ಎಚ್.ಡಿ.ಕೋಟೆ: ಪೌರಕಾರ್ಮಿಕರು ಉತ್ತಮವಾಗಿ ಶ್ರಮಿಸಿ ಸ್ವತ್ಛತೆ ಕಾಪಾಡಿ ಪಟ್ಟಣದ ಅಂದ ಹೆಚ್ಚಿಸುವ ಜೊತೆಗೆ ಸ್ವತ್ಛತೆ ವೇಳೆ ಪ್ರತಿಯೊಬ್ಬರೂ ಆರೋಗ್ಯ ಸುರಕ್ಷಾ ಧಿರಿಸುಗಳನ್ನು ತೊಡಬೇಕೆಂದು ಪುರಸಭೆ ಮುಖ್ಯಾಧಿಕಾರಿ ಡಿ.ಎನ್.ವಿಜಯ್‌ಕುಮಾರ್ ಕಿವಿಮಾತು ಹೇಳಿದರು. ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪುರಸಭೆ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು.
ಯಾವುದೇ ಪಟ್ಟಣ ನಗರ ಸ್ವತ್ಛವಾಗಿ ಉತ್ತಮ ವಾತಾವರಣ ನಿರ್ಮಾಣವಾಗಲು ಪೌರಕಾರ್ಮಿಕರ ಪರಿಶ್ರಮವೇ ಕಾರಣ. ಆದರೆ ಸ್ವತ್ಛತಾ ವಿಭಾಗದಲ್ಲಿ ದುಡಿಯುವ ನೀವುಗಳು ಪುರಸಭೆಯಿಂದ ನೀಡಿರುವ ಯಾವುದೇ ಸುರಕ್ಷಾ ಧಿರಿಸುಗಳನ್ನು ಧರಿಸದೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ವರದಿಯಾಗಿದೆ. ಹೀಗಾಗಿ ಇನ್ನು ಮುಂದೆ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕೆಂದರು.
ಪುರಸಭೆ ಅಧ್ಯಕ್ಷೆ ಮಂಜುಳಾ, ಪ್ರತಿದಿನವೂ ಬೆಳ್ಳಂ ಬೆಳಗ್ಗೆಯೇ ಮನೆ ಬಿಟ್ಟು ಪಟ್ಟಣದ ಸ್ವತ್ಛತೆಗಾಗಿ ಸ್ಥಳೀಯ ಸಂಸ್ಥೆಯೊಂದಿಗೆ ಕೈಜೋಡಿಸಿ ಪುರಸಭೆ ವ್ಯಾಪ್ತಿಯಲ್ಲಿ ಶ್ರಮಿಸುತ್ತಿರುವ ಪೌರಕಾರ್ಮಿಕರ ದಿನಾಚರಣೆ ಹೆಮ್ಮೆಯ ವಿಷಯ ಎಂದರು. ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 9 ಜನ ಕಾಯಂ ಪೌರಕಾರ್ಮಿಕರಿಗೆ 3500 ಸಾವಿರ ರೂ ನೀಡಿ ಗೌರವಿಸಿದರೆ, ಇಬ್ಬರು ಹಿರಿಯ ಮತ್ತು ಓರ್ವ ಕಿರಿಯ ಪೌರಕಾರ್ಮಿಕರನ್ನು ಗೌರವಿಸಲಾಯಿತು.
ಒಬ್ಬಿಟ್ಟು ಊಟ ಸವಿದ ಪೌರಕಾರ್ಮಿಕರು: ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪುರಸಭೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಮತ್ತು ಕುಟುಂಬದ ಜನರಿಗೆ ಪುರಸಭೆ ಮುಖ್ಯಾಧಿಕಾರಿ ಡಿ.ಎನ್.ವಿಜಯ್‌ಕುಮಾರ್ ಮತ್ತು ಸಿಬ್ಬಂದಿ ಹೋಳಿಗೆ ಊಟ ಏರ್ಪಡಿಸಿದ್ದರು. ಹಾಲಿ ಸದಸ್ಯ ತೋಟದ ರಾಜಣ್ಣ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು. ಹಾಗೆಯೇ ಪುರಸಭೆ ಭಾಗಶಃ ಸದಸ್ಯರು ಬಾರದೆ ಗೈರಾಗಿದ್ದರು.
ಪುರಸಭೆಯ ರಮಾಮಣಿ, ಪ್ರಥಮ ದರ್ಜೆ ಗುಮಾಸ್ತ ಸಿದ್ದಯ್ಯ, ಉಪಾಧ್ಯಕ್ಷೆ ಸುಮಾ, ಅನ್ಸಾರ್ ಅಹಮದ್, ಎನ್.ಉಮಾಶಂಕರ್, ಅನಿಲ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಶ್ರೀರಂಗ, ಮುಖಂಡರಾದ ಗೋವಿಂದಚಾರಿ, ಗುರುಮಲ್ಲಣ್ಣ, ಪುರಸಭೆ ಅಧಿಕಾರಿಗಳಾದ ಸಿದ್ದಯ್ಯ, ವೀಣಾ, ರಘು, ಪರಿಸರ ಎಂಜಿನಿಯರ್ ಪುಷ್ಪ, ನರಸೀಪುರ ಪರಮೇಶ್, ಆರೋಗ್ಯ ನಿರೀಕ್ಷಕ ಹರೀಶ್ ಮತ್ತಿತರರಿದ್ದರು.