ಮುಜಾಫರ್ ನಗರ್: ವಿವಿಧ ಕಾರಣಗಳಿಂದ ಮದುವೆ ನಿಂತು ಹೋಗುವ ಘಟನೆ ಬಹುತೇಕ ಎಲ್ಲಡೆ ನಡೆಯುತ್ತಿರುತ್ತದೆ. ಆದರೆ ಇದು ಅವೆಲ್ಲಕ್ಕಿಂತ ಭಿನ್ನವಾದದ್ದು. ಊಟೋಪಚಾರದ ಮೆನುವಿನಲ್ಲಿ ವಧುವಿನ ಕುಟುಂಬದವರು ಗೋ ಮಾಂಸ ಕೈಬಿಟ್ಟಿರುವುದರಿಂದ ಆಕ್ರೋಶ ವ್ಯಕ್ತಪಡಿಸಿ ವರನ ಕಡೆಯವರು ಮದುವೆಯನ್ನೇ ರದ್ದು ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಏನಿದು ಬೀಫ್ ವಿವಾದ:
ವರದಿಯ ಪ್ರಕಾರ, ಉತ್ತರಪ್ರದೇಶ ಮುಜಾಫರ್ ನಗರದ ದರಿಯಾಗಢ್ ಗ್ರಾಮದ ವರನ ಪೋಷಕರು ಮದುವೆ ಸಮಾರಂಭದಲ್ಲಿ ಅತಿಥಿಗಳಿಗೆ ಗೋ ಮಾಂಸವನ್ನು ಬಡಿಸಬೇಕೆಂದು ವಧುವಿನ ಕುಟುಂಬದವರ ಬಳಿ ಬೇಡಿಕೆ ಇಟ್ಟಿದ್ದರು. ಒಂದೋ ನೀವು ನಮ್ಮ ಅತಿಥಿಗಳಿಗೆ ಗೋ ಮಾಂಸವನ್ನು ಬಡಿಸಲು ತಯಾರಿ ನಡೆಸಬೇಕು ಇಲ್ಲವೇ ಮದುವೆ ರದ್ದು ಮಾಡಲು ತಯಾರಾಗಿ ಎಂದು ವರನ ಪೋಷಕರು ಷರತ್ತು ಹಾಕಿರುವುದಾಗಿ ವರದಿ ವಿವರಿಸಿದೆ.
ಅಷ್ಟೇ ಅಲ್ಲ ವರನ ಕಡೆಯವರು ಮದುವೆ ಊಟೋಪಚಾರದಲ್ಲಿ ಗೋ ಮಾಂಸ ಬಡಿಸಬೇಕು ಹಾಗೂ ವರದಕ್ಷಿಣೆಯಾಗಿ ಕಾರನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ ನಾವು ವರನ ಕಡೆಯವರ ಎರಡೂ ಬೇಡಿಕೆಯನ್ನು ನಿರಾಕರಿಸಿದೆವು. ಇದರಿಂದಾಗಿ ವರನ ಕುಟುಂಬದವರು ಮದುವೆಯನ್ನು ರದ್ದು ಮಾಡಿದ್ದಾರೆ. ರಾಜ್ಯದಲ್ಲಿ ಸರ್ಕಾರ ಗೋ ಮಾಂಸ ಸೇವನೆಗೆ ನಿಷೇಧವಿದೆ. ಹಾಗಿದ್ದ ಮೇಲೆ ನಾವು ಹೇಗೆ ಗೋ ಮಾಂಸ ಮಾಡಲು ಸಾಧ್ಯ ಎಂದು ವಧುವಿನ ತಾಯಿ ಎಎನ್ಐ ಸುದ್ದಿ ಸಂಸ್ಥೆ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಗೋ ಮಾಂಸದ ವಿಚಾರ ಮುಂದಿಟ್ಟು ಮದುವೆ ಮುರಿದ ವರನ ಸಂಬಂಧಿಕರ ವಿರುದ್ಧ ಪಟ್ವಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ವರದಿ ವಿವರಿಸಿದೆ.