗಂಗೊಳ್ಳಿ, ತಲ್ಲೂರು, ಉಪ್ಪುಂದ, ಬೈಂದೂರು ಸೇರಿದಂತೆ ಬಹುತೇಕ ಎಲ್ಲ ಕಡೆಗಳಲ್ಲಿ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಹಜ ಸ್ಥಿತಿಯಲ್ಲಿದ್ದರೆ, ಆ ಬಳಿಕ ವ್ಯಾಪಾರ- ವಹಿವಾಟು ಸಂಪೂರ್ಣ ಬಂದ್‌ ಆಗಿತ್ತು.

ಕೋಟೇಶ್ವರ: ಉತ್ತಮ ಪ್ರತಿಕ್ರಿಯೆ :

ಕೋಟೇಶ್ವರ: ಕೋಟೇಶ್ವರ, ಬೀಜಾಡಿ, ಗೋಪಾಡಿ, ವಕ್ವಾಡಿ, ಕಾಳಾವರ ಮುಂತಾದೆಡೆ ಮಧ್ಯಾಹ್ನದ ಅನಂತರ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್‌  ಆಗಿದ್ದು, ವಾಹನ ಹಾಗೂ ಜನಸಂಚಾರವಿಲ್ಲದೇ ಪೇಟೆ ಬಿಕೋ  ಎನ್ನುತ್ತಿತ್ತು.   ಗ್ರಾಮೀಣ ಪ್ರದೇಶದ ಹಲವು ಮಂದಿ  ಈ ಬಗ್ಗೆ  ಮಾಹಿತಿ ಇಲ್ಲದೆ ಪೇಟೆಗೆ ಬಂದು ಹಿಂದಿರುಗಬೇಕಾಯಿತು. ಬಿಗಿ ಪೊಲೀಸ್‌  ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವಾರಾಂತ್ಯ ಕರ್ಫ್ಯೂಗೆ ವಿರೋಧ :

ಜಿಲ್ಲೆಯಲ್ಲಿ ಈಗಿನ ಪಾಸಿಟಿವಿಟಿ ಪ್ರಮಾಣ 14 ದಿನಗಳಲ್ಲಿ ಶೇ. 1.54 ಮತ್ತು ಏಳು ದಿನಗಳಲ್ಲಿ ಶೇ. 1.27ಕ್ಕೆ ಇಳಿದಿದೆ. ಶೇ. 2 ಕ್ಕಿಂತ ಕಡಿಮೆ ಪಾಸಿಟಿವಿಟಿ ಪ್ರಮಾಣ ಇದ್ದರೂ, ವಾರಾಂತ್ಯ ಕರ್ಫ್ಯೂ ನೆಪದಲ್ಲಿ ವರ್ತಕರು, ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿಯಲ್ಲ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾದರೆ, ಕೆಲವು ಅಗತ್ಯ ವಸ್ತುಗಳ ಮಾರಾಟಕ್ಕೆ ವಿನಾಯಿತಿ ಇರುವಂತೆ ಟೆಕ್ಸ್‌ಟೈಲ್ಸ್‌, ಫ‌ೂಟ್‌ವೇರ್‌, ಫ್ಯಾನ್ಸಿ, ಬ್ಯಾಗ್‌ ಅಂಗಡಿ ತೆರೆಯಲು ಅವಕಾಶ ನೀಡಬೇಕು. ಕೋವಿಡ್‌ ನಿಯಮ ಪಾಲಿಸಿಕೊಂಡು ಅಂಗಡಿ ತೆರೆಯಲು ಅವಕಾಶ ನೀಡಬೇಕು. ಅನೇಕ ಮಂದಿ ವರ್ತಕರು ದಿನನಿತ್ಯದ ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ ಎನ್ನುವುದು ವ್ಯಾಪಾರಸ್ಥರ ಅಭಿಪ್ರಾಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next