ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಮೂಲದ ಜೈಶ್ ಉಗ್ರಗಾಮಿ ಸಂಘಟನೆ ದಾಳಿ ನಡೆಸಿದ ನಂತರ ಮಹತ್ವದ ಕಾರ್ಯಾಚರಣೆಯಲ್ಲಿ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಶುಕ್ರವಾರ ಜೈಶ್ ಉಗ್ರಗಾಮಿ ಸಂಘಟನೆಯ ಇಬ್ಬರನ್ನು ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಬಂಧಿತರಿಂದ ಎರಡು ಶಸ್ತ್ರಾಸ್ತ್ರ ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ಡಿಜಿಪಿ ಓಪಿ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ. ಜೈಶ್ ಉಗ್ರರನ್ನು ಕುಲ್ಗಾಮ್ ನ ಶಹನವಾಝ್ ಅಹಮ್ಮದ್ ಹಾಗೂ ಪುಲ್ವಾಮಾದ ಅಖಿಬ್ ಅಹ್ಮದ್ ಮಲಿಕ್ ಎಂದು ಗುರುತಿಸಲಾಗಿದೆ.
ಜೈಶ್ ಎ ಮೊಹಮ್ಮದ್ ಸಂಘಟನೆಯಲ್ಲಿ ಸಕ್ರಿಯ ಸದಸ್ಯನಾಗಿರುವ ಶಹನವಾಜ್ ಅಹ್ಮದ್ ಟೆಲಿ ಹಾಗೂ ಮತ್ತೊಬ್ಬ ಸಹ್ರಾನ್ ಪುರ್ ದಿಯೊಬಂದ್ ಸದಸ್ಯ ಎಂದು ಹೇಳಲಾಗಿದೆ. ಏತನ್ಮಧ್ಯೆ ಜೆಇಎಂನ ಬಂಧಿತ ಸದಸ್ಯರು ಪುಲ್ವಾಮಾ ದಾಳಿಗೂ ಮುನ್ನವೇ ಉತ್ತರಪ್ರದೇಶಕ್ಕೆ ಬಂದಿದ್ದಾರೋ ಅಥವಾ ನಂತರವೋ ಎಂಬುದನ್ನು ಖಚಿತಪಡಿಸುವುದು ಕಷ್ಟ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಶಹನವಾಝ್ ಗ್ರೆನೇಡ್ ಎಕ್ಸ್ ಫರ್ಟ್ ಎಂದು ಹೇಳಲಾಗಿದೆ. ಬಂಧಿತ ಇಬ್ಬರು ಕಾಶ್ಮೀರದಿಂದ ಬಂದಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಜಮ್ಮು-ಕಾಶ್ಮೀರ ಪೊಲೀಸರ ಜತೆ ನಿರಂತರ ಸಂಪರ್ಕದಲ್ಲಿ ಇದ್ದಿರುವುದಾಗಿ ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.