ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಬಿಬಿಎಂಪಿಗೆ ನೀಡಿರುವ 116.10 ಕೋಟಿ ರೂ. ಅನುದಾನದಲ್ಲಿ ಅನುಷ್ಠಾನಗೊಳಿಸಬಹುದಾದ ಯೋಜನೆಗಳ ಕ್ರಿಯಾಯೋಜನೆ ಸಿದ್ಧಪಡಿಸಿ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿದೆ.
ಕೇಂದ್ರ ಸರ್ಕಾರ ರಾಷ್ಟ್ರೀಯ ಸ್ವತ್ಛ ವಾಯು ಯೋಜನೆ (ಎನ್‌ಸಿಎಪಿ) ಅಡಿಯಲ್ಲಿ ಬಿಬಿಎಂಪಿಗೆ ಪ್ರಸಕ್ತ ಸಾಲಿನಲ್ಲಿ 419 ಕೋಟಿ ರೂ. ಅನುದಾನ ನೀಡುತ್ತಿದೆ. ಅದರಂತೆ ಮೂರನೇ ಕಂತಿನಲ್ಲಿ 116.10 ಕೋಟಿ ರೂ. ಅನುದಾನ ನೀಡಲಾಗಿದ್ದು, ಅದರಲ್ಲಿ ಯಾವೆಲ್ಲ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂಬ ಬಗ್ಗೆ ಬಿಬಿಎಂಪಿ ಕ್ರಿಯಾ ಯೋಜನೆ ರೂಪಿಸಿದೆ.
ಒಟ್ಟು 8 ಯೋಜನೆಗಳನ್ನು ರೂಪಿಸಲಾಗಿದ್ದು, ಅದನ್ನು ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿದೆ. ಇದೀಗ ಪ್ರಸ್ತಾವನೆ ಮುಖ್ಯಮಂತ್ರಿಗಳ ಅನುಮೋದನೆಗೆ ಕಳುಹಿಸಲಾಗಿದ್ದು, ಅಲ್ಲಿ ಅನುಮೋದನೆ ದೊರೆತ ನಂತರ ಟೆಂಡರ್ ಪ್ರಕ್ರಿಯೆ ಸೇರಿ ಇನ್ನಿತರ ಕ್ರಮ ಕೈಗೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.
ಬಿಬಿಎಂಪಿ ರೂಪಿಸಿರುವ ಕ್ರಿಯಾ ಯೋಜನೆಯಂತೆ ಬಿಎಂಟಿಸಿಗೆ 100 ಎಲೆಕ್ಟ್ರಿಕ್ ವಾಹನ ಖರೀದಿಗೆಂದು 30 ಕೋಟಿ ರೂ. ನೀಡಲಾಗುತ್ತದೆ. ಉಳಿದ 86.10 ಕೋಟಿ ರೂ. ಹಣದಲ್ಲಿ ನಗರದ ವಾಯು ಗುಣಮಟ್ಟ ಹೆಚ್ಚಿಸುವ ಸಲುವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ 10 ಕೋಟಿ ರೂ. ವೆಚ್ಚದಲ್ಲಿ 25 ಪ್ರಮುಖ ಜಂಕ್ಷನ್‌ಗಳಲ್ಲಿ ಹಸಿರಿನ ಪ್ರಮಾಣ ಹೆಚ್ಚಿಸುವುದು, 10 ಕೋಟಿ ರೂ. ವೆಚ್ಚದಲ್ಲಿ ಹೊಸ ನರ್ಸರಿಗಳ ಸ್ಥಾಪನೆ, 15 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಉದ್ಯಾನಗಳ ನಿರ್ಮಾಣ ಮಾಡುವುದಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ.
ಹಾಗೆಯೇ, 12.75 ಕೋಟಿ ರೂ. ವೆಚ್ಚದಲ್ಲಿ 200 ಮೆಟ್ರಿಕ್ ಟನ್ ಸಾಮರ್ಥ್ಯದ ಘನತ್ಯಾಜ್ಯ ಟ್ರಾನ್ಸ್‌ಫರ್ ಸ್ಟೇಷನ್‌ಗಳ ನಿರ್ಮಾಣ, 11 ಕೋಟಿ ರೂ. ವೆಚ್ಚದಲ್ಲಿ ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಕ್ರಮ, 10 ಕೋಟಿ ರೂ. ವೆಚ್ಚದಲ್ಲಿ ಮುಖ್ಯ ರಸ್ತೆಗಳಲ್ಲಿನ ಪಾದಚಾರಿ ಮಾರ್ಗ ಅಭಿವೃದ್ಧಿ ಹಾಗೂ 7.35 ಕೋಟಿ ರೂ. ವೆಚ್ಚದಲ್ಲಿ ಸಣ್ಣ ಗಾತ್ರದ ಎಲೆಕ್ಟ್ರಿಕ್ ಸ್ವೀಪಿಂಗ್ ಯಂತ್ರ ಖರೀದಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ.