Advertisement

ಮಲೆನಾಡಿನ ಬೆಳವಣಿಗೆ ಪ್ರಕ್ರಿಯೆ ವಿಭಿನ್ನ: ಡಾ|ಮನು

12:59 PM Jul 17, 2021 | Suhan S |

ಸಾಗರ: ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಉಳಿದ ಕಡೆಗಳಲ್ಲಿ ಕಂಡುಬರುವ ಚಾಲಕ ಶಕ್ತಿಗಳು ಮಲೆನಾಡಿನಲ್ಲಿ ಕಂಡುಬರುವುದಿಲ್ಲ. ಮಲೆನಾಡಿನ ನಿರ್ದಿಷ್ಟ ಭೌಗೋಳಿಕ ಸಂರಚನೆಯಿಂದಾಗಿ ಬೆಳವಣಿಗೆ ಪ್ರಕ್ರಿಯೆಗಳು ವಿಭಿನ್ನವಾಗಿವೆ ಎಂದು ಹಿಮಾಚಲ ಪ್ರದೇಶದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಇತಿಹಾಸ ಸಹಾಯಕ ಪ್ರಾಧ್ಯಾಪಕ ಡಾ|ಮನು ವಿ. ದೇವದೇವನ್‌ ಹೇಳಿದರು.

Advertisement

ತಾಲೂಕಿನ ನೀನಾಸಂ ಸಂಸ್ಥೆ ಆಶ್ರಯದಲ್ಲಿ ಕೆ.ವಿ.ಸುಬ್ಬಣ್ಣ ಸ್ಮರಣೆ ಅಂಗವಾಗಿ ವೆಬಿನಾರ್‌ ಮೂಲಕ ಶುಕ್ರವಾರ ಆಯೋಜಿಸಿದ್ದ ಉಪನ್ಯಾಸನ ಕಾರ್ಯಕ್ರಮದಲ್ಲಿ “ಮಲೆನಾಡಿನ ಇತಿಹಾಸದ ಚಾಲಕ ಶಕ್ತಿಗಳು’ ಎಂಬ ವಿಷಯದ ಕುರಿತು ಅವರು ಮಾತನಾಡಿ, ಪಶ್ಚಿಮ ಘಟ್ಟದ ಭೂವಿನ್ಯಾಸ ವಿಶೇಷವಾಗಿದೆ.

ಶಿಲಾಯುಗದ ಕಾಲದಿಂದ ಮಲೆನಾಡು ಭಾಗದಲ್ಲಿ ಮಾನವ ಚಟುವಟಿಕೆಗಳು ಕಂಡುಬರುತ್ತವೆ. ಪ್ರಕೃತಿ ಅನುವು ಮಾಡಿಕೊಟ್ಟ ಸಂಪರ್ಕ ಸಾಧ್ಯತೆಗಳು ಬೆಳವಣಿಗೆಯ ಚಾಲಕ ಶಕ್ತಿಯಾಗಿ ಕೆಲಸ ಮಾಡಿವೆ ಎಂದರು.

ಶಾತವಾಹನರ ಕಾಲದ ರಾಣಿ ನಾಗನಿಕೆ ಅವಧಿಯಲ್ಲಿ ಕೃಷಿ ಚಟುವಟಿಕೆಯ ಆಕರಗಳು ಲಭ್ಯ. ಆನಂತರದ ಆರ್ಥಿಕ ವ್ಯವಸ್ಥೆಯ ಚಾಲಕ ಶಕ್ತಿ ಅಲ್ಪ ಪ್ರಮಾಣದಲ್ಲಿ ಮಲೆನಾಡು ಭಾಗದ ಕೃಷಿ ವಿಸ್ತರಣೆಗೆ ಕಾರಣವಾಗಿದೆ. ಆದ್ದರಿಂದ ಧಾನ್ಯೋತ್ಪಾದನೆಯ ದೃಷ್ಟಿಯಿಂದ ಕೃಷಿ ವಿಸ್ತರಣೆಯಾದುದನ್ನು ಚಾಲಕ ಶಕ್ತಿಯ 2ನೆಯ ಹಂತ ಎಂದು ಗುರುತಿಸಬಹುದಾಗಿದೆ.

ಆನಂತರದ 11-12ನೆಯ ಶತಮಾನದ ಕಾಲಘಟ್ಟದಲ್ಲಿ ಅರ್ಥವ್ಯವಸ್ಥೆಯಲ್ಲಿ ಹಣದ ಬಳಕೆಯಿಂದಾಗಿ ಭತ್ತ ಬೆಳೆಯುತ್ತಿದ್ದ ಕೃಷಿ ಭೂಮಿಯಲ್ಲಿ ನಾಣ್ಯ ಬೆಳೆಗಳಾದ ತೆಂಗಿನಕಾಯಿ, ಅಡಕೆ ಮುಂತಾದವುಗಳನ್ನು ಬೆಳೆಯುವ ಕಾರ್ಯ ಹೆಚ್ಚಾಗುತ್ತದೆ. 16-17ನೆಯ ಶತಮಾನದ ಸಮಯದಲ್ಲಿ ನಾಣ್ಯ ಬೆಳೆಗಳ ಉತ್ಪಾದನೆ ನಿರ್ಣಾಯಕ ಪಾತ್ರ ವಹಿಸಿ ಆರ್ಥಿಕ ಚಟುವಟಿಕೆಯಾಗಿ ವಿಕಾಸವಾಗಿರುವುದನ್ನು ಗಮನಿಸಬಹುದಾಗಿದೆ. ಹೆಚ್ಚಿನ ಆದಾಯ ಹಾಗೂ

Advertisement

ಕಡಿಮೆ ದುಡಿಮೆಯ ಸಮನ್ವಯದಿಂದ ನಾಣ್ಯ ಬೆಳೆಗಳ ವ್ಯವಸ್ಥೆ ವ್ಯಾಪಕವಾಗಲು ಆರಂಭವಾದುದನ್ನು ಗಮನಿಸಬಹುದು. 18ನೇ ಶತಮಾನದಲ್ಲಿ ಭೂ ಮಾಲೀಕರ ಹಸ್ತಾಂತರದ ದೊಡ್ಡ ಪ್ರಕ್ರಿಯೆ ನಡೆದಿರುವುದನ್ನು ಗಮನಿಸಬಹುದು. ಕೃಷಿ ಕಾರ್ಯ, ಅರಣ್ಯ ಬೆಳೆ, ನಾಣ್ಯ ಬೆಳೆ ಅರ್ಥ ವ್ಯವಸ್ಥೆಯ ಮಹತ್ವದ ನಿರ್ಣಾಯಕ ಹಂತವಾಗಿ ಇತಿಹಾಸ ಕಾಲದಿಂದ ವರ್ತಮಾನದವರೆಗೆ ಪಾತ್ರ ವಹಿಸುತ್ತಿರುವುದನ್ನು ಗಮನಿಸಬಹುದಾಗಿದೆ ಎಂದರು.

ಡಾ| ಎಲ್‌.ಸಿ. ಸುಮಿತ್ರ,ಡಾ| ರಾಜಾರಾಮ ಹೆಗಡೆ ಮತ್ತು ಶಿವಾನಂದ ಕಳವೆ ಕಿರು ಪ್ರತಿಸ್ಪಂದನೆ ನೀಡಿ ಮಾತನಾಡಿದರು. ಕೆ.ವಿ. ಅಕ್ಷರ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next