ಬೆಂಗಳೂರು: ರಾಜ್ಯದಲ್ಲಿ ಕೌಶಲ್ಯ ತರಬೇತಿಗೆ ಅನುಕೂಲವಾಗುವಂತೆ ಮಾಹಿತಿ ಕ್ರೋಢೀಕರಣ ಮತ್ತು ನೋಂದಣಿ ಕಾರ್ಯಕ್ಕಾಗಿ ವೆಬ್ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮೇ 15ರ ಸೋಮವಾರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಈ ವೆಬ್ ಪೋರ್ಟಲ್‌ಗೆ ಚಾಲನೆ ನೀಡಿ ಸಾರ್ವಜನಿಕ ಸೇವೆಗೆ ಸಮರ್ಪಿಸಲಿದ್ದಾರೆ. ಇದೇ ವೇಳೆ ಪ್ರತಿ ತಾಲೂಕು ಕೇಂದ್ರದಲ್ಲಿ ಸ್ಥಳೀಯ ಶಾಸಕರು ವೆಬ್ ಪೋರ್ಟಲ್ ಉದ್ಘಾಟಿಸಲಿದ್ದು, ಅರ್ಜಿ ಸಂಗ್ರಹಣೆ ಅಭಿಯಾನಕ್ಕೂ ಚಾಲನೆ ನೀಡಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಮಾರ್ಚ್‌ನಲ್ಲಿ ಮಂಡಿಸಿದ್ದ 2017-18ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿ ಕರ್ನಾಟಕ ಕಾರ್ಯಕ್ರಮ ಘೋಷಿಸಿದ್ದು, ಇದರ ಅಡಿ ಬೇಡಿಕೆ ಸಮೀಕ್ಷೆ ಆಧರಿಸಿ ಪ್ರಸ್ತುತ ಜಾರಿಯಲ್ಲಿರುವ ವಿವಿಧ ಯೋಜನೆಗಳಡಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಮೂಲಕ ಐದು ಲಕ್ಷ ಯುವಜನರಿಗೆ ತರಬೇತಿ ನೀಡಲಾಗುವುದು ಎಂದು ಪ್ರಕಟಿಸಿದ್ದರು.
ಇದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಅಭ್ಯರ್ಥಿಗಳ ಕೋರಿಕೆ ಮತ್ತು ಮಾರುಕಟ್ಟೆಯ ಬೇಡಿಕೆ ಆಧರಿಸಿ ತರಬೇತಿ ಕಾರ್ಯಕ್ರಮ ರೂಪಿಸಬೇಕಾಗುತ್ತದೆ. ಅದಕ್ಕಾಗಿ ಅಭ್ಯರ್ಥಿಗಳು, ತರಬೇತಿ ಸಂಸ್ಥೆಗಳು ಮತ್ತು ಉದ್ಯೋಗದಾತ ಸಂಸ್ಥೆಗಳ ಮಾಹಿತಿ ಸಂಗ್ರಹಿಸಿ ಕ್ರೋಢೀಕರಿಸಲು ಮತ್ತು ನೋಂದಣಿ ಕಾರ್ಯಕ್ಕಾಗಿ ವೆಬ್ ಪೋರ್ಟಲ್ ಆರಂಭಿಸಲಾಗುತ್ತಿದೆ. ಉದ್ಯೋಗ ಮಾರುಕಟ್ಟೆಗೆ ಬೇಕಾದ ಅಗತ್ಯ ನೈಪುಣ್ಯಗಳಲ್ಲಿ ತರಬೇತಿ ಪಡೆಯಲು ಇಚ್ಛಿಸುವ ಯುವ ಜನರಿಗೆ ತಮ್ಮ ಹೆಸರು ನೋಂದಾಯಿಸಲು ಮತ್ತು ಕೌಶಲ್ಯ ನೈಪುಣ್ಯತೆ ವೃದ್ಧಿಸಿಕೊಳ್ಳಲು ಇದರಲ್ಲಿ ಅವಕಾಶವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದಲ್ಲದೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಬಳಕೆದಾರರ ಸ್ನೇಹಿ ಮೊಬೈಲ್ ಆ್ಯಪ್ ಕೂಡ ಅಭಿವೃದ್ಧಿಗೊಳಿಸಿದೆ. ಆಸಕ್ತರು ವೆಬ್ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಮೂಲಕ ರಾಜ್ಯದ ವಿವಿಧ ಭಾಗಗಳಲ್ಲಿ ಕೌಶಲ್ಯ ತರಬೇತಿಗಾಗಿ ಮಾಹಿತಿ ಪಡೆಯಬಹುದು ಎಂದೂ ಅವರು ಹೇಳಿದ್ದಾರೆ.