ಕುಂದಾಪುರ: ಎರಡು ವರ್ಷವಿದ್ದಾಗಲೇ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬೈಂದೂರು ತಾಲೂಕಿನ ಹೇರೂರು ಗ್ರಾಮದ ಯರುಕೋಣೆಯ ರವೀಂದ್ರ ಪೂಜಾರಿ ಹಾಗೂ ಸುಶೀಲಾ ದಂಪತಿಯ ಪುತ್ರ, 6 ವರ್ಷದ ವಂಶಿಕ್‌ನ ಚಿಕಿತ್ಸೆಗಾಗಿ ಹೆಚ್ಚಿನ ಹಣದ ಆವಶ್ಯಕತೆಯಿದ್ದು, ಅದಕ್ಕಾಗಿ ಶನಿವಾರ ಕುಂದಾಪುರದ ವಾರದ ಸಂತೆಯಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ ಬೆಂಕಿ ಮಣಿ ಸಂತು ಅರೆಹೊಳೆ ಅವರು ಮಾರಣಕಟ್ಟೆ ಕ್ಷೇತ್ರ ಮಹಾತ್ಮೆಯಲ್ಲಿ ಬರುವ “ಮೈಧಾವಿನಿ’ ಎನ್ನುವ ವೇಷ ಧರಿಸಿ, ಹಣ ಸಂಗ್ರಹಿಸಿದರು.
ಬೆಂಕಿ ಮಣಿ ಸಂತು ಹಾಗೂ ಅವರೊಂದಿಗೆ ವಂಶಿಕ್‌ನ ತಂದೆ ರವೀಂದ್ರ, ನಾಗೇಶ್ ಹಾಗೂ ಸುಜಿತ್ ಸೇರಿ ಕುಂದಾಪುರದ ವಾರದ ಸಂತೆ ಹಾಗೂ ಕುಂದಾಪುರದ ಪೇಟೆಯಲ್ಲಿರುವ ಅಂಗಡಿಗಳಿಗೆ ತೆರಳಿ ಧನ ಸಂಗ್ರಹಿಸಿದರು. ಅವರಿಗೆ ರಾಘವೇಂದ್ರ ಉಳ್ಳೂರು 74 ಹಾಗೂ ರಾಘವೇಂದ್ರ ಶೆಟ್ಟಿ ಮಡಾಮಕ್ಕಿ ಅವರು ಸಹಕರಿಸಿದರು.
ಕಳೆದ ಎ.10 ರಂದು ಸಹ ಕುಂದಾಪುರದ ವಾರದ ಸಂತೆಯಲ್ಲಿ ತಲೆಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕ ರಿಷಿಕ್ ಆಚಾರ್ಯ ಪಡುಕೋಣೆ ಅವರ ಚಿಕಿತ್ಸೆಗಾಗಿ ಹೊಯ್ಸಳ ಟ್ರಸ್ಟ್ ನಾಡ ನೇತೃತ್ವದಲ್ಲಿ ಬೆಂಕಿ ಮಣಿ ಸಂತು ಅವರು “ಮಹಿಷಾಸುರ’ನ ವೇಷ ಧರಿಸಿ ಕುಂದಾಪುರದ ವಾರದ ಸಂತೆ ಹಾಗೂ ಅಂಗಡಿಗಳಿಗೆ ತೆರಳಿ ಹಣ ಸಂಗ್ರಹಿಸಿದ್ದರು.
ನೆರವಿಗೆ ಮನವಿ:
ವಂಶಿಕ್ ಅವರು ಎರಡು ವರ್ಷವಿದ್ದಾಗಲೇ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಸತತ ಎರಡೂವರೆ ವರ್ಷದ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದ. ಆದರೆ ಈಗ ಮತ್ತೆ ರೋಗ ಉಲ್ಬಣಗೊಂಡಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಿಕಿತ್ಸೆಗೆ ಅಂದಾಜು 10 ಲಕ್ಷ ರೂ. ಆಗಬಹುದು ಎಂದು ವೈದ್ಯರು ತಿಳಿಸಿದ್ದು, ಇವರದು ಬಡ ಕುಟುಂಬವಾಗಿದ್ದು, ಅಷ್ಟೊಂದು ಹಣವನ್ನು ಒಟ್ಟು ಮಾಡಲು ಕಷ್ಟವಾಗಿದ್ದು, ಅದಕ್ಕಾಗಿ ಈ ಕುಟುಂಬವು ಸಹೃದಯಿ ದಾನಿಗಳಿಂದ ನೆರವಿಗಾಗಿ ಮನವಿ ಮಾಡಿಕೊಂಡಿದೆ.
ಬ್ಯಾಂಕ್ ವಿವರ:
ಈ ಬಾಲಕನ ಚಿಕಿತ್ಸೆಗೆ ಮುಂದಾಗುವವರು ತಂದೆಯ ಹೆಸರಲ್ಲಿರುವ ಕೆನರಾ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡಬಹುದು.
ಹೆಸರು: ರವೀಂದ್ರ, ಬ್ಯಾಂಕ್ : ಕೆನರಾ ಬ್ಯಾಂಕ್, ಶಾಖೆ: ನಾವುಂದ, ಖಾತೆ ಸಂಖ್ಯೆ : 01732200124764, ಐಎಫ್‌ಎಸ್‌ಸಿ ಸಂಖ್ಯೆ: ಸಿಎನ್‌ಆರ್‌ಬಿ0010173, ಹೆಚ್ಚಿನ ಮಾಹಿತಿಗೆ – 9108414570 ಸಂಖ್ಯೆಯನ್ನು ಸಂಪರ್ಕಿಸಬಹುದು.