ಉಡುಪಿ: ಜಿಲ್ಲೆಯ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಾರರ ಹಿತಾಸಕ್ತಿಯ ದೃಷ್ಟಿಯಿಂದ ಜಾರಿಗೆ ತರಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಒಂದು ಉತ್ತಮ ಪರಿಹಾರ ಯೋಜನೆಯಾಗಿದೆ. ಅತೀ ಹೆಚ್ಚು ಅಥವಾ ಅತೀ ಕಡಿಮೆ ಮಳೆ ಸುರಿದು, ಫಸಲಿನಲ್ಲಾಗುವ ನಷ್ಟವನ್ನು ಭರಿಸಲು ರೈತರಿಗೆ ಈ ಯೋಜನೆ ಉತ್ತಮ ಕಾರ್ಯಕ್ರಮವಾಗಿದೆ ಎಂದು ಭಾ.ಕಿ.ಸಂ. ಅಭಿಪ್ರಾಯ ಪಟ್ಟಿದೆ.
ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್ ಅವರ ನೇತೃತ್ವದಲ್ಲಿ ಸೆ. 26ರಂದು ನಡೆದ ಜಿಲ್ಲಾ ಸಮಿತಿಯ ಮಾಸಿಕ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಅಡಿಕೆ ಕೊಳೆರೋಗದಿಂದ ನಷ್ಟವಾದ ರೈತರು ಅರ್ಜಿಯನ್ನು ತೋಟಗಾರಿಕಾ ಇಲಾಖೆ ಹಾಗೂ ಕಂದಾಯ ಇಲಾಖೆಯಲ್ಲಿ ನೀಡಬೇಕು. ಹಿಂದಿನ ವರ್ಷದ ಕೊಳೆರೋಗದ ಪರಿಹಾರದ ವಿತರಣೆಯ ಬಗ್ಗೆಯೂ ಸಂಘಟನೆ ವಿಚಾರ ವಿಮರ್ಶೆ ಮಾಡಿ ಇನ್ನೂ ಪರಿಹಾರ ಸಿಗದ ರೈತರಿಗೆ ಯಾವ ಕಾರಣಕ್ಕೆ ಪರಿಹಾರ ಲಭಿಸಿಲ್ಲ ಎಂಬುದರ ಬಗ್ಗೆ ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ. ರೈತರ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿರುವ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ಪಡಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ರೈತರಿಗೆ ಸಹಾಯಧನದ ಮೂಲಕ ನೀಡಲಾಗುವ ಗೋಬರ್‌ಗ್ಯಾಸ್ ಘಟಕಗಳ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಕೋಶಾಧಿಕಾರಿ ವಾಸುದೇವ ಶ್ಯಾನುಭಾಗ್, ಉಪಾಧ್ಯಕ್ಷ ಶ್ರೀನಿವಾಸ ಭಟ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ವಿ.ಪೂಜಾರಿ, ಸಮಿತಿಯ ಪ್ರಮುಖರಾದ ಸದಾನಂದ ಶೆಟ್ಟಿ, ಪಾಂಡುರಂಗ ಹೆಗ್ಡೆ, ಸುಂದರ ಶೆಟ್ಟಿ, ಆಸ್ತೀಕ ಶಾಸ್ತ್ರೀ, ಪದ್ಮನಾಭ ಶೆಟ್ಟಿ, ಸೀತಾರಾಮ ಗಾಣಿಗ, ವಿಶ್ವನಾಥ ಶೆಟ್ಟಿ, ಉಮಾನಾಥ ರಾನಡೆ, ಕೆ.ಪಿ ಭಂಡಾರಿ, ಪ್ರಾಣೇಶ ಯಡಿಯಾಳ, ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.