Advertisement

ಹವಾಮಾನ ವೈಪರೀತ್ಯ; ಮಾವು ಬೆಳೆಗಾರ ತತ್ತರ

01:52 PM Apr 08, 2019 | pallavi |
ಹಾವೇರಿ: ಇತ್ತೀಚೆಗೆ ನಿರಂತರವಾಗಿ ಬೀಸುತ್ತಿರುವ ಗಾಳಿ, ಒಮ್ಮೆ ಸುರಿದ ಭಾರಿ ಪ್ರಮಾಣದ ಆಲಿಕಲ್ಲು ಮಳೆ ಜಿಲ್ಲೆಯ ಮಾವು ಬೆಳೆ ಮೇಲೆ ಭಾರಿ ದುಷ್ಪರಿಣಾಮ ಬೀರಿದೆ.
ಮಳೆ ಕೊರತೆ, ವಿಪರೀತ ಬಿಸಿಲು, ರೋಗ ಬಾಧೆ, ಇಳುವರಿ ಕುಂಠಿತ, ಇದರ ನಡುವೆ ಗಾಳಿ, ಅಕಾಲಿಕ ಮಳೆ… ಹೀಗೆ ಹಲವು ಕಾರಣಗಳಿಂದ ಮಾವು ಇಳುವರಿ ಕಡಿಮೆಯಾಗುತ್ತಿದ್ದು, ಹವಾಮಾನ ವೈಪರೀತ್ಯದಿಂದ ಶೇ. 25ರಷ್ಟು ಮಾವು ಬೆಳೆ ಇಳುವರಿ ಕುಸಿತವಾಗುವ ಸಾಧ್ಯತೆ ಇದೆ. ಅಕಾಲಿಕ ಮಳೆ, ಗಾಳಿ ಮಾವು ಬೆಳೆಗಾರರ ನಿದ್ದೆಗೆಡಿಸಿದೆ.
ಮಾವಿನ ಮರಗಳಲ್ಲಿನ ಹೂವು, ಸಣ್ಣ ಕಾಯಿ ಬಿಡಲಾರಂಭಿಸಿರುವ ಈ ಸಂದರ್ಭದಲ್ಲಿ ಮಳೆ ಹಾಗೂ ಗಾಳಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಬರ, ಬೇಸಿಗೆ ಸಂದರ್ಭದಲ್ಲಿ ಮಾವಿನ ಮರಗಳು ನೀರಿನ ಕೊರತೆಯಿಂದ ಒಣಗಿ ಹೋಗಿದ್ದವು. ಇದರ ಮಧ್ಯೆಯೂ ಈ ವರ್ಷ ರೈತರು ಒಂದಿಷ್ಟು ಮಾವು ಬೆಳೆ ಉಳಿಸಿಕೊಂಡಿದ್ದರು. ಅಕಾಲಿಕ ಮಳೆ, ನಿರಂತರ ಗಾಳಿಗೆ ಅದೂ ಕೂಡ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಮಾವು ಕ್ಷೇತ್ರ: ಜಿಲ್ಲೆಯಲ್ಲಿ 6000 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಹಾನಗಲ್ಲ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 3000 ಹೆಕ್ಟೇರ್‌, ಶಿಗ್ಗಾವಿ 1500 ಹೆಕ್ಟೇರ್‌, ಹಾವೇರಿ 1000 ಹೆಕ್ಟೇರ್‌, ರಾಣಿಬೆನ್ನೂರು, ಹಿರೇಕೆರೂರು, ಸವಣೂರ, ಬ್ಯಾಡಗಿ, ರಟ್ಟಿಹಳ್ಳಿ ತಾಲೂಕುಗಳು ಸೇರಿ 500 ಹೆಕ್ಟೇರ್‌ ಪ್ರದೇಶ ಮಾವು ಬೆಳೆಯಲಾಗುತ್ತಿದೆ. ಜಿಲ್ಲೆಯ ಹಾನಗಲ್ಲ ಮತ್ತು ಶಿಗ್ಗಾವಿ ತಾಲೂಕಿನಲ್ಲಿ ಅತೀ ಹೆಚ್ಚು ಮಾವು ಬೆಳೆಯಲಾಗಿದೆ.
ಕಳೆದ ವರ್ಷ ಮಾವು ಮಳೆಯ ಕೊರತೆಯ ನಡುವೆಯೂ ಉತ್ತಮ ಫಸಲು ಬಂದಿತ್ತು. ಈ ಬಾರಿ ಮಾವು ಅಕಾಲಿಕ ಮಳೆ, ಆಲಿಕಲ್ಲು ಮಳೆ, ಗಾಳಿ, ತೇವಾಂಶ ಹೆಚ್ಚಳ ರೋಗ ಬಾಧೆಯಿಂದ ಮಾವು ಬೆಳೆ ಕಡಿಮೆಯಾಗಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳೇ ತಿಳಿಸುತ್ತಾರೆ.
ರೈತರಿಗೆ ಕಳೆದ ವರ್ಷ ತೋಟಗಾರಿಕೆ ಬೆಳೆ ಬೆಳೆಯಲು ಉತ್ತೇಜನ ನೀಡುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಪ್ರತಿ ವರ್ಷ ಮಾವು ಮೇಳ ನಡೆಸುತ್ತಿದೆ. ವರದಾ ಗೋಲ್ಡ್‌ ಹೆಸರಲ್ಲಿ ನೇರವಾಗಿ ಮಾವು ಮಾರಾಟ ಮಾಡುವ ವ್ಯವಸ್ಥೆ ತೋಟಗಾರಿಕೆ ಇಲಾಖೆ ಮಾಡುತ್ತ ಬಂದಿದೆ. ಆದರೆ, ಈ ಬಾರಿ ಹವಾಮಾನ ವೈಪರೀತ್ಯ ಇಳುವರಿ ಮೇಲೆ ಭಾರಿ
ದುಷ್ಪರಿಣಾಮ ಬೀರಿದ್ದು, ಮೇಳದಲ್ಲಿ ಮಾವು ಕಡಿಮೆ ಪ್ರಮಾಣದಲ್ಲಿ ಬರುವ ಸಾಧ್ಯತೆ ಹೆಚ್ಚಾಗಿದೆ.
ನಿರಂತರ ಗಾಳಿ, ಆಗಾಗ ಸುರಿಯುವ ಆಲಿಕಲ್ಲು ಮಳೆಯಿಂದ ಮಾವಿನ ಮಿಡಿ ಕಾಯಿ, ಹೂವು ಉದುರುತ್ತಿವೆ. ಕೈಗೆ ಬಂದ
ತುತ್ತು ಬಾಯಿ ಬರದ ಸ್ಥಿತಿ ಬೆಳೆಗಾರರದ್ದಾಗಿದೆ. ಈ ಬಾರಿ ಮಾವು ಇಳುವರಿಯೂ ಕಡಿಮೆ ಇದ್ದು ಗಾಳಿ-ಮಳೆಯಿಂದ ಇನ್ನಷ್ಟು ಇಳುವರಿ ಕಡಿಮೆ ಆಗಲಿದೆ.
 ರಾಮಣ್ಣ, ರೈತ. 
ಈ ವರ್ಷ ಇಳುವರಿ ಕಡಿಮೆ ಇದೆ. ಅಕಾಲಿಕ ಮಳೆಯಿಂದ ಮಾವು ಬೆಳೆಗೆ ಹಾನಿಯಾಗುತ್ತದೆ. ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆ, ಗಾಳಿಯಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಹಾನಿ ಸಮೀಕ್ಷೆ ನಡೆಸಲಾಗುವುದು.
ಹಾನಿಯಾದ ರೈತರಿಗೆ ವಿಮೆ ಸಹ ದೊರಕಿಸಿಕೊಡಲಾಗುವುದು.
 ಸವಿತಾ, ಡಿ.ಡಿ. ತೋಟಗಾರಿಕೆ ಇಲಾಖೆ. 
Advertisement

Udayavani is now on Telegram. Click here to join our channel and stay updated with the latest news.

Next