Advertisement

ನಿಮ್ಮ ಹಕ್ಕೊತ್ತಾಯಗಳನ್ನು CM ಗಮನಕ್ಕೆ ತರುವೆ: ನೇಕಾರರಿಗೆ ಎಚ್.ಕೆ.ಪಾಟೀಲ ಭರವಸೆ

06:34 PM Dec 10, 2023 | Team Udayavani |

ರಬಕವಿ-ಬನಹಟ್ಟಿ: ರಾಜ್ಯದ ನೇಕಾರರ ಹಕ್ಕೊತ್ತಾಯಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದರ ಜೊತೆಗೆ ಶೀಘ್ರದಲ್ಲಿಯೇ ನೇಕಾರರ ಮುಖಂಡರೊಂದಿಗೆ ಸಭೆಗೆ ಅವಕಾಶವನ್ನು ಮಾಡಿಕೊಡುವುದರ ಮೂಲಕ ನೇಕಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಇದೇ ತಿಂಗಳಲ್ಲಿ ನೇಕಾರರ ಸಭೆಯನ್ನು ಕೂಡಾ ನಡೆಸಲಾಗುವುದು ಸಚಿವ ಎಚ್.ಕೆ.ಪಾಟೀಲ ನೇಕಾರರಿಗೆ ಭರವಸೆ ನೀಡಿದ ಹಿನ್ನಲೆಯಲ್ಲಿ ಹೋರಾಟ ಹಿಂಪಡೆಯಲಾಗಿದೆ ಇದಕ್ಕೆ ಮತ್ತೇ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.

Advertisement

ಭಾನುವಾರ ಬನಹಟ್ಟಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ತಿಂಗಳವರೆಗೆ ನೇಕಾರರ ಬಾಕಿ ಬಿಲ್ ಪಾವತಿಸುವ ಬಗ್ಗೆ ನೇಕಾರರನ್ನು ಒತ್ತಾಯಿಸಬಾರದು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸಚಿವ ಎಚ್.ಕೆ.ಪಾಟೀಲ ಸೂಚನೆ ನೀಡಿದರು ಎಂದು ಟಿರಕಿ ತಿಳಿಸಿದರು.

ಈಗಾಗಲೇ ವೃತ್ತಿ ಪರ ನೇಕಾರರಿಗೆ ಉಚಿತ ವಿದ್ಯುತ್ ಜಾರಿಯಾಗಿದ್ದು, ಆದರೆ 10 ರಿಂದ 20 ಎಚ್.ಪಿಯವರೆಗಿನ ಆದೇಶ ಅವೈಜ್ಞಾನಿಕವಾಗಿದೆ. ಅದನ್ನು ಕೂಡಲೇ ತಿದ್ದುಪಡೆ ಮಾಡಬೇಕು. 500 ಯುನಿಟ್ ವರೆಗೆ ಉಚಿತ ವಿದ್ಯುತ್, ನಂತರದ ಹೆಚ್ಚುವರಿ ಯುನಿಟಗಳಿಗೆ ರೂ. 1.25 ರಷ್ಟು ಮಾತ್ರ ವಿಧಿಸಬೇಕು ಹಾಗೂ ಯಾವುದೆ ರೀತಿ ಶುಲ್ಕ ವಿಧಿಸದೆ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದರೆ ನಮಗೆ ಉದ್ಯೋಗ ಮುಂದುವರೆಸಲು ತೊಂದರೆಯಾಗುತ್ತದೆ.

ಕಟ್ಟಡ ಕಾರ್ಮಿಕರಿಗೆ ನೀಡುವ ಸೌಲಭ್ಯಗಳನ್ನು ಕೂಡಾ ವೃತ್ತಿಪರ ನೇಕಾರರಿಗೆ ನೀಡಬೇಕು. ನೇಕಾರರ ಸಂಪೂರ್ಣ ಸಾಲ ಮನ್ನಾ ಮತ್ತು ಐದಾರು ತಿಂಗಳಿಂದ ಬಾಕಿ ಇರುವ ನೇಕಾರರ ಬಿಲ್ ನ್ನು ಸರ್ಕಾರವೇ ಭರಿಸಬೇಕು ಎಂದು ಶಿವಲಿಂಗ ಟಿರಕಿ ಸಚಿವರನ್ನು ಆಗ್ರಹಿಸಿದರು.

ಶಾಸಕ ಸಿದ್ದು ಸವದಿ ಕೂಡಾ ನೇಕಾರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು ಎಂದು ಟಿರಕಿ ಪತ್ರಿಕೆಗೆ ತಿಳಿಸಿದರು.

Advertisement

ರಾಜೇಂದ್ರ ಮಿರ್ಜಿ, ಸಂಗಪ್ಪ ಹಳ್ಳೂರ,ಅರ್ಜುನ ಕುಂಬಾರ, ಮಲ್ಲಪ್ಪ ಮಿರ್ಜಿ, ಸಂಗಪ್ಪ ಉದಗಟ್ಟಿ, ಜಬ್ಬಾರ ಶೇಖ, ಗುರುಪಾದ ಅಮ್ಮಣಗಿ, ಸದಾಶಿವ ಖಟಾವಕರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next